ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಭಾರತ ದೇಶದ ರಕ್ಷಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜವಾನರೆಷ್ಟೋ ಮಂದಿ ಅದರಲ್ಲಿ ಮಹಾತ್ಮ ಗಾಂಧೀಜಿಯವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅಲ್ಲಿನ ವಸತಿ ಶಾಲೆಯ ಮಕ್ಕಳೊಂದಿಗೆ ಎರಡು ನಿಮಿಷ ಮೌನ ಆಚರಿಸಿ, ನಂತರ ಅವರು ಮಾತನಾಡಿದರು.
ಈ ದಿನ ಭಾರತದ ಪಿತಾಮಹ ಮಹಾತ್ಮಾ ಗಾಂಧೀಜಿ ಅವರು ನಾಥುರಾಮ್ ಗೋಡ್ಸೆ ಅವರಿಂದ ಹತರಾದ ದಿನ. ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ. ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. 1869 ಅಕ್ಟೋಬರ್ 2 ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿ ಯೋಗಿಯಾಗಿ ಬದಲಾದವರು. ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿದೆ ಎಂದು ತಿಳಿಸಿದರು.
1948 ಜನವರಿ30ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್‌ಗೆ ತೆರಳಿದ್ದ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ನಾಗೇಂದ್ರಪ್ಪ, ಹಾಸ್ಟೆಲ್ ವಾರ್ಡನ್ ರವೀಂದ್ರ ಸಂಗೀತ ಶಿಕ್ಷಕ ಬಸವರಾಜ್ ಹಾಗೂ ಶಾಲಾ ಮಕ್ಕಳು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post