ಕಲ್ಪ ಮೀಡಿಯಾ ಹೌಸ್
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲೇ ಆರು ದುರುಳರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಉತ್ತರಪ್ರದೇಶ ಮೂಲದವರೆಂದು ಹೇಳಲಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ತೆರಳುತ್ತಿದ್ದ ವೇಳೆ ನಿನ್ನೆ ಸಂಜೆ ಈ ಘಟನೆ ನಡೆದಿದೆ.
ಚಾಮುಂಡಿ ಬೆಟ್ಟದ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ತೆರಳುತ್ತಿದ್ದರು. ಅದೇ ರಸ್ತೆಯಲ್ಲಿ ಮಧ್ಯಪಾನ ಮಾಡಿ ತೆರಳುತ್ತಿದ್ದ ಆರು ನೀಚರು ಇಬ್ಬರನ್ನೂ ಅಡ್ಡಗಟ್ಟಿ ಬಹಳಷ್ಟು ಹಿಂಸೆ ನೀಡಿದ್ದಾರೆ. ಯುವತಿಯ ಸ್ನೇಹಿತನನ್ನು ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಎದುರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸದ್ಯ ಯುವತಿ ಹಾಗೂ ಆಕೆಯ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸರು ಭೇಟಿ ನೀಡಿ, ಸಾಕ್ಷ್ಯ ಸಂಗ್ರಹಿಸಿ ಐದು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮುಖ್ಯಮಂತ್ರಿಗಳು ಹೇಳಿದ್ದೇನು?
ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಘಟನೆ ಬಗ್ಗೆ ತಿಳಿದು ತುಂಬಾ ಬೇಸರವಾಗಿದೆ. ಈ ಬಗ್ಗೆ ಡಿಜಿಪಿ ಅವರೊಂದಿಗೆ ಮಾತನಾಡಿದ್ದು, ಆರೋಪಿಗಳನ್ನು ತತಕ್ಷಣ ಬಂಧಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಘಟನೆ ಬಗ್ಗೆ ಗೃಹಸಚಿವರು ಹೇಳಿದ್ದೇನು?
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಇದೊಂದು ನಡೆಯ ಬಾರದಿದ್ದ ದುರಂತ ಘಟನೆ. ಸಂತ್ರಸ್ತೆ ಈಬಗ್ಗೆ ಏನು ಹೇಳುವ ಸ್ಥಿತಿಯಲ್ಲಿಲ್ಲ. ಆಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತರಾಗಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳು ಯಾರೇ ಆಗಿದ್ದರೂ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಈವರೆಗೆ ಯಾವುದೇ ಸಾಕ್ಷಿ ದೊರೆತಿಲ್ಲ. ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದೇನೆ. ನಾಳೆ ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಘಟನೆ ಖಂಡಿಸಿ ಮೈಸೂರಿನ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಲಾಗುತ್ತಿದ್ದು, ಐಜಿಪಿ ಪ್ರವೀಣ್, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post