ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತನ್ನ ಕಣ್ಣಿಗೆ ಜಿಗಣೆ ಕಚ್ಚಿಕೊಂಡಿದೆ ಎಂದು ತಪ್ಪು ತಿಳಿದುಕೊಂಡು ವ್ಯಕ್ತಿಯೊಬ್ಬ ತಿಳಿಯದೇ ತನ್ನದೇ ಕಣ್ಣು ಗುಡ್ಡೆಯನ್ನೇ ಕಿತ್ತೆಸೆದಿರುವ ಘಟನೆ ನಗರದಲ್ಲಿ ನಡೆದಿದೆ.
ಏನಿದು ಘಟನೆ?
ನಂಜುಂಡಸ್ವಾಮಿ(75) ಎಂಬ ವ್ಯಕ್ತಿಯೇ ಕಣ್ಣು ಗುಡ್ಡೆಯನ್ನೇ ಕಿತ್ತೆಸೆದ ವ್ಯಕ್ತಿ. ಜ.12ರಂದು ರಾತ್ರಿ ಟಿವಿ ನೋಡುತ್ತಿದ್ದ ನಂಜುಂಡಸ್ವಾಮಿ ಮಕ್ಕಳಿಗೆ ಚಾಕೊಲೇಟ್ ಕೊಡಿಸಿ, ಆನಂತರ ಮನೆಯ ಹೊರಗೆ ಕುಳಿತಿದ್ದಾರೆ. ಈ ವೇಳೆ ಕಣ್ಣಿನಲ್ಲಿ ಕಿರಿಕಿರಿ ಉಂಟಾಗಿದ್ದು, ಯಾವುದೇ ಹುಳ ಅಥವಾ ಜಿಗಣೆ ಸೇರಿಕೊಂಡಿದೆ ಎಂದು ಭಾವಿಸಿ, ತಮ್ಮ ಬಲ ಕಣ್ಣಿನ ಗುಡ್ಡೆಯನ್ನೇ ಕಿತ್ತು ಬಿಸಾಡಿದ್ದಾರೆ.ಆನಂತರ ತಮ್ಮ ಮೊಮ್ಮಗ ಮದನ್’ನನ್ನು ಕರೆದು ಕಣ್ಣಿನಲ್ಲಿ ಜಿಗಣೆ ಹೋಗಿತ್ತು. ಕಿತ್ತು ಬಿಸಾಡಿದ್ದೇನೆ, ಅದನ್ನು ಸಾಯಿಸು ಎಂದಿದ್ದಾರೆ. ಕತ್ತಲೆಯಲ್ಲಿ ಸರಿಯಾಗಿ ಕಾಣದ ಮದನ್ ಕಣ್ಣಿನ ಗುಡ್ಡೆಯನ್ನು ಕೋಲಿನಿಂದ ಜಜ್ಜಿ ಹಾಕಿದ್ದಾನೆ.
ಈ ವೇಳೆ ಹೊರಕ್ಕೆ ಬಂದ ನಂಜುಂಡಸ್ವಾಮಿಯವರ ಪುತ್ರ ಷಣ್ಮುಖ, ತಮ್ಮ ತಂದೆಯ ಕಣ್ಣಲ್ಲಿ ರಕ್ತ ಸೋರುತ್ತಿರುವುದನ್ನು ಗಮನಿಸಿ, ಜಜ್ಜಿದ್ದ ಜಾಗಕ್ಕೆ ಬೆಳಕು ಬಿಟ್ಟು ನೋಡಿದ್ದಾರೆ. ತಮ್ಮ ಮಗ ಹೊಡೆದಿದ್ದು ಜಿಗಣೆಯಲ್ಲ, ಬದಲಾಗಿ ತಮ್ಮ ತಂದೆಯ ಕಣ್ಣಿನ ಗುಡ್ಡೆ ಎಂಬುದು ತಿಳಿದಿದೆ.ತತಕ್ಷಣವೇ ನಂಜುಂಡಸ್ವಾಮಿ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತದೆ. ಪರೀಕ್ಷಿಸಿದ ವೈದ್ಯರು ನಮ್ಮಲ್ಲಿ ಆಗುವುದಿಲ್ಲ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸುತ್ತಾರೆ.
ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಸಲಹೆ ಮೇರೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post