ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭಾರತ ತನ್ನ ಸ್ವಾತಂತ್ರ್ಯ ದಿನದ ವಜ್ರ ಮಹೋತ್ಸವ ಆಚರಿಸಲು ಸಂಭ್ರಮದಿಂದ ಅಣಿಯಾಗಿ ನಿಂತಿದೆ. ಈ ಸಂದರ್ಭದಲ್ಲಿ ನಮ್ಮ ಶಿವಮೊಗ್ಗದ ಪೃಥ್ವಿಗೌಡ ಕ್ರಿಯೇಷನ್ಸ್ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಭಾರತದ ಅಭೂತಪೂರ್ವ ಸ್ವಾತಂತ್ರ್ಯದ ಹೋರಾಟಕ್ಕೆ ರಣಮಂತ್ರವಾದ ಬಂಕಿಮಚಂದ್ರರ ವಂದೇಮಾತರಂ ರಾಷ್ಟ್ರಗಾನವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿರುವ 75 ಅನಿವಾಸಿ ಭಾರತೀಯರು ಹಾಡಲಿದ್ದಾರೆ ಎಂದು ವಿನಯ್ ಶಿವಮೊಗ್ಗ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಅಮೇರಿಕಾದಿಂದ ಹಿಡಿದು ಮಲೇಷಿಯಾದ ತನಕ ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಭಾರತೀಯರು ರಾಷ್ಟ್ರಗಾನವನ್ನು ಹಾಡಿ, ಬರಲಿರುವ 75ನೇ ಸ್ವಾತಂತ್ರ್ಯ ದಿನಕ್ಕೆ ತಮ್ಮ ಗಾನ ನಮನದ ಮೂಲಕ ದೇಶಭಕ್ತಿಯನ್ನು ಮೆರೆದಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದ ಪ್ರತಿಭಾವಂತ ಕಲಾವಿದ ಪೃಥ್ವಿಗೌಡ ಅವರ ವಿನೂತನವಾದ ಈ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಕಲಾವಿದರಾದ ವಿನಯ್ ಶಿವಮೊಗ್ಗ ಜೊತೆಯಾಗಿದ್ದಾರೆ. ಪ್ರತೀ ಬಾರಿ ಕೇಳಿದಾಗಲೂ ಮೈ ನವಿರೇಳುವ ಈ ರಾಷ್ಟ್ರಗಾನಕ್ಕೆ ಸಂಗೀತದ ಶ್ರೀಮಂತಿಕೆಯನ್ನು ನಾಡಿನ ಖ್ಯಾತ ಸಂಗೀತಾ ಕಲಾವಿದರಾದ ದೀಪಕ್ ಜಯಶೀಲನ್ ಹಾಗೂ ವಿಠ್ಠಲ್ ರಂಗದೋಳ್ ನೆರವೇರಿಸಿದ್ದಾರೆ. ಕಾರ್ತಿಕ್ ಚಿನ್ನು ಅವರು ಪ್ರಮೋಷನಲ್ ವಿಡೀಯೋ ಮಾಡಿದ್ದು, ಅವಿನಾಶ್ ಅವರು ಪ್ರಚಾರಕ್ಕಾಗಿ ಪೋಷ್ಟರ್ ತಯಾರಿಸಿ ಸಹಕಾರ ನೀಡಿದ್ದಾರೆ ಎಂದು ವಿವರಿಸಿದರು.
ಇದೇ ಮೊದಲ ಬಾರಿಗೆ 75 ಜನ ಹಾಡಬಲ್ಲ ಅನಿವಾಸಿ ಭಾರತಿಯರನ್ನು ಸಂಪರ್ಕಿಸಿ, ಅವರು ಹಾಡಿದ ವಿಡಿಯೋ ತುಣುಕುಗಳನ್ನು ಸಂಗ್ರಹಿಸಲಾಗಿದೆ. ವಂದೇಮಾತರಂ ಎಂಬ ಸುಂದರವಾದ ಪುಷ್ಪಮಾಲೆಯನ್ನು ತಯಾರು ಮಾಡುವಲ್ಲಿ ಪೃಥ್ವಿಗೌಡ ಮತ್ತು ವಿನಯ್ ಶಿವಮೊಗ್ಗ ಹಗಲಿರುಳು ಪ್ರಯತ್ನಪಟ್ಟಿದ್ದು, ಎಲ್ಲಾ ಅನಿವಾಸಿ ಭಾರತೀಯರ ವಿಡೀಯೋ ತುಣುಕುಗಳನ್ನು ಜೋಡಿಸಿ, ಸಂಸ್ಕರಿಸುವ ಜವಾಬ್ದಾರಿಯನ್ನು ಪೃಥ್ವಿಗೌಡ ಅವರೇ ವಹಿಸಿಕೊಂಡಿದ್ದಾರೆ ಎಂದರು.
ಸುಮಾರು 4:30 ನಿಮಿಷ ಕಾಲಾವಧಿಯ ಈ ವಿಡಿಯೋದಲ್ಲಿ ಅಮೇರಿಕಾ, ಯುರೋಪ್ ದೇಶಗಳು, ಆಸ್ಟ್ರೇಲಿಯಾ, ಅರಬ್ ದೇಶಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ತಮ್ಮ ಧ್ವನಿಯ ಮೂಲಕ ಈ ಕಾರ್ಯದಲ್ಲಿ ನಮ್ಮ ಜೊತೆಯಾಗಿದ್ದಾರೆ ಎಂದರು.
1870ರ ಆಸುಪಾಸಿನಲ್ಲಿ ಬಂಗಾಳದ ಮಹಾಕವಿ ಬಂಕಿಮಚಂದ್ರ ಚಟರ್ಜಿ ಬರೆದ ಈ ವಂದೇಮಾತರಂ ಗೀತೆಗೆ ಈಗ ಸರಿಸುಮಾರು 150 ವರ್ಷ ತುಂಬಿದೆ. ರಾಷ್ಟ್ರಕ್ಕಾಗಿ ಪ್ರಾಣ ತೆತ್ತ ಅಸಂಖ್ಯಾತ ಸ್ವಾತಂತ್ರ್ಯ ವೀರರ ಸ್ಫೂರ್ತಿಯ ಸೆಲೆಯಾಗಿದ್ದ, ವಂದೇಮಾರತಂ ಪ್ರತೀ ಭಾರತೀಯನ ಹೃದಯದಲ್ಲಿ ನೆಲೆಯಾಗಿರುವ ದೇಶಭಕ್ತಿಗೆ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.
75 ಅನಿವಾಸಿ ಭಾರತೀಯರು ಪಾಲ್ಗೊಂಡು ಹಾಡಿರುವ ಈ ವಂದೇಮಾತರಂ ವಿಡೀಯೋ ಆಲ್ಭಂ ಬರುವ ಆಗಸ್ಟ್ 15 ರಂದು ಬೆಳಗ್ಗೆ ಸುಮಾರು 11:30ಕ್ಕೆ ಪೃಥ್ವಿಗೌಡ ಕ್ರಿಯೇಷನ್ಸ್‌ನ ಯೂ ಟ್ಯೂಬ್ ಛಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಪೃಥ್ವಿಗೌಡ: 9986142811, ವಿನಯ್ ಶಿವಮೊಗ್ಗ: 8310876277 ಇವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post