ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ರಾಷ್ಟ್ರದ ಹಿತಾಸಕ್ತಿ ಕಾಯ್ದುಕೊಳ್ಳಲು ಅಭಿವೃದ್ಧಿ ಚಟುವಟಿಕೆಗಳು ಎಷ್ಟು ಮುಖ್ಯವೋ, ಜೀವವೈವಿಧ್ಯ ಮತ್ತು ವನ್ಯಜೀವಿ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
“ವನ್ಯಜೀವಿ ಅಧ್ಯಯನದಲ್ಲಿ ಕ್ಷೇತ್ರ ಸಂಶೋಧನಾ ತಂತ್ರಗಳು” ವಿಷಯ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಬುಧವಾರದಿಂದ ಆರಂಭವಾಗಿರುವ ಒಂದು ವಾರದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಬಗೆಯ ನೈಸರ್ಗಿಕ ವಿಕೋಪಗಳು, ಮತ್ತು ಮಾನವ ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳು ವಾತಾವರಣದಲ್ಲಿ ಗುರುತರ ಬದಲಾವಣೆಗಳಿಗೆ ಕಾರಣವಾಗಿರುವುದು ನಿರ್ವಹಣೆಯ ದೃಷ್ಟಿಯಿಂದ ರಾಷ್ಟ್ರ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ಇಂದು ಜಗತ್ತು ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಸಂದರ್ಭ ಈಗ ಬಂದೊದಗಿದೆ. ಪರಿಸರ ಸಚಿವಾಲಯ ಮತ್ತು ಇಲಾಖೆ ದೇಶದ ಜೀವವೈವಿಧ್ಯತೆ, ಅರಣ್ಯ ಸಂಪತ್ತು ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿಕೊಂಡು, ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಅತ್ಯಂತ ಪ್ರಭಾವಿ ವೇದಿಕೆಯಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮಾತನಾಡಿ, ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಅಭಿವೃದ್ಧಿಯ ಚಟುವಟಿಕೆಗಳು ನಡೆಯುವಂತಹ ವಾತಾವರಣವನ್ನು ನಿರ್ಮಿಸಬೇಕಿದೆ. ಪರಿಸರ ಸಂರಕ್ಷಣೆ ಯಾವುದೇ ಯೋಜನೆಯ ನಿರ್ಣಾಯಕ ಅಂಶವಾಗಿ ಪರಿಗಣಿತವಾಗಬೇಕಿದೆ. ಅದು ಗಣಿಗಾರಿಕೆ ಇರಬಹುದು, ವಿಶೇಷ ಆರ್ಥಿಕ ವಲಯ ಸ್ಥಾಪನೆ ಇರಬಹುದು, ರಸ್ತೆಗಳು, ರೈಲು ಮಾರ್ಗಗಳು, ಕಾರ್ಖಾನೆಗಳು, ಉತ್ಪಾದನಾ ಘಟಕಗಳ ನಿರ್ಮಾಣ ಇರಬಹುದು, ಪರಿಸರಕ್ಕೆ ಸಂಬಂಧಿಸಿದ ಆಡಿಟಿಂಗ್ ಕಡ್ಡಾಯವಾಗಿ ಆಗಬೇಕು. ಇದು ಶಾಸನಾತ್ಮಕ ಸ್ವರೂಪ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ವಾರ ನಡೆಯುವ ಕಾರ್ಯಾಗಾರದಲ್ಲಿ ವನ್ಯಜೀವಿ ತಜ್ಞರಾದ ಪೂರ್ಣೇಶ ಎಚ್. ಸಿ, ಶ್ರವಣ ಸುತರ್, ಮಲೈಕಾ ಎಂ. ಸಿ, ಕಿರಣ್ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ, ಡಾ. ಬಿ. ತಿಪ್ಪೇಸ್ವಾಮಿ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post