ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಭಾರತವನ್ನು ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಸೇರಿದಂತೆ ಅನೇಕರು ಆಳಿದ್ದಾರೆ, ಸಂಪನ್ಮೂಲಗಳನ್ನು ಹೊತ್ತೊಯ್ದಿದ್ದಾರೆ. ಅದೇ ರೀತಿ ದೇಶವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸಂಪದ್ಭರಿತ ದೇಶವಾಗಿ ನಿರ್ಮಿಸುವತ್ತ ಹೆಜ್ಜೆಯಿಡೋಣ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕುವೆಂಪು ವಿವಿಯು ಧ್ವಜಾರೋಹಣ ಕಾರ್ಯಕ್ರಮದ ನಂತರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಭಾರತವು ಅಹಾರ-ಬೇಳುಕಾಳುಗಳಿಗಾಗಿ ಬೇರೆ ದೇಶಗಳನ್ನು ಆಶ್ರಯಿಸಿತ್ತು. ಹಸಿರು ಕ್ರಾಂತಿ ಮಾಡಿದ ದೇಶ, ಆಹಾರೋತ್ಪನ್ನಗಳನ್ನು ರಫ್ತುಮಾಡುತ್ತಿದ್ದೇವೆ. ದೇಶವು ಸವಾಲುಗಳನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ಮುನ್ನಡೆಯುತ್ತಲಿದೆ. ಆದರೆ ಸಮೃದ್ಧಿ ತಲುಪುವ ಹಾದಿಯತ್ತ ಮತ್ತಷ್ಟು ಬದ್ಧತೆಯಿಂದ, ಯೋಜಿತವಾಗಿ ಹೆಜ್ಜೆಯಿಡುವ ಪಣವನ್ನು 75ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಈ ದಿನ ತೆಗೆದುಕೊಳ್ಳೋಣ ಎಂದರು.
ಸ್ವಾತಂತ್ರ ಪಡೆದಾಗ ಅಲ್ಪಪ್ರಮಾಣದ ಅಕ್ಷರಸ್ಥರು, ಕೆಲವೇ ಶಾಲೆ-ಕಾಲೇಜುಗಳು ಇದ್ದವು. ಇಂದು ಪ್ರತೀ ಜಿಲ್ಲೆಗೊಂದು ವಿವಿ-ಮೆಡಿಕಲ್ ಕಾಲೇಜುಗಳನ್ನು ನಾವು ರೂಪಿಸಿದ್ದೇವೆ. ಅದನ್ನು ಮತ್ತಷ್ಟು ಉಜ್ವಲಮಟ್ಟಕ್ಕೆ ಒಯ್ದು ಎಲ್ಲರನ್ನು ಸುಶಿಕ್ಷಿತರನ್ನಾಗಿ, ಉದ್ಯೋಗಸ್ಥರನ್ನಾಗಿ, ಸುಪ್ರಜೆಗಳನ್ನಾಗಿ ರೂಪಿಸಿ ಸದೃಢ ಭಾರತ ನಿರ್ಮಿಸೋಣ, ಈ ನಿಟ್ಟಿನಲ್ಲಿ ಕಠಿಣ ಹಾದಿ ಕ್ರಮಿಸಲು ಪಣತೊಡೋಣ ಎಂದು ನುಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧೀ, ನೆಹರೂ, ಅಂಬೇಡ್ಕರ್‌ರಷ್ಟೇ ಪ್ರಮುಖವಾಗಿ ನಾವು ಸ್ಥಳೀಯ ನಾಯಕರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ, ಈಸೂರು, ಶಿವಪುರಗಳ ಸ್ವಾತಂತ್ರ ಯೋಧರನ್ನು ನಾವು ನೆನೆದು, ಗೌರವಿಸಬೇಕಿದೆ. ಈ ಸಲುವಾಗಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಡಿ ವರ್ಷವಿಡೀ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಸೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಉನ್ನತ ಶಿಕ್ಷಣ ಪರಿಷತ್ ಕುವೆಂಪು ವಿವಿಗೆ ಜವಾಬ್ದಾರಿ ವಹಿಸಿದೆ ಎಂದರು.


ಭಾರತ ಸೇನೆಯಲ್ಲಿ 15 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಯೋಧರಾದ ನಾಯ್ಕ್ ಬಿ ವೀರಸ್ವಾಮಿ, ನಾಯ್ಕ್ ರಾಜಶೇಖರ್, ನಾಯ್ಕ್ ದಯಾನಂದ್ ಎಂ., ನಾಯ್ಕ್ ಶಿವಾನಂದ ಮೂರ್ತಿ, ದೇವಸಗಾಯಂ ಅವರುಗಳನ್ನು ಸನ್ಮಾನಿಸಲಾಯಿತು.
ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಂ. ತ್ಯಾಗರಾಜ್, ಹಣಕಾಸು ಅಧಿಕಾರಿ ಎಚ್. ರಾಮಕೃಷ್ಣ, ಡಾ. ವೀರೂಪಾಕ್ಷ, ಡಾ. ಪರಿಸರ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















