ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತ್ತೀಚೆಗೆ ಇಹಲೋಕ ತ್ಯಜಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕೊನೆಯ ಬಾರಿ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ರಮಣರಾವ್ ಅವರಿಗೆ ಬೆಂಗಳೂರು ಪೊಲೀಸರು ಭದ್ರತೆ ನೀಡಿದ್ದಾರೆ.

ಪುನೀತ್ ಕೊನೆಯುಸಿರೆಳೆಯುವ ಕೊನೆಯ ಕ್ಷಣಗಳಲ್ಲಿ ಚಿಕಿತ್ಸೆ ನೀಡಿದ್ದ ಡಾ.ರಮಣರಾವ್ ವಿರುದ್ಧ ಕೆಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಮಣಶ್ರೀ ಕ್ಲಿನಿಕ್ ಹಾಗೂ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸದಾಶಿವನಗರದಲ್ಲಿರುವ ರಮಣರಾವ್ ಅವರ ನಿವಾಸಕ್ಕೆ ಕೆಎಸ್’ಆರ್’ಪಿ ಬೆಟಾಲಿಯನ್ ಭದ್ರತೆ ಒದಗಿಸಲಾಗಿದ್ದು, ಕ್ಲಿನಿಕ್ ಬಳಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳೂ ಸಹ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ ಎಂದು ವರದಿಯಾಗಿದೆ.

ಈ ನಡುವೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಹಾಗೂ ನರ್ಸಿಂಗ್ ಹೋಂಗಳ ಅಸೋಸಿಯೇಶನ್, ಪುನೀತ್ ರಾಜಕುಮಾರ್ ಅವರಿಗೆ ಕೊನೆಯ ಗಂಟೆಗಳಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಭದ್ರತೆ ಒದಗಿಸಬೇಕು ಎಂದು ಕೋರಿದೆ. ಇದೇ ವೇಳೆ ಪುನೀತ್ ಅವರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಹೆಚ್ಚಿನ ಕಾಳಜಿ ತೋರಿಲ್ಲ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ಬಿಂಬಿಸುತ್ತಿವೆ ಎಂದು ಆರೋಪಿಸಿರುವ ಅಸೋಸಿಯೇಶನ್, ಇಂತಹ ವರದಿಗಳಿಂದಾಗಿ ವೈದ್ಯರ ಮೇಲೆ ಸಾರ್ವಜನಿಕರಿಗೆ ನಂಬಿಕೆ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















