ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಎಂಬ ನಾಗಪುರ ಶಿಕ್ಷಣ ನೀತಿಯನ್ನು ಬಹಿಷ್ಕರಿಸಿ ಎಂದು ರಾಜ್ಯಾದ್ಯಂತ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.
ಅವರು ನಗರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ನಾಲ್ಕು ವರ್ಷದ ಶಿಕ್ಷಣದಿಂದ ಪದವಿ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಹೊರತು ಅದರಿಂದ ನಿಜವಾಗಲೂ ಪ್ರಯೋಜನ ಇಲ್ಲ ಎಂದರು.
ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ದೊಡ್ಡ ಸೋಲನ್ನು ಅನುಭವಿಸುತ್ತದೆ, ಅದು ಕೇವಲ ಭವನಾತ್ಮಕವಾಗಿ ಏನನ್ನೋ ಹೇಳಲು ಹೊರಟಿದೆ. ಸಂಬಂಧ ಇಲ್ಲದ ಕೋರ್ಸಿನಲ್ಲಿ ಇನ್ಯಾವುದೋ ವಿಷಯ ಓದುವದರಿಂದ ಅಸಲಿ ಪ್ರಯೋಜನ ಏನು ಎಂಬುದನ್ನು ವಿವರಿಸಬೇಕು. ಯಾವುದೇ ಮೂಲ ಸೌಕರ್ಯ ಒದಗಿಸದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇ ತಪ್ಪು, ಕೇವಲ ಒಂದಿಷ್ಟು ಸಂಘ ಪರಿವಾರದ ಜನರನ್ನು ಖುಷಿಪಡಿಸಲು ಇದನ್ನು ಅವಸರದಲ್ಲಿ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು. ವಿಶ್ವವಿದ್ಯಾಲಯಗಳ ಮಹತ್ವವೂ ಹೋಗಿ ಕೇವಲ ಖಾಸಗಿ ಶಿಕ್ಷಣ ಮಾಫಿಯಾಕ್ಕೆ ಬಡ ವಿದ್ಯಾಕಾಂಕ್ಷಿಗಳನ್ನು ಬಲಿ ಕೊಡಲು ಕೇಂದ್ರದ ಹುನ್ನಾರ, ವೃತ್ತಿ ಮೇಲೆ ಅವಲಂಬಿಸಿದ ಜನರು ಮನುಸಂಸ್ಕೃತಿಯ ಭಾಗವಾಗಿ ತಮ್ಮದೇ ವೃತ್ತಿಯಲ್ಲಿ ಮುಂದುವರಿಯುವAತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಗಂಭೀರ ಆರೋಪ ಮಾಡಿದರು.
ಎನ್.ಎಸ್.ಯು.ಐ. ಜಿಲ್ಲಾ ಮಾಜಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸರಿಯಾದ ಯೋಜನೆ ಯೋಚನೆ ಇಲ್ಲದ ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸರಕಾರದಲ್ಲಿ ಕೆಲಸ ಮಾಡುವ ಜನರು ಕೇವಲ ಒತ್ತಾಯಕ್ಕೆ ಚನ್ನಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಅವರೂ ಸಹ 296 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದಿಲ್ಲ. ಎಲ್ಲಾ ಸರಕಾರಿ ಹುದ್ದೆಗಳನ್ನು ಪದವಿ ಮೂಲಕ ಆಯ್ಕೆ ಮಾಡುತ್ತಿದ್ದಾರೆ ಹೊರತು ಯಾವುದೇ ಎರಡು ವರ್ಷದ ಕೋರ್ಸಿನಿಂದ ಅಲ್ಲ, ಇನ್ನು ಕಲಾ, ವಾಣಿಜ್ಯ ಮತ್ತು ವಿಜ್ಞಾನ ಓದುವ ಸಾಮಾನ್ಯ ಜನರ ಮೇಲೆ ಇದನ್ನು ಹೇರಲಾಗಿದೆ ಹೊರತು ಇದು ವೈದ್ಯಕೀಯ ಮತ್ತು ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಅಷ್ಟಾಗಿ ತೊಂದರೆ ಮಾಡುತ್ತಿಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ತಮಗೆ ಬೇಕಾದ ರೀತಿಯಲ್ಲಿ ಇಡೀ ದೇಶದಲ್ಲಿ ಒಂದೇ ಪಠ್ಯಕ್ರಮ ಓದಿಸುವ ಪ್ರಯತ್ನ ಇದಾಗಿದೆ. ನಿಜವಾದ ಇತಿಹಾಸ ಮರೆಮಾಚುವ ಕೆಲಸ ಜೊತೆಗೆ ಸುಳ್ಳನ್ನು ಶಿಕ್ಷಣದಲ್ಲೂ ತುರುಕುವ ಯತ್ನವೇ ಹೊಸ ಶಿಕ್ಷಣ ನೀತಿಯ ಒಳಸಂಚು ಎಂದು ದೂರಿದರು. ಈ ವೇಳೆ ರಾಜ್ಯ ಕಾರ್ಯದರ್ಶಿ ರಫೀಕ್ ಅಲಿ, ರಾಜ್ಯ ಸಂಯೋಜಕ ವಿನಯ್ ಪಟ್ಟಣಶೆಟ್ಟಿ, ಜಿಲ್ಲಾ ಅಧ್ಯಕ್ಷ ನವೀನ್ ಮಾದಿನೂರ, ಬ್ಲಾಕ್ ಅಧ್ಯಕ್ಷ ಮಹ್ಮದ್ ರಜಾಕ್, ವಿದ್ಯಾರ್ಥಿ ಮುಖಂಡರಾದ ವಿಜಯ್ ಕಂಬಳಿ, ಹನುಮೇಶ ಬೆಣ್ಣಿ, ಪರಶುರಾಮ ಬೂದಿಹಾಳ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post