ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಡುಪಿಯಿಂದ ಆರಂಭಗೊಂಡು ಈಗ ಇಡಿಯ ರಾಜ್ಯಕ್ಕೇ ವ್ಯಾಪಿಸುತ್ತಿರುವ ಹಿಜಾಬ್-ಕೇಸರಿ ಶಾಲು ಕಿಚ್ಚು ಶಿವಮೊಗ್ಗ ಸೇರಿ ಮೂರು ಕಡೆಗಳಲ್ಲಿ ಸಂಘರ್ಷದ ರೂಪ ಪಡೆದುಕೊಂಡಿರುವುದು ನಿಜಕ್ಕೂ ದುರಂತವೇ ಸರಿ.
ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಕಾಲೇಜಿನಲ್ಲಿ ಇಂದು ಮುಂಜಾನೆ ನಡೆಯುತ್ತಿದ್ದ ವಾಗ್ವಾದದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ರಕ್ಷಣಾಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ಖುದ್ದು ಅಖಾಡಕ್ಕಿಳಿದಿದ್ದಾರೆ. ಕಾಲೇಜು ಆವರಣದಿಂದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಉದ್ವೇಗಗೊಳ್ಳದಂತೆ ಸ್ವತಃ ಜಿಲ್ಲಾ ರಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತಿದ್ದರು. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಯಾರಾದರೂ ದೂರು ನೀಡಿದರೆ, ಎಫ್’ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಎಸ್’ಪಿಯವರು ತಿಳಿಸಿದ್ದಾರೆ.
ಪರೀಕ್ಷಾ ಸಮಯದಲ್ಲಿ ಇದೆಲ್ಲಾ ಬೇಕಾ?
ವರ್ಷ ಪೂರ್ತಿ ಓದಿ, ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಸಮಯವಿದೆ. ಆದರೆ, ಇಂತಹ ಸಂದರ್ಭದಲ್ಲಿ ಬಾಹ್ಯ ಶಕ್ತಿಗಳ ಪ್ರೇರಣೆಯಿಂದ ಇಂತಹ ಕೃತ್ಯಗಳನ್ನು ನಡೆಸಿ, ತಮ್ಮ ಜೀವನ ಮಾತ್ರವಲ್ಲ ಸಮಾಜದ ಸ್ವಾಸ್ಥ್ಯವನ್ನೂ ಸಹ ಹಾಳು ಮಾಡುತ್ತೇವೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.
ಇನ್ನು, ಪ್ರಮುಖವಾಗಿ ಕಳೆದ ಎರಡು ವರ್ಷದಿಂದಲೂ ಕೋವಿಡ್ ಕಾರಣದಿಂದ ಎಲ್ಲರ ಜೀವನವೂ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಇಂತಹ ವಿವಾದಗಳಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಟ್ಟರೆ ಮುಂದೆ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
ಬಾಪೂಜಿ ನಗರ ಸರ್ಕಾರಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆದ ನಂತರ ನಗರದ ಬಿಎಚ್ ರಸ್ತೆಯಲ್ಲಿ ಎರಡೂ ಕೋಮಿನ ಮಂದಿ ಮೆರವಣಿಗೆ ರೀತಿಯಲ್ಲಿ ಘೋಷಣೆಗಳನ್ನು ಕೂಗಿ ಸಾಗುತ್ತಿದ್ದರು. ಇಂತಹ ವರ್ತನೆಗಳು ನಾಗರಿಕರಲ್ಲಿ ಯಾವ ಸಂದೇಶ ನೀಡುತ್ತದೆ, ಎಂತಹ ಭಯದ ವಾತಾವರಣ ಸೃಷ್ಠಿಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಿದೆ.
ಸಮಾಜದಲ್ಲಿ ಶಾಂತಿ ಕಾಪಾಡಿ, ಸೌಹಾರ್ದತೆಯಿರಬೇಕು ಎಂದು ಸರ್ಕಾರ, ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಾಹ್ಯ ಶಕ್ತಿಗಳಿಂದ ಪ್ರೇರಣೆಗೊಂಡು ವಿದ್ಯಾರ್ಥಿಗಳು ಉದ್ವೇಗದ ವರ್ತನೆಗಳಿಗೆ ಕೈ ಹಾಕುವುದರಿಂದ ನಿಮ್ಮಗಳ ಭವಿಷ್ಯಕ್ಕೇ ಕೊಡಲಿ ಪೆಟ್ಟು ಬೀಳುತ್ತದೆ. ನೆನಪಿರಲಿ ಯಾವುದೇ ನಿಮಗೆ ಪ್ರೇರಣೆ ನೀಡುವ ಯಾವುದೇ ಇಂತಹ ಬಾಹ್ಯ ಶಕ್ತಿಗಳು ನಿಮ್ಮ ಭವಿಷ್ಯ ರೂಪಿಸುವಲ್ಲಿ ನೆರವಾಗುವುದಿಲ್ಲ. ನಿಮ್ಮ ಜೀವನವನ್ನು ನೀವುಗಳೇ ರೂಪಿಸಿಕೊಳ್ಳಬೇಕು. ಇದಕ್ಕಾಗಿ, ಶಿಕ್ಷಣ ಮುಖ್ಯವೇ ಹೊರತು ಧರ್ಮ ಹಾಗೂ ಯಾವುದೇ ಸಿದ್ದಾಂತಗಳಲ್ಲ ಎಂಬುದನ್ನು ನೆನಪಿನಲ್ಲಿಡಿ.
ಪೊಲೀಸರೊಂದಿಗೆ ಸಹಕರಿಸಿ
ಇನ್ನು, ಈಗ ಕಾಲೇಜುಗಳಲ್ಲಿ ಆರಂಭವಾಗಿರುವ ವಿವಾದ ನಿಧಾನವಾಗಿ ನಗರಕ್ಕೆ ವ್ಯಾಪಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇಂತಹ ಘಟನೆಗಳು ನಗರದ ಬಿಎಚ್ ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಯಾವುದೇ ರೀತಿಯಲ್ಲೂ ಕೈಮೀರದಂತೆ ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸ್ವತಃ ಎಸ್’ಪಿ ಲಕ್ಷ್ಮೀಪ್ರಸಾದ್ ಅವರೇ ಅಖಾಡಕ್ಕಿಳಿದಿದ್ದಾರೆ.
ಹೀಗಾಗಿ, ಸಾರ್ವಜನಿಕರು, ವಿದ್ಯಾರ್ಥಿಗಳು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ, ನಗರದಲ್ಲಿರುವ ಶಾಂತಿ ಕದಡದಂತೆ ಪೊಲೀಸರು ಹಾಗೂ ಜಿಲ್ಲಾಡಳಿತ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ಸಹಕರಿಸಿ ಎಂಬುದು ಕಲ್ಪ ಮೀಡಿಯಾ ಹೌಸ್ ಮನವಿ.
-ಕಲ್ಪ ಮೀಡಿಯಾ ಹೌಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post