ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧುಮೇಹಿಗಳ ಸಂಖ್ಯೆ ಹೆಚ್ಚಲು ಪ್ರಸ್ತುತ ಕಾಲಘಟ್ಟದಲ್ಲಿ ಜನರು ಅನುಸರಿಸುತ್ತಿರುವ ಜೀವನಶೈಲಿಯೇ ಮುಖ್ಯ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಹೇಳಿದರು.
ವಿಶ್ವ ಮಧುಮೇಹ ದಿನಾಚರಣೆ ನಗರದಲ್ಲಿ ಶಿವಮೊಗ್ಗ ಮಿಡ್‌ಟೌನ್ ರೋಟರಿ ಡಯಾಬಿಟಿಸ್ ಸೆಲ್ಫ್ಕೇರ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಆರೋಗ್ಯಕ್ಕಾಗಿ ನಡಿಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ನಾವು ಸೇವಿಸುವ ಆಹಾರ, ಮಾನಸಿಕ ಒತ್ತಡ ಸಹ ಕಾರಣವಾಗುತ್ತದೆ. ಧನಾತ್ಮಕ ಜೀವನಶೈಲಿ ರೂಢಿಸಿಕೊಂಡರೆ ಮಧುಮೇಹ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಅಗತ್ಯ ಮಾರ್ಗದರ್ಶನ ಪಡೆದುಕೊಂಡು ಔಷಧಗಳನ್ನು ತೆಗೆದುಕೊಳ್ಳಬೇಕು. ವೈದ್ಯರ ಮಾರ್ಗದರ್ಶನದಂತೆ ಜೀವನಶೈಲಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಲಾಯಿತು. ರಕ್ತನಿಧಿ ಕೇಂದ್ರದಿಂದ ನೆಹರು ಕ್ರೀಡಾಂಗಣದವರೆಗೂ ಸಾವಿರಾರು ಜನರು ಆರೋಗ್ಯಕ್ಕಾಗಿ ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.
ರೋಟರಿ ಮಿಡ್‌ಟೌನ್ ಅಧ್ಯಕ್ಷ ಡಿ.ಎಸ್. ಅರುಣ್, ರಾಜೇಂದ್ರ ಪ್ರಸಾದ್, ಹರ್ಷ ಕಾಮತ್, ಡಾ. ಶಿವರಾಮಕೃಷ್ಣ, ಜಿ.ಎನ್.ಎನ್. ಮೂರ್ತಿ, ಅನಿಲ್, ರೋಟರಿ ಜಿ. ವಿಜಯ್‌ಕುಮಾರ್ ಸೇರಿದಂತೆ ಅನೇಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯಕ್ಕಾಗಿ ನಡಿಗೆ ಸಂದರ್ಭದಲ್ಲಿ ಬಿಸಿ ಕಾಫಿ, ರಾಗಿ ಬಿಸ್ಕತ್ ವಿತರಿಸಲಾಯಿತು. ನಂತರ ರುಚಿಕಟ್ಟಾದ ಮೂರು ತರಹದ ಉಪಹಾರ, ಉಚಿತ ಎಚ್‌ಬಿಎ1ಸಿ, ಆರ್‌ಬಿಎಸ್ ರಕ್ತ ಪರೀಕ್ಷೆ, ಕ್ಯಾಲರಿ ಮೇಳ ನಡೆಸಲಾಯಿತು.
ಆಹಾರ ತಜ್ಞರೊಂದಿಗೆ ಮಾತುಕತೆ, ಹೆಸರಾಂತ ವೈದ್ಯಮಿತ್ರರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸಂವಾದದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಿವಮೊಗ್ಗದ ಎಲ್ಲ ರೋಟರಿ ಮಿತ್ರರು, ವೈದ್ಯರು, ಆರೋಗ್ಯಾಸಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post