ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಮಾಜಿಕ ಸೇವಾ ಚಟುವಟಿಕೆಗಳೇ ಇನ್ನರ್‌ವ್ಹೀಲ್ ಸಂಸ್ಥೆಯ ಪ್ರಮುಖ ಆಶಯ. ಸೇವೆಯನ್ನು ನಿರಂತರವಾಗಿ ಮಾಡುವುದೇ ಶ್ರೇಷ್ಠ ಕಾರ್ಯ ಎಂದು ಇನ್ನರ್‌ವ್ಹೀಲ್ ಜಿಲ್ಲೆ ಮಾಜಿ ಜಿಲ್ಲಾ ಚರ‍್ಮನ್ ಭಾರತಿ ಚಂದ್ರಶೇಖರ್ ಹೇಳಿದರು.
ಇನ್ನರ್‌ವ್ಹೀಲ್ ಸಂಸ್ಥಾಪಕ ದಿನಾಚರಣೆ ಪ್ರಯುಕ್ತ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ವತಿಯಿಂದ ಆರ್ಥಿಕವಾಗಿ ಹಿಂದುಳಿದ, ಬಡವರ್ಗದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಸೇವೆಯ ಸದುದ್ದೇಶದೊಂದಿಗೆ ಆರಂಭಗೊಂಡಿರುವ ಇನ್ನರ್‌ವ್ಹೀಲ್ ಸಂಸ್ಥೆಯು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕಾರ್ಯಗಳನ್ನು ಸದಾ ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸೇವೆ, ಸ್ನೇಹ, ಪ್ರೀತಿಗಾಗಿ ಸ್ಥಾಪಿತವಾದ ಇನ್ನರ್‌ವ್ಹೀಲ್ ಸಂಸ್ಥೆ ಪ್ರಪಂಚಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಗೆ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸೇರ್ಪಡೆಯಾಗಬೇಕು. ಮಹಿಳೆಯರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಸ್ಥೆಯನ್ನು ಬಲಪಡಿಸುವ ಜತೆಯಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವ ಕೆಲಸಗಳನ್ನು ಮಾಡಬೇಕು ಎಂದರು.
ಇನ್ನರ್‌ವ್ಹೀಲ್ ಸಂಸ್ಥೆಯ ಅಂತರಾಷ್ಟ್ರೀಯ ಸಂಸ್ಥಾಪಕರಾದ ಮಾರ್ಗರೆಟ್ ಆಲಿವರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಇನ್ನರ್‌ವ್ಹೀಲ್ ಸ್ಥಾಪನೆ ದಿನವನ್ನು ಆಚರಿಸಲಾಗುತ್ತದೆ. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಸೇವೆ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರ ಮಾಡುವ, ಸೊಪ್ಪು, ತರಕಾರಿ, ಹಣ್ಣು ಹೂ ವ್ಯಾಪಾರ ಮಾಡುವ ಮಹಿಳೆಯರಿಗೆ ನೆರಳಿಗೆ ಅನುಕೂಲವಾಗುವಂತಹ ಛತ್ರಿಗಳನ್ನು ವಿತರಿಸಲಾಯಿತು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರು ದೇಶದ ಸಂಸ್ಕೃತಿ ಬಿಂಬಿಸುವ ಎಲ್ಲ ರಾಜ್ಯಗಳ ಸಾಂಸ್ಕೃತಿಕತೆಯ ವಿಶೇಷ ನೃತ್ಯವನ್ನು ಮಾಡುವುದರ ಮುಖಾಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವೇದಿಕೆಯಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ಜಿಲ್ಲಾ ಸಂಪಾದಕರಾದ ಶಬರಿ ಕಡಿದಾಳ್, ಪಿಡಿಸಿ ಸುಧಾ ಪ್ರಸಾದ್, ವಾಣಿ ಪ್ರವೀಣ್, ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post