ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನುಪಿನಕಟ್ಟೆ ಲಂಬಾಣಿಹಟ್ಟಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ಸುಮಾರು 250ಕ್ಕೂ ಹೆಚ್ಚು ಜನರಿರುವ ಲಂಬಾಣಿಹಟ್ಟಿಯಲ್ಲಿ ಕುಡಿಯಲು ಸಕಾಲಿಕವಾದ ಕುಡಿಯುವ ನೀರಿಲ್ಲದೇ, ಕನಿಷ್ಠ ಶಾಲೆ ಸೌಲಭ್ಯವಿಲ್ಲದೇ, ಅಂಗನವಾಡಿಯಿಲ್ಲದೇ ನಿತ್ಯ ಒಂದೂವರೆ ಕಿ.ಮೀ.ದೂರದ ಗಾಡಿಕೊಪ್ಪಕ್ಕೆ ಬಂದು ಹೋಗಿ ಜೀವನ ಸಾಗಿಸಬೇಕಿದೆ. ಈ ಲಂಬಾಣಿ ಹಟ್ಟಿಯಲ್ಲಿ ಮನೆಗಳಿವೆ. ಆದರೆ ಮೂಲಭೂತ ವ್ಯವಸ್ಥೆಗಳೇ ಇಲ್ಲ ಇಲ್ಲಿಗೆ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಿ ಎಂದು ಮಾನವ ಹಕ್ಕುಗಳ ಕಮಿಟಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಮಾನವ ಹಕ್ಕುಗಳ ಕಮಿಟಿಯ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿದಾಗ ಕಂಡು ಬಂದ ಸತ್ಯ ಚಿತ್ರಣ ಇದಾಗಿದೆ. ಅಲ್ಲಿನ ಶೇ.99ರಷ್ಟು ಜನ ಕೂಲಿಕಾರ್ಮಿಕರಾಗಿ ಬದುಕುತ್ತಿದ್ದಾರೆ. ಅವರ ಅಳಲು ಬೆಟ್ಟದಷ್ಟಿವೆ. ಕನಿಷ್ಠ ಚಿಕ್ಕಪುಟ್ಟ ಮೂಲಭೂತ ಸೌಕರ್ಯಗಳನ್ನಾದರೂ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಕೋರಿದರು.
ಬಸವ ವಸತಿ ಯೋಜನೆ, ಆಶ್ರಯ ಯೋಜನೆಯಂತಹ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಉಳಿದಂತೆ ಚಿಕ್ಕಪುಟ್ಟ ಜೋಪಡಿಗಳಲ್ಲಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಕುಗ್ರಾಮ ಶಿವಮೊಗ್ಗ ನಗರ ವ್ಯಾಪ್ತಿಯ ಕೆಲವೇ ಮೀಟರ್‌ಗಳ ಅಂತರದಲ್ಲಿರುವುದು ದುರಂತವೇ ಹೌದು.
ಬೆಳಗ್ಗೆ ಇಲ್ಲಿ ಹಾಲು ತರಲು ಒಂದೂವರೆ ಕಿ.ಮೀ. ಹೋಗಬೇಕು. ಉಳಿದಂತೆ ಯಾವುದೇ ಸೌಲಭ್ಯಗಳು ಇಲ್ಲಿಲ್ಲ. ಇಲ್ಲಿನ ಸುಮಾರು 60ರಿಂದ 70 ಮಕ್ಕಳು ದೂರದ ಗಾಡಿಕೊಪ್ಪಕ್ಕೆ ಬಂದು ಶಾಲೆಗೆ ಹೋಗಬೇಕು. ಅಂಗನವಾಡಿ ಕಲಿಯುವ ಸುಮಾರು 15ರಿಂದ 20ಮಕ್ಕಳನ್ನು ನಿತ್ಯ ಅಷ್ಟು ದೂರ ಕರೆತಂದು ಕರೆದೊಯ್ಯಬೇಕು. ಕೂಲಿ ಮಾಡುತ್ತಲೇ ಬದುಕು ಕಟ್ಟಿಕೊಂಡಿರುವವರು ಹೇಗೆ ತಾನೆ ಆ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲೊಂದು ಪುಟ್ಟ ಕಲ್ಲಿನ ಗೂಡಿನಲ್ಲಿ ಸೇವಾಲಾಲ್ ದೇವಸ್ಥಾನವಿದೆ. ಇದೇ ಆ ಊರಿಗೆ ದೊಡ್ಡ ದೇವಸ್ಥಾನ. ಇಲ್ಲಿ ಶಿಕ್ಷಣ, ಕುಡಿಯುವ ನೀರು, ದೇವಸ್ಥಾನ ಇಲ್ಲದ ಕುಗ್ರಾಮವಾಗಿ ಇರುವುದು ದುರಂತವೇ ಹೌದು. ಅದೃಷ್ಟವೆಂಬಂತೆ ಹಿಂದೆ ಶಾಸಕರಾಗಿದ್ದ ಶಾರದಾ ಪೂರ‍್ಯಾನಾಯ್ಕ್ ಅವರು ಇಲ್ಲಿ ಸಿಮೆಂಟ್ ರಸ್ತೆ ಮಾಡಿಸಿದ್ದರು. ಅದೊಂದು ಬಿಟ್ಟರೆ ಉಳಿದ ಯಾವುದೇ ವ್ಯವಸ್ಥೆಗಳಿಲ್ಲ. ಚರಂಡಿಯಿಲ್ಲ, ಮಳೆ ಬಂದರೆ ಸಲಿಸಾಗಿ ನೀರು ಹರಿದು ಹೋಗುವುದಿಲ್ಲ. ಸ್ವಚ್ಛತೆಯ ಮಾತು ಹೇಳುವಂತಿಲ್ಲ ಎಂದು ಹೇಳಿದ್ದಾರೆ.
ಈ ಪುಟ್ಟ ಲಂಬಾಣಿ ಹಟ್ಟಿಯಲ್ಲಿ ನೂರಾರು ಬೇಡಿಕೆಗಳಿವೆ. ಜಿಲ್ಲಾಧಿಕಾರಿಗಳು ಚಿಕ್ಕ ಪುಟ್ಟ, ಅತ್ಯಗತ್ಯ ಬೇಡಿಕೆಗಳಾದ ಸಮರ್ಪಕ ಕುಡಿಯುವ ನೀರು, ಅಂಗನವಾಡಿ, ಪ್ರಾಥಮಿಕ ಶಾಲೆ, ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಬಂಧಿಸಿದವರಿಗೆ ಮಾಹಿತಿ ನೀಡಿ ಆದಷ್ಟು ಬೇಗನೆ ಈ ಕಾರ್ಯ ಮಾಡಿಕೊಡಲು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿರಂಜನ ಮೂರ್ತಿ, ಜಿಲ್ಲಾಧ್ಯಕ್ಷ ಎಸ್.ರಮೇಶ್, ಪದಾಧಿಕಾರಿಗಳಾದ ಶಾರದಾ ಶೇಷಗಿರಿಗೌಡ, ರವಿ, ಮಹಂತೇಶ್, ಹಟ್ಟಿಯ ದೇವರಾಜ್, ಶೋಭಾ ದೇವರಾಜ್, ಹನುಮಾನಾಯ್ಕ್ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post