ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುವುದಕ್ಕೆ ಪೂರಕವಾಗಿ ವಾತಾವರಣನ್ನು ಸೃಷ್ಠಿಸುವುದು ನನ್ನ ಕನಸು ಎಂದು ನೂತನ ಪುರಸಭಾ ಅಧ್ಯಕ್ಷ ವೀರೇಶ್ ಮೇಸ್ತ್ರಿ ಹೇಳಿದರು.
ನೂತನ ಪುರಸಭಾ ಅಧ್ಯಕ್ಷ ವೀರೇಶ ಮೇಸ್ತ್ರಿ ಮತ್ತು ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್ ಇವರನ್ನು ಕನ್ನಡ ಸಾಂಸ್ಕೃತಿಕ ಜಗಲಿ ವತಿಯಿಂದ ಪುರಸಭೆಯ ಕಾರ್ಯಾಲಯದಲ್ಲಿ ಅಭಿನಂದಿಸಿದ ವೇಳೆ ಅವರು ಮಾತನಾಡಿದರು.

ಬದುಕಿನ ವಿವಿಧ ಮಜಲುಗಳನ್ನು ಕಂಡಿರುವ ನನಗೆ ಪಟ್ಟಣದ ಪುರಸಭೆಯ ಅಧಿಕಾರ ಹಿಡಿಯುವ ಅವಕಾಶ ದೊರೆತಿರುವುದು ಹೆಮ್ಮೆ ತಂದಿದೆ. ಪಟ್ಟಣದಲ್ಲಿರುವ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯಿಂದ ಬದುಕುವುದಕ್ಕೆ ಬೇಕಾದ ಪೂರಕ ವಾತವರಣ ಸೃಷ್ಟಿಸುವುದರೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

ಕನ್ನಡ ಸಾಂಸ್ಕೃತಿಕ ಜಗಲಿಯ ಅಧ್ಯಕ್ಷ ಮಂಜಪ್ಪ ಹುಲ್ತಿಕೊಪ್ಪ, ಸಂಚಾಲಕ ಷಣ್ಮುಖಾಚಾರ್, ಗೌರವ ಸಲಹೆಗಾರ ಹಾಲೇಶ ನವುಲೆ, ಕೃಷ್ಣಾನಂದ, ಮೋಹನ್ ಸುರಭಿ ಪಟ್ಟಣ ವ್ಯಾಪ್ತಿಗೆ ನೂತನವಾಗಿ ಸೇರಿರುವ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದರ ಮೂಲಕ ಭೌತಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಸಹಾಯ ನೀಡಬೇಕು, ಪಟ್ಟಣದ ವಿವಿಧ ರಸ್ತೆಗಳಿಗೆ ಕವಿಗಳು, ಸಮಾಜಸುಧಾರಕರು, ಪ್ರಸಿದ್ಧ ರಾಜಕಾರಣಿಗಳ ಹೆಸರುಗಳನ್ನಿಡುವುದು ಮತ್ತು ಮುಖ್ಯ ತಿರುವು ಮತ್ತು ಉಪ ತಿರುವುಗಳಿಗೆ ಸಂಖ್ಯೆಗಳನ್ನು ನೀಡಲು ವಿನಂತಿಸಿಕೊಂಡರು.

ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಒತ್ತಡದ ಬದುಕನ್ನು ಸರಿದೂಗಿಸಲು ಮನುಷ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ, ಅಧಿಕಾರ, ಪ್ರಶಸ್ತಿ ಮತ್ತು ಸನ್ಮಾನಗಳನ್ನು ನಾವು ಹುಡುಕಿಕೊಂಡು ಹೋಗಬಾರದು ಅವು ನಮ್ಮ ಬಳಿ ಬರುವಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಕನ್ನಡ ಸಾಂಸ್ಕೃತಿಕ ಜಗಲಿ ವೃದ್ಧಾಶ್ರಮದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಉತ್ತಮ ಚಾಲನೆ ನೀಡಿದೆ ಎಂದರು.

ಆಕಾಶವಾಣಿ ಕಲಾವಿದ ಗುರುಮೂರ್ತಿ, ರಮೇಶ್ ಮಂಚಿ, ಬಣ್ಣದ ಬಾಬು, ರಾಘವೇಂದ್ರ ಬಾಪಟ್, ಸರಸ್ವತಿ ನಾವುಡ, ವೀಣಾ, ಶ್ರೀನಿವಾಸ, ಈಶ್ವರ್, ಶ್ರೀ ರಂಗನಾಥ ಸೊಸೈಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸನ್ಮಾನದ ವೇಳೆ ಇದ್ದರು.


(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















