ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದುವುದರ ಜೊತೆಗೆ ಶೈಕ್ಷಣಿಕ ವಾತಾವರಣದಲ್ಲಿ ದೇಶದ ಐಕ್ಯತೆ, ಸಮಾನತೆ ಬಗ್ಗೆ ಕಲಿಬೇಕು. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರವನ್ನು ಪಡೆಯಬೇಕು. ಧರ್ಮ ಆಚರಣೆ ಬಗ್ಗೆ ಆಡಳಿತ ಮಂಡಳಿಗಳು ಕ್ರಮವಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಉಡುಪಿಯ ಹಿಜಬ್ ಗೊಂದಲ ವಿಚಾರವಾಗಿ ಸುದ್ಧಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಜಬ್ ಗೊಂದಲದ ವಿಚಾರದ ಹಿಂದೆ ಮತೀಯ ಸಂಘಟನೆಗಳ ಇದ್ದಲ್ಲಿ ಈ ಬಗ್ಗೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರ ಒಗ್ಗಟ್ಟಾಗಬೇಕು ಎಂಬುದಕ್ಕೆ ಅಡ್ಡಲಾಗುವವರನ್ನು ಸರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಆದೇಶವನ್ನು ಹೊರಡಿಸಿದ್ದಾರೆ. ಶಾಲೆ-ಕಾಲೇಜಿಗೆ ಯಾರೂ ಹಿಜಬ್ ಹಾಗೂ ಕೇಸರಿ ಶಾಲುಗಳನ್ನು ಧರಿಸಿ ಬರಬಾರದು. ಎಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಭಾವಿಸಿ ವ್ಯಾಸಂಗಕ್ಕೆ ಬರಬೇಕು ಎಂದು ತಿಳಿ ಹೇಳಿದರು.
ಧಾರ್ಮಿಕ ಆಚರಣೆಗಳನ್ನು ಧಾರ್ಮಿಕ ಕೇಂದ್ರಗಳಲ್ಲಿ ಮಾಡಲಿ. ಆದರೆ ಶಾಲಾ-ಕಾಲೇಜಿನ ವಾತಾವರಣದಲ್ಲಿ ಇಂತಹ ಸಂಘರ್ಷಗಳು ಆಗಬಾರದು. ಶಾಲೆಗಳಲ್ಲಿ ಮಕ್ಕಳು ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯದಿದ್ದರೆ ಏನಾಗಬುದು ಎಂಬುದನ್ನು ಎಲ್ಲರೂ ಯೋಚನೆ ಮಾಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post