ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರದ ಅರಿವನ್ನು ಮಕ್ಕಳಿಗೆ ನೀಡುವ ಮೂಲಕ ಸಮತೋಲನವನ್ನ ಕಾಪಾಡಿಕೊಳ್ಳಬೇಕಿದೆ. ಹಲವು ವರ್ಷಗಳಿಂದ ಪರಿಸರ ಜಾಗೃತಿ ಟ್ರಸ್ಟ್ ಮುಂಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ಜಾಗೃತಿಗೆ ಶಿಕ್ಷಣ ಸಂಸ್ಥೆ, ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕಿದೆ ಎಂದು ತಾಲ್ಲೂಕು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್ ಹೇಳಿದರು.
ತಾಲ್ಲೂಕು ಹುಣಸವಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ನಾವು ನಮ್ಮ ಪರಿಸರ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಪರಿಸರ ಕಾಳಜಿ ಉಳ್ಳವರನ್ನ ಪ್ರತ್ಯೇಕಿಸಿ ನೋಡುವ ವಿಲಕ್ಷಣ ಮನೋಭಾವದಿಂದಾಗಿ ಪರಿಸರ ಕಾಳಜಿ ಎಂಬುದು ಕೇವಲ ಕೆಲವರಿಗೆ ಮಾತ್ರ ಎಂಬಂತಾಗಿದೆ. ಜೀವವೈವಿಧ್ಯತೆಯ ಅಗತ್ಯ, ಅವು ಮನುಷ್ಯನಿಗೆ ಹೇಗೆ ನೆರವಾಗುತ್ತದೆ ಎಂಬ ಅರಿವಿಲ್ಲದೆ ನಿರಂತರ ಪರಿಸರದ ಮೇಲಿನ ಪ್ರಹಾರದಿಂದಾಗಿ ಇಂದು ದಟ್ಟ ಅರಣ್ಯ, ಸ್ವಚ್ಛ ಪರಿಸರ, ಸಮೃದ್ಧ ನೀರನ್ನು ಹೊಂದಿದ್ದ ಮಲೆನಾಡು ಪ್ರದೇಶಗಳು ಬಡವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ತಾಲ್ಲೂಕು ಕಾನು ಇತಿಹಾಸ, ಕಾನು ಮತ್ತು ಜೀವಿಗಳ ಕ್ಷೀಣತೆಯಿಂದಾಗಿ ಆಗುವ ದುಷ್ಪರಿಣಾಮ, ಆಧುನಿಕ ನಾಗರಿಕತೆಯಿಂದ ಭವಿಷ್ಯದ ದಿನಗಳಲ್ಲಿ ಎದುರಿಸಬೇಕಾದ ಸವಾಲು, ಪ್ರಸ್ತುತ ಅನುಸರಿಸಲೇ ಬೇಕಾದ ಅಗತ್ಯ ವಿಚಾರಗಳ ಕುರಿತಂತೆ ಮಾಹಿತಿ ನೀಡಿದರು.
ಹೊಸನಗರ ದೊಂಬೆಕೊಪ್ಪ ಸಾರಾ ಸಂಸ್ಥೆಯ ಧನುಷ್ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಪರಿಸರದಲ್ಲಿನ ವೈಪರೀತ್ಯತೆ, ಅದರಿಂದ ಮಾನವ ಕುಲಕ್ಕೆ ಆಗುತ್ತಿರುವ ಹಾನಿ ಕುರಿತಂತೆ ಮಾತನಾಡಿ ಆ ಕುರಿತು ಡಾಕ್ಯೂಮೆಂಟರಿ ಪ್ರದರ್ಶಿಸಿದರು.
ವಸತಿ ನಿಲಯದ ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ಸಂಪಗೋಡು ಮಲ್ಲಿಕಾರ್ಜುನಗೌಡ, ವಸತಿ ನಿಲಯದ ಡಾ.ಹಿತೇಶ್, ಎನ್.ನಂದಿನಿ, ಮುಜಾಹಿದ್, ಅಬ್ದುಲ್ ಖಾದರ್, ಅಶ್ವತ್, ಸಿದ್ಧ ಲಿಂಗೇಶ್ವರ, ಶೀಲ, ಅನಿಲ್ ಕುಮಾರ್ ಭಜಂತ್ರಿ ಶಿಕ್ಷಕರುಗಳು, ಶುಶ್ರೂಷಕಿ ನಮನ, ನೇತ್ರಾನಂದ, ರಂಜಿತಾ ಹಾಗೂ ವಿದ್ಯಾರ್ಥಿನಿಯರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post