ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಂಸ್ಕೃತಿಕ ನಗರ ಶಿವಮೊಗ್ಗ ತನ್ನ ಒಡಲಲ್ಲಿ ಹಲವಾರು ಪ್ರತಿಭೆಗಳನ್ನು ಬಚ್ಚಿಟ್ಟುಕೊಂಡಿದೆ. ಇಲ್ಲಿ ಕೇವಲ ಕವಿಗಳು, ಸಾಹಿತಿಗಳು, ಹೋರಾಟಗಾರರು, ಚಿಂತಕರು, ಪ್ರಗತಿಪರರು, ಪತ್ರಕರ್ತರು ಮಾತ್ರವಲ್ಲ, ಇನ್ನೂ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಅದ್ಭುತ ವ್ಯಕ್ತಿಗಳಿದ್ದಾರೆ. ಅಂತಹ ಪ್ರತಿಭೆಗಳಲ್ಲಿ ಎಚ್. ಖಂಡೋಬರಾವ್ ಅವರೂ ಕೂಡ ಒಬ್ಬರು.
ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಠಿ ಮಾಡಲಾರ ಎಂಬ ಮಾತೊಂದಿದೆ. ಇದಕ್ಕೆ ಪೂರಕವೆಂಬಂತೆ ಎಚ್. ಖಂಡೋಬರಾವ್ ಅವರು ಇತಿಹಾಸ ಉಪನ್ಯಾಸಕರಾಗಿ ಹಲವು ವರ್ಷಗಳ ಕಾಲ ರಾಷ್ಟ್ರೀಯ ಶಿಕ್ಷಣ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಯೇ ಒಂದು ವಿಸ್ಮಯ. ಅವರನ್ನು ಪರಿಚಯ ಮಾಡಿಕೊಡುವುದು ಅಷ್ಟು ಸುಲಭವಲ್ಲ, ಅವರು ಕೇವಲ ಒಬ್ಬ ವ್ಯಕ್ತಿಯಲ್ಲ. ಸಾಂಸ್ಕೃತಿಕ ಶಕ್ತಿ. ಅವರನ್ನು ಅವರ ವಿವಿಧ ಆಯಾಮಗಳನ್ನು ಸ್ವಲ್ಪ ಭಾಗ ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶವಾಗಿದೆ.
ಎಚ್. ಖಂಡೋಬರಾವ್ ಬಹಳ ಮುಖ್ಯವಾಗಿ ಗುರುತಿಸಿಕೊಂಡಿರುವುದು ನಾಣ್ಯ ಸಂಗ್ರಹಣೆಕಾರರಾಗಿ. ಮತ್ತು ಐತಿಹಾಸಿಕ ಪುಸ್ತಕಗಳ ರಚನೆ. ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದಲ್ಲಿ ಅವರು ನಿರ್ಮಿಸಿದ ಅಮೂಲ್ಯಶೋಧ ಕೇಂದ್ರ ಅವರ ಬದುಕಿನ ಯಶಸ್ಸಿನ ಯಶೋಗಾಥೆಯೇ ಆಗಿದೆ. ಶಿವಮೊಗ್ಗದ ಷಹಜಹಾನ್ ಎಂದೇ ಕರೆಯಲ್ಪಡುವ ಖಂಡೋಬರಾವ್ ತಮ್ಮ ಪತ್ನಿಯ ಯಶೋಧಾ ಅವರ ನೆನಪಿಗಾಗಿ ಒಂದು ಅಪರೂಪದ ವಸ್ತು ಸಂಗ್ರಹಾಲಯವನ್ನು ಅವರು ಸ್ಥಾಪಿಸಿದ್ದಾರೆ. ಅದು ಎಷ್ಟು ಪ್ರಸಿದ್ಧಿಯಾಗಿದೆ ಎಂದರೆ ಅದೊಂದು ಪ್ರವಾಸಿ ತಾಣವೇ ಆಗಿದೆ. ಸಂಶೋಧಕರು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಇತಿಹಾಸ ತಜ್ಞರು, ಕಲಾರಸಿಕರು ಎಲ್ಲರೂ ಭೇಟಿಯಾಗಿ ಅವರ ಅಮೂಲ್ಯ ಶೋಧವನ್ನು ತಮ್ಮ ತಮ್ಮ ಮನಸ್ಸಿನ ಆಳಕ್ಕೆ ಎಷ್ಟು ಬೇಕೋ ಅಷ್ಟನ್ನು ಶೋಧ ಮಾಡಬಹುದಾಗಿದೆ.
ಇವರ ಅಮೂಲ್ಯಶೋಧ ಸ್ಥಾಪಿಸಲು ಕಾರಣವನ್ನು ಸ್ವಲ್ಪದರಲ್ಲೇ ಹೇಳಬೇಕೆಂದರೆ, ಖಂಡೋಬರಾವ್ ಅವರ ಪತ್ನಿ ಯಶೋದಾ ಖಂಡೋಬರಾವ್ ಕೂಡ ಎಂಎ ಪದವಿ ಪಡೆದು ಕಮಲಾ ನೆಹರೂ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಕೆಲಸ ಮಾಡಿ ನಿವೃತ್ತರಾದವರು. ಖಂಡೋಬರಾವ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸುಮಾರು 8 ವರ್ಷಗಳ ಕಾಲ ಅವರ ಪ್ರೇಮ ಮುಂದುವರೆದು ಕೊನೆಗೆ ಮದುವೆಯಲ್ಲಿ ಯಶಸ್ವಿಯಾಗಿತು.
ಖಂಡೋಬರಾವ್ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಕಷ್ಟ, ಸುಖ, ಓದು, ಬರೆಹ, ಉಪನ್ಯಾಸಕ ವೃತ್ತಿ ಇವುಗಳ ಮಧ್ಯೆಯೇ ಅವರಿಗೆ ಇಬ್ಬರು ಮಕ್ಕಳಾದರು. ತುಂಬ ಕಷ್ಟದಲ್ಲಿದ್ದ ಅವರು ಹೇಗೋ ಒಂದು ಮನೆಯನ್ನು ಮಾಡಿಕೊಂಡು ಮಕ್ಕಳೊಡನೆ ಸಂತೋಷದಿಂದ ಕಾಲ ಕಳೆಯುತ್ತಿರುವಾಗಲೇ ಅವರ ಬಾಳಿನಲ್ಲಿ ಒಂದು ಬಹುದೊಡ್ಡ ಆಘಾತ ಉಂಟಾಗಿತ್ತು. ಪತ್ನಿ ಯಶೋಧಾ ಅವರಿಗೆ ಮೂತ್ರಪಿಂಡದ ತೊಂದರೆ ಶುರುವಾಯಿತು. ಕೊನೆಗೆ ಖಂಡೋಬರಾವ್ ಅವರೇ ಒಂದು ಮೂತ್ರಪಿಂಡವನ್ನು ತಮ್ಮ ಪತ್ನಿಗೆ ದಾನ ಮಾಡಿ ಕಿಡ್ನಿ ಬದಲಾವಣೆ ಮಾಡಿಸಿದರು.
ಅನಂತರ ಯಶೋಧಾ ಅವರು ಚೇತರಿಸಿಕೊಂಡು ಉಪನ್ಯಾಸ ವೃತ್ತಿಯನ್ನು ಮುಂದುವರೆಸಿ 2004 ರಲ್ಲಿ ನಿವೃತ್ತಿಯಾದರು. ಆ ನಂತರವೇ ಯಶೋಧಾ ಅವರ ಆರೋಗ್ಯ ಹದಗೆಟ್ಟು ಅವರು ವಿದಿವಶರಾದರು. ಪತ್ನಿ ವಿಧಿವಶರಾದ ನಂತರ ಖಂಡೋಬರಾವ್ ಅವರಿಗೆ ಏನು ಮಾಡಬೇಕೆಂಬುದೇ ಗೊತ್ತಾಗಲಿಲ್ಲ. ಅವರು ಕೂಡ ನಿವೃತ್ತರಾಗಿದ್ದರು. ಆವಾಗಲೇ ಅವರ ತಲೆಯಲ್ಲಿ ಹೊಳೆದಿದ್ದು ಹೆಂಡತಿಯ ಹೆಸರಿನಲ್ಲಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಬೇಕು ಎಂಬುದು. ನೆನಪು ಎಂಬ ಹೆಸರಿನಲ್ಲಿ ಒಂದು ಐತಿಹಾಸಿಕ ತೀರ್ಮಾನ ತೆಗೆದುಕೊಂಡ ರಾವ್ ಅವರು 2015 ರಲ್ಲಿ ಹೊಸ ಕಟ್ಟಡಕ್ಕೆ ಮುಹೂರ್ತ ಮಾಡಿದರು. ಆಗ ಅವರಿಗಾಗಲೇ 75 ವರ್ಷವಾಗಿತ್ತು.
ವಸ್ತು ಸಂಗ್ರಹಾಲಯ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಹಣದ ಅವಶ್ಯಕತೆ ತುಂಬಾ ಇತ್ತು. ಸುಮಾರು 2 ಕೋಟಿ ರೂ. ಹಣ ಬೇಕಾಗಿತ್ತು. ಆದರೆ, ತಮ್ಮ ಪತ್ನಿಯ ಮೇಲಿನ ಅಪಾರ ಪ್ರೀತಿ, ಆತ್ಮ ವಿಶ್ವಾಸ, ನಾಣ್ಯ ಮತ್ತು ವಸ್ತು ಸಂಗ್ರಹಣೆಯಲ್ಲಿ ತೊಡಗಿದ್ದ ಅವರ ಸಾಧನೆ ಆಗ ಸರ್ಕಾರದ ಪರವಾಗಿ ಅಂದಿನ ಎಂ.ಎಲ್.ಸಿ. ಕೆ.ಎಸ್. ಈಶ್ವರಪ್ಪ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಸಹಕಾರದೊಂದಿಗೆ ಮತ್ತು ಸಾರ್ವಜನಿಕರ ಒಂದಿಷ್ಟು ದೇಣಿಗೆ ಮತ್ತು ಪತ್ನಿ ಯಶೋಧಾ ಅವರ ಹೆಸರಿನಲ್ಲಿದ್ದ 4 ನಿವೇಶನ ಮಾರಿ ಕೊನೆಗೂ ಸನಾತನ ಸಂಸ್ಕೃತಿಯ ಕೇಂದ್ರ ಅಮೂಲ್ಯಶೋಧ ಎಂಬ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಮಾಡಿಯೇಬಿಟ್ಟರು.
ಅಮೂಲ್ಯಶೋಧದಲ್ಲಿ ಏನಿದೆ?
ಅಮೂಲ್ಯಶೋಧದಲ್ಲಿ ಪ್ರಮುಖವಾಗಿ ಮೂರು ಭಾಗಗಳಿವೆ. ನಾಣ್ಯ ದರ್ಶಿನಿ, ಮಲೆನಾಡು ದರ್ಶಿನಿ, ಭಾರತ ದರ್ಶಿನಿ ಎಂದು. ಈ ಮೂರು ವಿಭಿನ್ನವಾಗಿವೆ. ನಾಣ್ಯ ದರ್ಶಿನಿಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳ ನೋಟು ಮತ್ತು ನಾಣ್ಯಗಳ ಸಂಗ್ರಹ ಅಲ್ಲಿದೆ. ಇತಿಹಾಸದಲ್ಲಿ ಆಳಿದ ರಾಜ ಮಹಾರಾಜರ ನಾಣ್ಯಗಳೂ ಅಲ್ಲಿವೆ. ಎಷ್ಟು ಹಳೆಯ ಕಾಲದ ನಾಣ್ಯ ಎಂದರೆ ಸುಮಾರು 2500 ವರ್ಷಗಳಷ್ಟು ಹಳೆಯ ನಾಣ್ಯಗಳು ಮತ್ತು ಭಾರತದ ಹಳೆಯ ನಾಣ್ಯಗಳಿವೆ. ಬೆಳ್ಳಿ, ಚಿನ್ನ, ತಾಮ್ರ ಇವೆಲ್ಲವೂ ಇವೆ. ನಂತರ ಭಾರತದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರದ ನೋಟುಗಳು ಅವರ ಸಂಗ್ರಹದಲ್ಲಿವೆ. ವಿಶೇಷ ಎಂದರೆ ತಪ್ಪು ಮುದ್ರಿತ ನೋಟುಗಳನ್ನು ಕೂಡ ಅವರು ಸಂಗ್ರಹಿಸಿದ್ದಾರೆ. ಆ ನಾಣ್ಯಗಳನ್ನು, ನೋಟುಗಳನ್ನು ನೋಡುತ್ತಾ ಹೋದರೆ ಒಂದು ಇತಿಹಾಸವೇ ತೆರೆದುಕೊಳ್ಳುತ್ತದೆ.
ಮತ್ತೊಂದು ಭಾಗವಾದ ಮಲೆನಾಡು ದರ್ಶಿನಿಯಲ್ಲಿ ಕರ್ನಾಟಕದ ಸಂಸ್ಕೃತಿಯೇ ಅಡಗಿದೆ. ಅಲ್ಲೊಂದು ಜಾನಪದ ಲೋಕವೇ ತೆರೆದುಕೊಳ್ಳುತ್ತದೆ. ಮಲೆನಾಡಿನ, ಬಯಲುಸೀಮೆಯ ಜನರ ಜೀವನ ಹೇಗಿತ್ತು? ಅವರ ಆಚಾರ, ವಿಚಾರಗಳು ಹೇಗಿದ್ದವು? ಅವರು ಬಳಸುತ್ತಿದ್ದ ಉಡುಗೆ, ತೊಡುಗೆ, ಮರದ ಉಪಕರಣ, ಪಾತ್ರೆ, ಪರಡಿಗಳು, ತಾಂಬೂಲ ಪೆಟ್ಟಿಗೆ, ಅಡಿಕೆ ಕತ್ತರಿ ಅಷ್ಟೇ ಏಕೆ? ಸುಣ್ಣದ ಡಬ್ಬಿಯಿಂದ ಹಿಡಿದು ವಸ್ತುಗಳು ಅವರ ಸಂಗ್ರಹದಲ್ಲಿವೆ. ಇವೆಲ್ಲವನ್ನು ಅತ್ಯಂತ ಜೊಪಾನದಿಂದ ಖಂಡೋಬ ರಾವ್ ಸಂಗ್ರಹಿಸಿ ಜೊಡಿಸಿದ್ದಾರೆ. ಇನ್ನೂ ವಿಶೇಷ ಎಂದರೆ, ಇಡೀ ಮಲೆನಾಡು ದರ್ಶಿನಿಯನ್ನು ಕೆಳದಿ ನಾಯಕರ ಶಿವಪ್ಪನಾಯಕರ ಅರಮನೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಇದರ ಜೊತೆಗೆ ಭಾರತ ದರ್ಶಿನಿ ಎಂಬ ವಿಭಾಗವಿದ್ದು, ಈ ವಿಭಾಗದಲ್ಲಿ ಕರ್ನಾಟಕ ಹಾಗೂ ಭಾರತದಲ್ಲಿ ನಮ್ಮ ಪೂರ್ವಿಕರು ಉಪಯೋಗಿಸುತ್ತಿದ್ದ, ರಾಜ ಮಹಾರಾಜರು ಬಳಸುತ್ತಿದ್ದ ಕತ್ತಿ, ಭರ್ಜಿ, ಗುರಾಣಿ ಇವೆ. ವಿಕ್ಟೊರಿಯಾ ರಾಣಿಯ ಕಾಲದ ವಿಶೇಷ ಕತ್ತಿಗಳು ಇವರ ಸಂಗ್ರಹದಲ್ಲಿವೆ. ಇದರ ಜೊತೆಗೆ ವಿಗ್ರಹಗಳು, ಕಂಚಿನ ಪ್ರತಿಮೆಗಳು, ವಿಶೇಷ ಬೀಗಗಳು, ವಿವಿಧ ಪಾತ್ರೆ ಪರಡಿಗಳು, ಅಳತೆ ಮತ್ತು ತೂಕದ ಪರಿಕರಗಳು, ರಾಜರ ಕಾಲದ ಉಡುಪುಗಳು ಇವರ ಸಂಗ್ರಹದಲ್ಲಿ ಇಂದಿಗೂ ರಾರಾಜಿಸುತ್ತಿವೆ.
ಇನ್ನೊಂದು ಅದ್ಭುತ ಅವರ ವಸ್ತು ಸಂಗ್ರಹಾಲಯದಲ್ಲಿದೆ. ಸುಮಾರು 120 ವರ್ಷಗಳ ಹಿಂದೆ ತಯಾರಾಗಿದ್ದ ಗ್ರಾಮಾಫೋನ್ ವೊಂದು ಈಗಲೂ ವಿದ್ಯುತ್ ನೆರವಿಲ್ಲದೇ ಹಾಡುತ್ತದೆ. ಇದರ ಜೊತೆಗೆ ವಿವಿಧ ಗ್ರಾಮಾಫೋನ್ ಗಳು, ರೇಡಿಯೋಗಳು ಟೇಪ್ ರೆಕಾರ್ಡರ್’ಗಳು, ಸಂಗೀತ ವಾದ್ಯಗಳು, ಕ್ಯಾಮೆರಾಗಳು, ಕೊಂಬು, ಕಹಳೆ, ನಗಾರಿಗಳು, ಪಂಚಲೋಹದ ಅಪರೂಪದ ಚೌಡಿಕೆ ಇವೆಲ್ಲವನ್ನು ಅತ್ಯಂತ ಜೋಪಾನದಿಂದ ಖಂಡೋಬರಾವ್ ಮಾಡಿದ್ದಾರೆ.
ಅದಕ್ಕೆ ಹೇಳಿದ್ದು ಖಂಡೋಬರಾವ್ ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಮಾಡಿದ್ದಾರೆ. ಇದೊಂದು ಅದ್ಭುತ ವಸ್ತು ಸಂಗ್ರಹಾಲಯವಾಗಿದೆ. ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಕೂಡ ಈ ಅಮೂಲ್ಯ ಶೋಧ ಹೆಸರು ಮಾಡಿದೆ. ಇದು ನಮ್ಮ ರಾಷ್ಟ್ರದಲ್ಲೇ ಎರಡನೆಯ ವೈಯಕ್ತಿಕವಾದ ಅದ್ಭತ ವಸ್ತು ಸಂಗ್ರಹಾಲಯವಾಗಿದೆ. ಇದರ ಜೊತೆಗೆ ಅಲ್ಲೊಂದು ನೆನಪು ಸಭಾಂಗಣವನ್ನು ಕೂಡ ಅವರು ನಿರ್ಮಿಸಿದ್ದು, ಅದೊಂದು ಸನಾತನ ಸಂಸ್ಕೃತಿಯ ಕುಟೀರದಂತಿದೆ. ಅಲ್ಲಿ ಆಗಾಗ ಸಂವಾದ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಒಟ್ಟಾರೆ, ಅಮೂಲ್ಯ ಶೋಧ ಖಂಡೋಬರಾವ್ ಅವರ ಯಶೋಗಾಥೆಯಾಗಿದೆ. ಯಶೋಧಾಳ ಗಾಥೆಯೂ ಆಗಿದೆ.
ಎಚ್. ಖಂಡೋಬರಾವ್ ಎಂದಾಕ್ಷಣ ಅವರೋರ್ವರು ಇತಿಹಾಸ ಸಂಶೋಧಕರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರು, ಅಮೂಲ್ಯ ಶೋಧದ ನಿರ್ಮಾತೃಗಳು, ಹಾಗೆಯೇ ಪುರಾತನ ಕಾಲದ ನಾಣ್ಯಗಳ ಮಾಹಿತಿ ಬಲ್ಲವರು, ಹೀಗೆ ನಮ್ಮ ಮನದಾಳದಲ್ಲಿ ಮೂಡುವುದು ಸಹಜ. ಆದರೆ ಅದಕ್ಕೆಲ್ಲ ಮಿಗಿಲಾಗಿ ಅವರೊಬ್ಬ ಮಾನವೀಯತೆ ಮೆರೆಯುತ್ತಿರುವ ಹೃದಯವಂತಿಕೆ ವ್ಯಕ್ತಿತ್ವ ಹೊಂದಿದವರು ಎಂಬುದು ನಿಜಕ್ಕೂ ಸತ್ಯ. ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಕೈಲಾದ ನೆರವು ಕಲ್ಪಿಸಿದ್ದಾರೆ. ನಾಣ್ಯ ಸಂಗ್ರಾಹಕರಿಗೆ ತಮ್ಮಲ್ಲಿರುವ ಹೆಚ್ಚುವರಿ ಅಪೂರ್ವ ನಾಣ್ಯಗಳನ್ನು ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದಕ್ಕಿಂತ ಮಿಗಿಲಾದ ವಿಶೇಷ ಎಂದರೆ ವಿದ್ಯಾರ್ಥಿನಿಯರ ಪಾಲಿಗೆ ಸರಸ್ವತಿ ಸ್ವರೂಪರಾಗಿದ್ದ ತಮ್ಮ ಪತ್ನಿ ಯಶೋಧಾ ಮೇಡಂ ಅವರನ್ನು ಉಳಿಸಿಕೊಳ್ಳುವಲ್ಲಿ ತಮ್ಮ ಒಂದು ಕಿಡ್ನಿಯನ್ನೇ ತ್ಯಾಗ ಮಾಡಿದ್ದಾರೆ. ತಾವೇ ಸ್ವತಃ ಡಯಾಲಿಸಿಸ್ ಅಭ್ಯಸಿಸಿ ಪ್ರತಿನಿತ್ಯ ತಮ್ಮ ಪತ್ನಿಯ ಸೇವೆ ಮಾಡಿದ್ದಾರೆ. ಅಂದರೆ ಈ ದಂಪತಿಗಳ ದಾಂಪತ್ಯ ಜೀವನ ಹೇಗಿತ್ತು? ಎಷ್ಟು ಅನ್ಯೋನ್ಯವಾಗಿತ್ತು ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ. ತಮ್ಮ ಪತ್ನಿ ಯಶೋಧಾ ಮೇಡಂ ನಿಧನಾ ನಂತರ ಅಪಾರ ನೋವು ಅನುಭವಿಸಿದ್ದ ಖಂಡೋಬರಾಯರು ಅವರ ನೆನಪಿನಲ್ಲೇ ಲಕ್ಕಿನಕೊಪ್ಪ ಬಳಿ ಇದ್ದ ತಮ್ಮ ಫಲವತ್ತಾದ ಜಮೀನನ್ನು ಬಳಸಿ ಅಲ್ಲಿ ಐತಿಹಾಸಿಕ ಅಮೂಲ್ಯ ಶೋಧ’ ವಸ್ತು ಸಂಗ್ರಹಾಲಯ ನಿರ್ಮಿಸಿ ಹೃದಯವಂತಿಕೆಯ ಪತ್ನಿ ಯಶೋದಾ ಮೇಡಂ ಅವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿದ್ದಾರೆ. ಆ ಮೂಲಕ ಆಧುನಿಕ ಷಹಜಹಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ಇದೀಗ ಅಮೂಲ್ಯ ಶೋಧ ನೋಡುಗರ ಕಣ್ಮನ ಸೆಳೆಯುತ್ತಿದೆ. ಭಾನುವಾರವಂತೂ ಇಲ್ಲಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಅಲ್ಲಿರುವ ಪುರಾತನ ಕಾಲದ ವಸ್ತುಗಳನ್ನು ವೀಕ್ಷಿಸುತ್ತಿದ್ದಾರೆ. ವಿಶೇಷ ಎಂದರೆ ಮಹಾತ್ಮ ಗಾಂಧೀಜಿಯವರ ಮೊಮ್ಮಗ ರಾಜ್ ಮೋಹನ್ ಗಾಂಧಿ ಅವರು ಭೇಟಿ ನೀಡಿ ವಸ್ತು ಸಂಗ್ರಹಾಲಯದ ಬಗ್ಗೆ ಖಂಡೋಬರಾಯರನ್ನು ಶ್ಲಾಘಿಸಿದ್ದಾರೆ. ಖಂಡೋಬರಾಯರು, ನಾಣ್ಯಗಳ ಇತಿಹಾಸ ಹೇಳುತ್ತಾ ಹೋದರೆ ಕೇಳುಗರು ತಾವೆಲ್ಲೋ ರಾಜಮಹಾರಾಜರ ಕಾಲದಲ್ಲೋ ಅಥವಾ ಗತಕಾಲದಲ್ಲೋ ಇದ್ದೇವೆ ಎಂಬ ಭ್ರಮೆಯಲ್ಲಿ ಮುಳುಗಿ ಹೋಗುತ್ತಾರೆ. ಅಮೂಲ್ಯಶೋಧ ವಸ್ತು ಸಂಗ್ರಹಾಲಯದಲ್ಲಿ ಅವರು ಸಂಗ್ರಹಿಸಿರುವ ಅಪೂರ್ವ ಚಿನ್ನ-ಬೆಳ್ಳಿ-ತಾಮ್ರ ಹಾಗೂ ಸೀಸದ ನಾಣ್ಯಗಳು, ರಾಜಮಹಾರಾಜರ ಕಾಲದಲ್ಲಿ ಬಳಸುತ್ತಿದ್ದ ಕತ್ತಿ ಗುರಾಣಿಗಳು, ಪಾತ್ರೆ ಪಡಗಗಳು, ವಿಶಿಷ್ಟ ಪುರಾತನ ವಸ್ತುಗಳು ನಿಜಕ್ಕೂ ದಿಗ್ಬ್ರಮೆ ಮೂಡಿಸುತ್ತವೆ. ಈ ಮ್ಯೂಸಿಯಂನಲ್ಲಿ ವೌರ್ಯರ ಕಾಲದಿಂದ ಹಿಡಿದು ಮೈಸೂರು ಒಡೆಯರ್ರವರ ಕಾಲದವರೆಗೆ ನಾಣ್ಯಗಳು ಕಾಣಸಿಗುತ್ತವೆ. ಜನಪದ ನಾಣ್ಯಗಳು, ಪಂಚ್ಮಾರ್ಕ್ ನಾಣ್ಯಗಳು, ಕುಶಾನರು, ಗುಪ್ತರು, ಕ್ಷತ್ರಪರು, ಯೌಧೇಯರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಹೊಯ್ಸಳರು, ವಿಜಯನಗರ, ಮೈಸೂರು, ಟಿಪ್ಪುಸುಲ್ತಾನ್, ದೆಹಲಿ ಸುಲ್ತಾನರು, ಬಹುಮನಿ ಸುಲ್ತಾನರು ಹೀಗೆ ಕ್ರಿಸ್ತಪೂರ್ವದಿಂದ ಕ್ರಿಸ್ತಶಕದವರೆಗೆ ದೇಶವನ್ನಾಳಿದ ವಿವಿಧ ರಾಜರ ನಾಣ್ಯಗಳು ಜನಮನ ಸೆಳೆಯುತ್ತವೆ. ಅಮೂಲ್ಯ ಶೋಧದ ಮೂಲಕ ದೇಶಕ್ಕೆ ಅಪೂರ್ವ ಕೊಡುಗೆ ನೀಡಿದ ಖಂಡೋಬರಾಯರು ನೂರ್ಕಾಲ ಬಾಳಲಿ ಎಂಬುದು ಅವರ ಅಭಿಮಾನಿಗಳ ಹಾಗೂ ಅವರ ವಿದ್ಯಾರ್ಥಿಗಳ ಹಾರೈಕೆಯಾಗಿದೆ. -ಚಂದ್ರಕಾಂತ್, ನಾಣ್ಯ ಸಂಗ್ರಾಹಕ
ಖಂಡೋಬರಾವ್ ಹುಟ್ಟಿದ್ದು ಮಾಗಡಿ ತಾಲೂಕು, ರಾಮನಗರ ಜಿಲ್ಲೆಯ ಗರ್ಗೇಶ್ವರಪುರ ಎಂಬ ಊರಿನಲ್ಲಿ. ತಂದೆ ಸರ್ವಾ ಹನುಮಂತರಾವ್, ತಾಯಿ ಲಕ್ಷ್ಮಿ ದೇವಿ. 1940 ರ ಮೇ 4 ರಂದು ಅವರು ಜನಿಸಿದರು. ಎಂಎ, ಬಿಎಡ್ ಮಾಡಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯಲ್ಲಿ 1968 ರಿಂದ 1998 ರವರೆಗೆ ಸೇವೆ ಸಲ್ಲಿಸಿದರು. ಅವರ ಮತ್ತೊಂದು ಅಭಿರುಚಿ ಎಂದರೆ ನಾಟಕದ ಅಭಿನಯ. ಸುಮಾರು 30 ವರ್ಷಗಳ ಕಾಲ ವಿವಿಧ ತಂಡಗಳಲ್ಲಿ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಸ್ತ್ರೀಪಾತ್ರದಲ್ಲಿ ಅವರದು ಎತ್ತಿದ ಕೈ.
ಖಂಡೋಬರಾವ್ ಹಲವು ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ವಿಶೇಷವಾಗಿ ನಾಣ್ಯಗಳ ಬಗ್ಗೆ ಕರ್ನಾಟಕದ ನಾಣ್ಯಗಳು, ಸ್ವಾತಂತ್ರ್ಯ ಭಾರತದ ನಾಣ್ಯಗಳು, ನಾಣ್ಯದ ಇತಿಹಾಸ, ನಾಣ್ಯ ಭಾರತ ಮುಂತಾದ ಪುಸ್ತಗಳನ್ನು ಮತ್ತು ಹಲವು ಕವನ ಸಂಕಲನಗಳನ್ನು ಕೂಡ ಅವರು ಬರೆದಿದ್ದಾರೆ.
ಅವರಿಗೆ ಅನೇಕ ಬಿರುದುಗಳು ಕೂಡ ಬಂದಿವೆ. ಮಲೆನಾಡು ಭೀಷ್ಮ, ನಾಣ್ಯ ಬ್ರಹ್ಮ, ಶಿವಮೊಗ್ಗೆಯ ಷಹಜಹಾನ್, ರಾಷ್ಟ್ರಮಟ್ಟದ ಅತ್ಯುತ್ತಮ ನಾಣ್ಯ ಸಂಗ್ರಾಹಕ ಮುಂತಾದ ಗೌರವಗಳನ್ನು ಅವರಿಗೆ ನೀಡಲಾಗಿದೆ. ಇಂತಹ ಖಂಡೋಬರಾವ್ ಅವರನ್ನು ಶಿವಮೊಗ್ಗದ ಜನತೆ ಗುರುತಿಸಿ ಇದೇ ಅಕ್ಟೋರ್ಬ 19 ರಂದು ಕುವೆಂಪು ರಂಗಮಂದಿರದಲ್ಲಿ ಗೌರವಿಸುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದೆ.
ಖಂಡೋಬರಾವ್ ಅತ್ಯಂತ ಸರಳ ವ್ಯಕ್ತಿ, ಹೃದಯವಂತ, ಅಂತಃಕರಣ, ಮಾನವೀಯತೆ, ಆತ್ಮವಿಶ್ವಾಸದ ಪ್ರತೀಕ, ಛಲಗಾರ. ಪತ್ನಿಯನ್ನು ಅತಿಯಾಗಿ ಪ್ರೀತಿಸುವವರು ಹೀಗೆ ಹಲವು ಒಳ್ಳೆಯ ಗುಣಗಳ ಮಿಶ್ರಣವೇ ಇವರಾಗಿದ್ದಾರೆ. ಖಂಡೋಬರಾವ್ ಮರಾಠಿಗರಾಗಿದ್ದಾರೆ. ಶಿವಾಜಿ ಮಹಾರಾಜರ ತಂದೆ, ಷಹಾಜಿ ಮಹಾರಾಜರ ಜೊತೆಯಲ್ಲಿ ಅಂದರೆ ಕ್ರಿ.ಶ. 1640 ರಲ್ಲಿ ಇವರ ವಂಶಜರು ಕರ್ನಾಟಕಕ್ಕೆ ಬಂದರು. ಷಹಾಜಿ ಮಹಾರಾಜರು ಚನ್ನಗಿರಿ ಸಮೀಪದ ಹೊದಿಗೆರೆಯಲ್ಲಿ ಮರಣದ ನಂತರ ಇಲ್ಲಿಗೆ ಬಂದಿದ್ದ ಇವರ ಪೂರ್ವಿಕರು ವಾಪಸ್ ಹೋಗದೇ ಚನ್ನಗಿರಿ ಹಾಗೂ ಭದ್ರಾವತಿ ಸುತ್ತಮುತ್ತ ಹೆಚ್ಚಾಗಿ ನೆಲೆಸಿದರು. ಇಂದಿಗೂ ಮರಾಠರ ಕುಟುಂಬಗಳು ಶಿವಮೊಗ್ಗ ಜಿಲ್ಲೆಯಲ್ಲಿವೆ. ಖಂಡೋಬರಾವ್ ಅವರ ಬಾಲ್ಯದ ಜೀವನ ಅತ್ಯಂತ ಕಷ್ಟದಲ್ಲಿತ್ತು. ಒಮ್ಮೊಮ್ಮೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಅವರ ತಂದೆ, ಮೊದಲನೇ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದು, ವಾಪಸ್ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಆ ನಂತರ ಎರಡನೇ ಮಹಾಯುದ್ಧದಲ್ಲಿ ಕೂಡ ಭಾಗವಹಿಸಿದ್ದರು. ಹೀಗಾಗಿ ಅವರ ಕುಟುಂಬ ನಿಜಕ್ಕೂ ಸಂಕಷ್ಟದಲ್ಲಿ ಸಿಲುಕಿತ್ತು. ಬಡತನದಲ್ಲೇ ಬೆಳೆದ ಅವರು ತಮ್ಮ ಬದುಕನ್ನು ಹಳ್ಳಿಯಲ್ಲಿ ಕಳೆದರು. ನಂತರ ಶಿವಮೊಗ್ಗದಲ್ಲಿ ಅವರ ತಂದೆ ತುಂಗಾ ಭದ್ರಾ ಸಕ್ಕರೆ ಕಾರ್ಖಾನೆಗೆ ಸೇರಿಕೊಂಡ ನಂತರ ಅವರ ಬದುಕು ಶಿವಮೊಗ್ಗದಲ್ಲಿಯೇ ಆರಂಭವಾಯಿತು. ಹೀಗೆ ಅವರ ಬದುಕು ಕೂಡ ಒಂದು ಹೋರಾಟದ ದಾರಿಯೇ ಆಗಿದೆ.
ಇದೀಗ ಖಂಡೋಬರಾವ್ ಅವರನ್ನು ಸನ್ಮಾನಿಸುತ್ತಿರುವುದು ತುಂಬಾ ಅರ್ಥಗರ್ಭಿತವಾಗಿದೆ. ಇಂತಹ ಅಪರೂಪದ ವ್ಯಕ್ತಿ ಖಂಡೋಬ ರಾವ್ ಅವರಿಗೆ ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋಸ್ಥವ ಅಥವ ಗಣರಾಜ್ಯೋಸ್ಥವ ಪ್ರಶಸ್ತಿ ನೀಡಿ ಗೌರವಿಸಬೇಕು.
ಲೇಖನ: ಆರುಂಡಿ ಶ್ರೀನಿವಾಸಮೂರ್ತಿ
ನೆರವು: ನಾಗರಾಜ್ ಶೆಣೈ ಮತ್ತು ನಿರಂಜನ ಮೂರ್ತಿ ಎಚ್.ಸಿ.
Discussion about this post