ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬಲಿಷ್ಠ ಯುವಜನತೆ ಅವಶ್ಯ. ತ್ಯಾಗ ಮತ್ತು ಸೇವೆ ಭಾರತದ ಎರಡು ಪ್ರಮುಖ ಆದರ್ಶಗಳು. ಈ ಆದರ್ಶಗಳ ಅರಿವು ಇಂದಿನ ಯುವಜನತೆಗೆ ಅಗತ್ಯ. ಸೇವೆಯ ಮಹತ್ತ್ವವನ್ನು ಅರಿತಾಗ ಬದುಕು ಪಾವನವಾಗುತ್ತದೆ ಎಂದು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಮನೋಹರ್ ಅಭಿಪ್ರಾಯಪಟ್ಟರು.
ಶ್ರೀ ವಿವೇಕಾನಂದ ಕಲಾ ಕೇಂದ್ರದ ವತಿಯಿಂದ ಶ್ರೀಕೃಷ್ಣ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸೇವೆಯ ಮಹತ್ವ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಪಾದನೆಯ ಅಲ್ಪ ಭಾಗವನ್ನು ಇತರರೊಡನೆ ಹಂಚಿಕೊಂಡಾಗ ಸಿಗುವ ಆನಂದವೇ ಬೇರೆ. ಇಂದಿನ ಯುವಜನತೆಗೆ ಸೇವೆಯ ಮಹತ್ವವನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕನ್ನು ಸಾರ್ಥಕಪಡಿಸಿ ಕೊಳ್ಳಬಹುದೆಂಬುದನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸುಮಾರು 10-12 ವರ್ಷಗಳಿಂದ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಶ್ರೀ ವಿವೇಕಾನಂದ ಕಲಾ ಕೇಂದ್ರದವರು ಡಾ. ವಿ. ನಾಗರಾಜ್ ಹಾಗೂ ಡಾ. ಶ್ವೇತ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕಾರ್ಯಕ್ರಮಗಳು ಅತ್ಯುತ್ತಮವಾಗಿದ್ದು, ಯುಜನತೆಯ ಸರ್ವೋತೋಮುಖ ವ್ಯಕ್ತಿತ್ವಕ್ಕೆ ಈ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಶ್ಲಾಘಿಸಿದರು.
ವಿವೇಕಾನಂದ ಕಲಾ ಕೇಂದ್ರವು ಪ್ರಾರಂಭದ ದಿನದಿಂದಲೂ ಉಚಿತವಾಗಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಯುವಜನತೆ ಹೇಗೆ ಪಾಲ್ಗೊಳ್ಳಬಹುದೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಕಲಾಕೇಂದ್ರದ ಗೌ. ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜ್ ಮಾತನಾಡಿ ಸೇವೆಯ ಮಹತ್ವ ವನ್ನು ಅರಿತು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಎಲ್ಲ ಯುವಜನತೆಗೆ ಕಲಾಕೇಂದ್ರದಲ್ಲಿ ಮುಕ್ತ ಸ್ವಾಗತವಿದೆ ಎಂದು ಹೇಳಿದರು.
ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ರುಕ್ಮಾಂಗದ ನಾಯ್ಡು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಷಾಕುಮಾರಿ ಅವರು ಕಲಾಕೇಂದ್ರದವರು ಯುವಜನತೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಅಭಿವಂದಿಸಿದರು.
ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ತುಣುಕುಗಳನ್ನು ಹಾಗೂ ವಿವೇಕಾನಂದರ ಸೇವಾ ಸಂದೇಶಗಳನ್ನು ದೈವಿಕ್ ಸ್ಫುಟವಾಗಿ ಉಲ್ಲೇಖಿಸಿದ ನಂತರ ಧ್ಯಾನದಿಂದ ಪ್ರಾರಂಭಗೊಂಡ ಸೇವಾ ಶಿಬಿರ, ಸೇವೆಯ ಅರ್ಥ, ಅದರ ಮಹತ್ವ, ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ಇಡೀ ಜಗತ್ತಿನಲ್ಲಿ ಸಾಧನೆ ಮಾಡಿದ ದಿವ್ಯಾತ್ಮರನ್ನು ಸ್ಮರಿಸಿ, ಅವರ ಬದುಕಿನ ಕೆಲವು ಘಟನೆಗಳನ್ನು ಯುವಜನತೆಗೆ ತಿಳಿಸಿಕೊಡುವುದರ ಮೂಲಕ ಹೇಗೆ ೫೦ ವರ್ಷಗಳ ಹಿಂದೆ ವಿವೇಕಾನಂದರ ಸಾರ್ಥಕ ಬದುಕು – ಸಂದೇಶಗಳು ಕಾರ್ಯಾಗಾರದ ಮೆರಗನ್ನು ಹೆಚ್ಚಿಸಿತು.
ಇಡೀ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಶ್ರೀಕೃಷ್ಣ ಪದವಿ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕರಾದ ಶ್ರೀ ಅವಿನಾಶ್ ಹಾಗೂ ಡಾ. ಶ್ವೇತ, ಹರ್ಷ ದಂಪತಿಗಳು ಕಾರ್ಯಾಗಾರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸಂಬಂಧಪಟ್ಟಂತೆ ವೈವಿಧ್ಯಮಯವಾದ ಸಮೂಹ ಚಟುವಟಿಕೆಗಳು, ಸ್ಪರ್ಧೆಗಳನ್ನು ಆಯೋಜಿಸಿ ಯುವಜನತೆಯಲ್ಲಿ ಸೇವಾ ಮಹತ್ವದ ಅರಿವನ್ನುಂಟು ಮಾಡಿ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಆತ್ಮ ತೃಪ್ತಿಯನ್ನು ಪಡೆಯಬಹುದೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರದಲ್ಲಿ ಪ್ರೊ. ರಾಜೀವ್ ಮತ್ತು ಅವಿನಾಶ್ ಅವರು ಶ್ರೀಕೃಷ್ಣ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹೇಗೆ ರಾಷ್ಟ್ರೀಯ ಅಪತ್ಕಾಲದಲ್ಲಿ ಸೇವೆ ಸಲ್ಲಿಸುತ್ತಿದೆ ಹಾಗೂ ಪವರ್‌ಸ್ಟಾರ್ ಪುನೀತ್ ರಾಜಕುಮಾರವರ ಸೇವಾ ಕಾರ್ಯಗಳನ್ನು ಸ್ಮರಿಸಿ, ಅವರು ಇಂದಿನ ಯುವಜನತೆಗೆ ಹೇಗೆ ಮಾದರಿಯಾಗಿದ್ದಾರೆ ಎಂಬುದನ್ನು ಶಿಬಿರಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟದ್ದು ಸಮಯೋಜಿತವಾಗಿತ್ತು. ಶ್ರೀಕೃಷ್ಣ ಪದವಿ ಕಾಲೇಜಿನ ಪ್ರೊ. ಮೇಘ ಹಾಗೂ ಡಾ. ಮುನಿನಂಜಪ್ಪ ಅವರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post