ಕಲ್ಪ ಮೀಡಿಯಾ ಹೌಸ್ | ಸೊರಬ |
ನನ್ನ ಬದುಕಿನ ಉನ್ನತಿಗೆ ಸೈನಿಕನಾಗಿದ್ದಾಗಿನ ನನ್ನ ದಿನಚರಿ ಕಾರಣ. ಇಂತಹ ಶಿಸ್ತುಬದ್ಧ, ಕಟ್ಟುನಿಟ್ಟಿನ ದಿನಚರಿ ಪ್ರತಿ ನಾಗರಿಕನಿಗೂ ಸಿಕ್ಕರೆ ದೇಶಕ್ಕೆ ಅಪಾಯ ಎದುರಾಗಲು ಸಾಧ್ಯವೇ ಇಲ್ಲ. ಈ ದೇಶಕ್ಕೆ ಭದ್ರ ಬುನಾದಿ ಹಾಕುವಲ್ಲಿ ರೈತರು, ಸೈನಿಕರು ನೀಡಿದ ಕೊಡುಗೆ ಅಪಾರ. ಹೀಗಾಗಿ ಇವರನ್ನು ಸಮಾಜ ಗೌರವಿಸಿ ರಕ್ಷಿಸುವುದು ಸಮಾಜದ ಕರ್ತವ್ಯ ಎಂದು ವಾಯುಸೇನೆ ವಿಶ್ರಾಂತ ಅಧಿಕಾರಿ ಮಂಗಳೂರು ಲೋಕಾಯುಕ್ತ ಎಸ್ಪಿ ಎ. ಕುಮಾರಸ್ವಾಮಿ ಹೇಳಿದರು.
ತಾಲೂಕು ಸಮೀಪದ ಬನವಾಸಿ ನರೂರಿನ ಸಾಹಿತಿ ರಘುನಂದನ ಭಟ್ಟ ಅವರ ಮನೆಯಂಗಳದಲ್ಲಿ ಜರುಗಿದ ಪತ್ರಕರ್ತ, ಸಾಹಿತಿ ನಾಗರಾಜ ಭಟ್ಟ ಇಳೆಗುಂಡಿ ಅವರ ಸಲಾಂ ಸೈನಿಕರೇ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೇಶದಲ್ಲಿ ಸೈನಿಕರನ್ನು ರೈತರನ್ನು ಕಡೆಗಣಿಸಿದರೆ ಅದು ನೋವಿನ ಸಂಗತಿ. ಸೈನಿಕರನ್ನು ಅಪಮಾನಿಸುವ ಕೃತ್ಯ ಆಗಬಾರದು. ಸೈನ್ಯಕ್ಕೆ ಹೋಗುವವರು ಊಟಕ್ಕೆ ಗತಿ ಇಲ್ಲದವರು ಎಂಬ ಮಾತು ನಿಜಕ್ಕೂ ಆಘಾತ ತರುವಂತದ್ದು, ಭಾರತ ಯಾವುದೇ ದೇಶದ ಮೇಲೆ ಸ್ವಯಂ ಆಕ್ರಮಣ ಮಾಡಲಾರದು. ಹಾಗೆಂದು ಸ್ವಯಂ ರಕ್ಷಣೆಗೆ ಹಿಂಜರಿಯುವ ದೇಶವೂ ಅಲ್ಲ. ನಮ್ಮ ಸೈನಿಕರ ಶಕ್ತಿ ಅಸೀಮವಾದುದು ಎಂದ ಅವರು, ನಾಗರಾಜ್ ಅವರ ಈ ಕೃತಿಯಲ್ಲಿ ಸೈನಿಕರ ಬದುಕಿಗೆ ಕನ್ನಡಿ ಹಿಡಿಯುವ ಮಹತ್ವದ ಲೇಖನಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ. ಓದುವ ಮೂಲಕ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಡಾ. ಮಾಧವ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ನಾಗರಾಜ ಇಳೆಗುಂಡಿ, ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಜಗದೀಶ ಭಂಡಾರಿ, ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ, ಅಭಾವಿಪ ಪ್ರಮುಖ ನಾರಾಯಣ ಶೇವಿರೆ, ಪತ್ರಕರ್ತ ವಿಠ್ಠಲದಾಸ ಕಾಮತ್ ತಮ್ಮ ಅನಿಸಿಕೆ ಹೇಳಿದರು.
ಅಭಾಸಾಪದ ರಾಜೇಂದ್ರ ಭಟ್ ಅವರು ದೇಶಭಕ್ತಿ ಗೀತೆ, ರಂಜನಿ ದತ್ತಾತ್ರೇಯ ಪ್ರಾರ್ಥಿಸಿ, ಸಾಹಿತಿ ರಘುನಂದನ ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ವಿನಯ ಪುರೋಹಿತ ಕಾರ್ಯಕ್ರಮ ನಿರ್ವಹಿಸಿದರು.
ಪುಸ್ತಕ ಬಿಡುಗಡೆ ಬಳಿಕ ಪರಿಸರ ಮತ್ತು ಪ್ರವಾಸೋಧ್ಯಮ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು, ಹಿರಿಯ ರಾಸ್ವಸೇ ಸಂಘದ ನಾಡಿಗ್ ಅಧ್ಯಕ್ಷತೆಯಲ್ಲಿ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಪಾಲ್ಗೊಂಡರು. ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ, ಕದಂಬ ಸಂಸ್ಥೆಯ ವಿಶ್ವೇಶ್ವರ ಹೆಗಡೆ, ಪತ್ರಕರ್ತ ವಿಠ್ಠಲದಾಸ್, ರಂಜನಿ ದತ್ತಾತ್ರೇಯ ಸಂವಾದದಲ್ಲಿ ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post