ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾಲ್ಯಮಾಪನ, ಮರುಮೌಲ್ಯಮಾಪನ ಪ್ರಕ್ರಿಯೆ ಹಾಗೂ ಬಹುತೇಕ ಕುಂದುಕೊರತೆಗಳಿಗೆ ಸಂಬಂಧಪಟ್ಟಂತೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಿರುದ್ಧ ಸದರಿ ಉಚ್ಛನ್ಯಾಯಾಲಯದಲ್ಲಿ 644 ಪ್ರಕರಣಗಳು ದಾಖಲಾಗಿದ್ದು, ತಜ್ಞರ ಸಮಿತಿ ನೇತೃತ್ವದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಎನ್‌ಎಸ್‌ಯುಐ ರಾಜ್ಯಕಾರ್ಯದರ್ಶಿ ಸಂಜಯ್‌ರಾಜ್ ಆಗ್ರಹಿಸಿದ್ದಾರೆ.

ಎನ್‌ಎಸ್‌ಯುಐ ಕರ್ನಾಟಕ ಘಟಕದ ಗಮನಕ್ಕೆ ಬಂದಂತೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅನೇಕ ಮೊಕದ್ದಮೆಗಳು ದಾಖಲಾಗಿವೆ. ಸದರಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅನೇಕ ಕುಂದುಕೊರತೆಗಳ ಬಗ್ಗೆ ವಿಶ್ವವಿದ್ಯಾಲಯದ ವಿರುದ್ಧ ಉಚ್ಚನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬಹುತೇಕ ಕುಂದುಕೊರತೆಗಳು ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನದ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದ್ದು, 2021ರಲ್ಲಿ ವಿಶ್ವವಿದ್ಯಾಲಯದ ವಿರುದ್ಧವಾಗಿ ಉಚ್ಚನ್ಯಾಯಾಲಯದ ಪ್ರಧಾನ ಪೀಠ ಒಂದರಲ್ಲೇ ಸರಿಸುಮಾರು 644 ಪ್ರಕರಣಗಳು ದಾಖಲಾಗಿರುತ್ತದೆ. ಈ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ವಿಶ್ವವಿದ್ಯಾಲಯದ ಆಡಳಿತ ವೈಖರಿಯಲ್ಲಿಯೇ ಆಳವಾದ ಸಮಸ್ಯೆಯಿರುವುದು ಕಂಡುಬರುತ್ತದೆ. ಇದರಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ ಮಾರ್ಗದಲ್ಲಿ ಮಹತ್ತರ ಸುಧಾರಣೆಯ ಅಗತ್ಯವಿದೆ ಎಂಬುದು ತಿಳಿದುಬರುತ್ತದೆ ಎಂದು ಹೇಳಿದ್ದಾರೆ.


ವಿಶ್ವವಿದ್ಯಾಲಯಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಧ್ಯಾದೇಶಗಳನ್ನು ಆಡಳಿತಾತ್ಮಕವಾಗಿ ಮರುವಿನ್ಯಾಸಗೊಳಿಸುವುದಕ್ಕೆ ಇದು ಸಕಾಲವಾಗಿದೆ. ಮತ್ತು ಇದರಿಂದಾಗಿ ತಕರಾರುಗಳನ್ನು ಕಡಿಮೆ ಮಾಡಬಹುದು ಎಂಬುದಾಗಿ ವಿಶ್ವಾಸ ಹೊಂದಿದ್ದು, ಅಧ್ಯಾದೇಶಗಳನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ತಜ್ಞರ ಸಮಿತಿಯು ಕೈಗೊಳ್ಳಬೇಕಿದೆ ಎಂದಿದ್ದಾರೆ.

ಸದರಿ ತಜ್ಞರ ಸಮಿತಿಯಲ್ಲಿ ಕಾನೂನುತಜ್ಞರು, ವೈದ್ಯಕೀಯ ವೃತ್ತಿತಜ್ಞರು ಮತ್ತು ಶಿಕ್ಷಣತಜ್ಞರು ಇರಬೇಕು. ಹಾಗೂ ತಜ್ಞರ ಸಮಿತಿಯು ತನ್ನ ಕರ್ತವ್ಯ ನಿರ್ವಹಿಸುವಾಗ ವಿಶ್ವವಿದ್ಯಾಲಯದ ವಿರುದ್ಧ ಸಲ್ಲಿಸಲಾಗಿರುವ ವಿವಿಧ ರೀತಿಯ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚನ್ಯಾಯಾಲಯವು ಇಂದಿನವರೆಗೂ ನೀಡಿರುವ ಎಲ್ಲಾ ನಿರ್ದೇಶನಗಳನ್ನೂ ಪರಿಗಣಿಸಬೇಕಿದೆ. ಇದರಿಂದಾಗಿ ಬಹಳ ಕಾಲದಿಂದ ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















