ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಗೋಪಾಲಗೌಡ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳು ಅಭಿವೃದ್ಧಿ ಹೊಂದುತ್ತಿರುವ ಅವಳಿ ಬಡಾವಣೆಗಳಾಗಿದ್ದು ಪ್ರಸ್ತುತ ಇಲ್ಲಿ ಹಗಲು ದರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿವೆ ಇದಕ್ಕೆ ಕಡಿವಾಣ ಹಾಕುವಂತೆ ಬಡಾವಣೆಯ ನಿವಾಸಿ ಜಿಲ್ಲಾರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರದೇಶದಲ್ಲಿ ಹೆಚ್ಚಾಗಿ ನೌಕರರು, ನಿವೃತ್ತ ನೌಕರರು, ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ವಾಸಿಸುತ್ತಿದ್ದು, ಸಾಮಾನ್ಯವಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವುದು ಇಲ್ಲಿನ ನಿವಾಸಿಗಳ ಅಭ್ಯಾಸ. ಆದರೆ ಇತ್ತೀಚಿನ ದಿನಗಳಲ್ಲಿ ವಾಯುವಿಹಾರಕ್ಕೆ ಹೋಗುವ ಹಾಗೂ ತಮ್ಮ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ಬರುವ ಒಂಟಿ ವ್ಯಕ್ತಿಗಳನ್ನು ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅವರಿಂದ ಒಡವೆ, ಹಣ, ಮೊಬೈಲ್ ಮುಂತಾದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುವ ಘಟನೆಗಳು ಹೆಚ್ಚಾಗಿ ನಡೆಯುತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಡಾವಣೆಯ ನಿವಾಸಿಗಳು ಭಯಭೀತರಾಗಿ ಓಡಾಡುವಂತಾಗಿದೆ. ಜೊತೆಗೆ ಬೀಗ ಹಾಕಿರುವ ಮನೆಗಳ ಬಾಗಿಲು ಮುರಿದು ದೋಚುವ, ಮನೆ ಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ನಿವಾಸಿಗಳು ಅತ್ಯಂತ ಆತಂಕದಿಂದ ಜೀವಿಸುವಂತಾಗಿದೆ. ಪಾರ್ಕ್‌ಗಳು, ಖಾಲಿ ನಿವೇಶನಗಳು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಗಾಂಜಾ ಮದ್ಯ ಸೇವನೆಯ ಅಡ್ಡಾಗಳಾಗಿವೆ ಎಂದು ಹೇಳಲಾಗಿದೆ.
ದುರಸ್ತಿಯಲ್ಲಿರುವ ಬೀದಿ ದೀಪಗಳು ಹಾಗೂ ರಸ್ತೆಯ ಇಕ್ಕೆಲುಗಳಲ್ಲಿ ದಟ್ಟವಾಗಿ ಬೆಳೆದ ಗಿಡಗಂಟಿಗಳು ಅಪರಾಧ ಚಟುವಟಿಕೆ ಎಸಗುವವರಿಗೆ ವರದಾನವಾಗಿದ್ದು, ಇಂತಹ ಅವಕಾಶಗಳನ್ನು ಬಳಸಿಕೊಂಡ ದುಷ್ಕರ್ಮಿಗಳು ನಿರಾತಂಕವಾಗಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ನಡೆದಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮನವಿ ಮಾಡಿದರೂ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ. ಮತ್ತೆ ಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಭಯಭೀತರಾಗಿದ್ದಾರೆ. ಆದ್ದರಿಂದ ಈ ಗಂಭೀರ ಪ್ರಕರಣಗಳ ಬಗ್ಗೆ ಸೂಕ್ತ ಗಮನಹರಿಸಿ ದುಷ್ಕೃತ್ಯವೆಸಗಿರುವವರನ್ನು ಪತ್ತೆ ಹಚ್ಚಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಕೊಡಿಸಬೇಕೆಂದು ವಿನಂತಿಸಲಾಗಿದೆ.
ಈ ಭಾಗದಲ್ಲಿ ನಡೆದ ಪತ್ತೆಯಾಗದ ಪ್ರಕರಣಗಳನ್ನು ಪತ್ತೆಹಚ್ಚಿ, ನೊಂದ ನಿವಾಸಿಗಳಿಗೆ ನ್ಯಾಯ ಒದಗಿಸಬೇಕಾಗಿ ಹಾಗೂ ನಿವಾಸಿಗಳು ನಿರ್ಭಯವಾಗಿ ವಾಸಿಸುವಂತಹ ವಾತಾವರಣ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿ.ಡಿ. ಮಂಜುನಾಥ್, ಎಚ್.ಎಂ. ಸತ್ಯನಾರಾಯಣ, ಎಸ್.ಸಿ. ರಾಮಚಂದ್ರ, ಎಂ. ರಾಮಪ್ಪಗೌಡ, ಆರ್. ರಾಜಶೇಖರ್, ಟಿ.ಡಿ. ಜಿತೇಂದ್ರಗೌಡ, ರುದ್ರಮುನಿ ಸಜ್ಜನ್, ಮೋಹನ್ ಮೂರ್ತಿ, ಲಿಂಗರಾಜು, ವೆಂಕಟೇಶ್, ಡಾ. ಗೌತಮ್, ರಾಜ್ ಕುಮಾರ್, ಕೃಷ್ಣಮೂರ್ತಿ, ರಾಘು ಕೆ. ಗೌಡ, ಚಂದ್ರಶೇಖರ್, ಟಿ.ಎಂ. ನಾಗೇಂದ್ರ, ಅಜ್ಜಪ್ಪ, ಶಿವಶಂಕರ್, ಸತೀಶ್, ಯಜಮಾನ್, ವಿಜಯಕುಮಾರ್, ಮಹೇಶ್, ಬಸವರಾಜ ಕಲಿ, ವಿಷ್ಣುಮೂರ್ತಿ ಜಾತ್ರಾ, ಶಿವಮೂರ್ತಿ, ಆದಿಮೂರ್ತಿ, ಅನುಸೂಯಮ್ಮ, ಶ್ರುತಿ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post