ಕಲ್ಪ ಮೀಡಿಯಾ ಹೌಸ್ | ಸೊರಬ |
ಗೋದಾನ ಕೇವಲ ಧಾರ್ಮಿಕ ಪರಿಕಲ್ಪನೆ ಮಾತ್ರವಲ್ಲ, ದಾನ ಪಡೆದವರ ಕೌಟುಂಬಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದಾತ್ತ ಮಾನವ ಮೌಲ್ಯಗಳ ವೃದ್ಧಿಯೂ ಕೂಡ ಎಂದು ಪಟ್ಟಣ ಪುರಸಭೆಯ ಪ್ರಭಾರ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಹೇಳಿದರು.
ತಾಲೂಕು ಹೊಡಬಟ್ಟೆ ಗ್ರಾಮದ ಬಡಕುಟುಂಬವೊಂದಕ್ಕೆ ಗೋದಾನ ನೀಡಿ ಅವರು ಮಾತನಾಡಿದರು.
ಹಿಂದೂಗಳು ಗೋವಿಗೆ ಮೌಲ್ಯ ನೀಡಲು ಹಲವಾರು ಕಾರಣಗಳಿವೆ. ಮನುಷ್ಯನ ದೈಹಿಕ, ಆರ್ಥಿಕ ಹಾಗೂ ಮಾನಸಿಕ ವಿಕಾಸಕ್ಕೆ ಅತ್ಯಂತ ಪೂರಕವಾಗಿರುವುದರಿಂದ ಗೋವಿಗೆ ಪವಿತ್ರ ಸ್ಥಾನ ನೀಡಿದ್ದಾರೆ. ಭಾರತ ಕೃಷಿಕರ ನಾಡು, ಕೃಷಿಯ ಅಭಿವೃದ್ಧಿ, ಮನುಷ್ಯನ ಆರೋಗ್ಯ ವೃದ್ಧಿಗೆ ಗೋವು ನೆರವಾಗುತ್ತದೆ ಎನ್ನಲು ಹಲವಾರು ಪುರಾವೆಗಳು ನಮ್ಮೆದುರು ಇವೆ. ಈ ನಿಟ್ಟಿನಲ್ಲಿ ಗೋ ಸಂತತಿ ಹೆಚ್ಚಿಸಲು ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ. ಈ ಬಡಕುಟುಂಬಕ್ಕೆ ಬರೀ ಗೋವಷ್ಟೆ ಅಲ್ಲ, ಗೋವಿನ ಜೊತೆಗೆ ಅದರ ಕರು, ಅದರ ಕೆಲ ದಿನಗಳ ಆಹಾರಕ್ಕಾಗಿ ಮೇವು ಮತ್ತು ಇತರ ಪರಿಕರಗಳನ್ನು ಕೂಡ ನೀಡಲಾಗಿದೆ, ದಾನ ಸಾರ್ಥಕವಾಗಲಿ ಎಂದರು.
ಗೋದಾನ ಧಾರ್ಮಿಕ ವಿಧಿವಿಧಾನದ ಪ್ರಕ್ರಿಯೆಯಲ್ಲಿ ಅವರ ಕುಟುಂಬದವರು, ದಾನ ಸ್ವೀಕರಿಸಿದ ಗಿರಿಜಾ, ಸಮಾಜಮುಖಿ ಹಿರಿಯರಾದ ಶಿವರಾಮಕಂಚಿ, ಗಣಪತಿ ತಲಕಾಲಕೊಪ್ಪ, ವಾಸಂತಿನಾವುಡಾ ಇದ್ದರು. ಶ್ರೀನಾಥ ಮೆಹೆಂದಳೆ ಧಾರ್ಮಿಕ ವಿಧಿ ವಿಧಾನದ ನೇತೃತ್ವ ವಹಿಸಿದ್ದರು.
(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















