No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Tuesday, January 27, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಶಿವಮೊಗ್ಗ: ಎರಡು ದಿನ ದೊಡ್ಡಮ್ಮ ದೇವಿಯ ಭಕ್ತರ ಸಮಾಗಮ | ದೇವಿ ಮಹಿಮೆ ಸಾರುವ ಕೃತಿ ನಾಳೆ ಲೋಕಾರ್ಪಣೆ

ಪತ್ರಕರ್ತರಾಗಿದ್ದ ಇವರಲ್ಲಿ ಪವಾಡ ಸದೃಶ ಬದಲಾವಣೆ: ಇಲ್ಲಿ ಭಗವತಿ ದರುಶನಕ್ಕೆ ದಕ್ಷಿಣೆ ಇಲ್ಲ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 14, 2022
in Special Articles, ಶಿವಮೊಗ್ಗ
0
ಶಿವಮೊಗ್ಗ: ಎರಡು ದಿನ ದೊಡ್ಡಮ್ಮ ದೇವಿಯ ಭಕ್ತರ ಸಮಾಗಮ | ದೇವಿ ಮಹಿಮೆ ಸಾರುವ ಕೃತಿ ನಾಳೆ ಲೋಕಾರ್ಪಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ನಿರಂತರ ಸಾಧನೆಯಲ್ಲಿರುವ ವ್ಯಕ್ತಿಗೆ ಒಂದು ದಿನ ದಿವ್ಯ ದರ್ಶನವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಶಿವಮೊಗ್ಗದ ದೇವಿ ಉಪಾಸಕ ಶ್ರೀ ಸಿದ್ದಪ್ಪ.

16 ವರುಷಗಳಿಂದ ಸಾಂಸಾರಿಕ ಜೀವನದೊಂದಿಗೆ ಅಧ್ಯಾತ್ಮದ ಅನುಭೂತಿಯನ್ನೂ ತಮ್ಮದಾಗಿಸಿಕೊಂಡಿರುವ ಸಿದ್ದಪ್ಪ ಅವರ ಮನೆಯೇ ಈಗ ಮಂದಿರವಾಗಿದೆ. ಮನಸು ಅಸಂಖ್ಯ ಭಕ್ತರ ಪ್ರೀತಿ, ವಿಶ್ವಾಸ ಮತ್ತು ಭರವಸೆಗಳ ಆಶ್ರಯ ತಾಣವಾಗಿದೆ. ಉತ್ಸವ ಮೂರ್ತಿ ರೂಪದಲ್ಲಿ ದೇವಿ ಅವರ ಮನೆಯಲ್ಲಿ ನೆಲೆಸಿದ್ದರೆ, ದಿವ್ಯ ವಾಣಿ ಮೂಲಕ ಆಕೆ ಸಿದ್ದಪ್ಪ ಅವರಲ್ಲಿ ಅಂತರ್ಗತವಾಗಿದ್ದಾಳೆ. ದೇವಿಯ ಆಜ್ಞೆ ಮತ್ತು ಭಕ್ತಗಣದ ಆಶಯಕ್ಕೆ ಅನುಗುಣವಾಗಿ ಇದೇ ಮಾರ್ಚಿ 15 ಮತ್ತು 16ರಂದು ವಿಶೇಷ ಧಾರ್ಮಿಕ ಸಮಾರಂಭವೊಂದು ಸಿದ್ದಪ್ಪ ಅವರ ಮನೆ ಆವರಣದಲ್ಲಿ ನೆರವೇರಲಿದೆ.

ವಿನೋಬನಗರ ರೈಲ್ವೆ ಹಳಿ ಆಚೆಯ ಸೋಮಿನಕೊಪ್ಪ ಕೆಎಚ್‌ಬಿ ಬಡಾವಣೆಯಲ್ಲಿ ಧಾರ್ಮಿಕ, ಅಧ್ಯಾತ್ಮಿಕ ರಂಗದ ಅಪ್ರತಿಮ ಸಾಧಕರು, ಚಿಂತಕರು, ದೇವಿ ಅನುಯಾಯಿಗಳು, ಭಕ್ತರು ಸಮ್ಮಿಲನಗೊಳ್ಳಲಿದ್ದಾರೆ. ಇದರ ಅಂಗವಾಗಿ ಮಾ. 15ರ ಬೆಳಗ್ಗೆ 9ಕ್ಕೆ ಚಂಡಿಕಾಯಾಗ, 10.30ಕ್ಕೆ ‘ಶ್ರೀ ದೊಡ್ಡಮ್ಮ ದೇವಿ ಮಹಿಮೆ-ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿದೆ.

ಬೆಂಗಳೂರಿನ ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾ ವಿವೇಕಮಯಿ ಅವರು ‘ಶ್ರೀ ದೊಡ್ಡಮ್ಮ ದೇವಿ ಮಹಿಮೆ-ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಹೊಸಕೋಟೆ ಶ್ರೀಮಾತಾ ಶಾರದಾಶ್ರಮದ ಶ್ರೀಮಾತಾ ಬ್ರಹ್ಮಮಯಿ, ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಮುಖ್ಯಸ್ಥರಾದ ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ, ಮೈಸೂರಿನ ಗುರುಭಕ್ತೆ ಸೀತಮ್ಮ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ. ಡಿವಿಎಸ್ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಸಿ.ಎಸ್. ನಂಜುಂಡಯ್ಯ, ಪತ್ರಕರ್ತ ಗಜೇಂದ್ರ ಕುಡಾಲ್ಕರ್, ಶಿಕಾರಿಪುರದ ಶಿಕ್ಷಕ ಎಂ. ವಿನಾಯಕ ಅವರಿಗೆ ಇದೇ ಸಂದರ್ಭ ಅಭಿನಂದನೆ ಸಲ್ಲಿಸಲಾಗುವುದು. ದೊಡ್ಡಮ್ಮದೇವಿ ಉಪಾಸಕರಾದ ಶ್ರೀ ಸಿದ್ದಪ್ಪಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾ ವಿವೇಕಮಯಿ

ಮಾ. 16ರಂದು ಬೆಳಗ್ಗೆ 9ಕ್ಕೆ ಅಮ್ಮನವರ ಮೆರವಣಿಗೆ, ಆರತಿ ಸೇವೆ, ವಿಶೇಷ ಕೆಂಡದಾರ್ಚನೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಸೋಮಿನಕೊಪ್ಪದ ಕೆಎಚ್‌ಬಿ ಕಾಲನಿಯಲ್ಲಿರುವ ಸಿದ್ದಪ್ಪಾಜಿ ಅವರ ನಿವಾಸದಲ್ಲಿ ಎರಡೂ ದಿನದ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಭಕ್ತರಿಗೆ ಮುಕ್ತ ಪ್ರವೇಶವಿದೆ.

ದೇವಿ ಉಪಾಸನೆಯಿಂದ ದೊರೆತ ಅನುಗ್ರಹದ ಫಲವಾಗಿ ಸಿದ್ದಪ್ಪ ತಮ್ಮ ದಿವ್ಯ ವಾಣಿಯಿಂದ ಸಾವಿರಾರು ಭಕ್ತರ ಸಂಕಷ್ಟಗಳನ್ನು ನಿವಾರಿಸಿದ್ದಾರೆ. ಜೀವನದಲ್ಲಿ ನೊಂದು- ನರಳಿ ದೂರದೂರದ ಊರಿನಿಂದ ಬಂದ ಪಾಮರರ ಕಣ್ಣೀರನ್ನು ಒರೆಸಿದ್ದಾರೆ. ಕಾನೂನು ಪದವೀಧರರಾಗಿ, ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಾಗಿ ಸಿದ್ದಪ್ಪ 20 ವರ್ಷ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಸೇವೆ ಸಲ್ಲಿಸಿದ್ದಾರೆ. ರಂಗನಟರು, ಕವಿ ಮತ್ತು ಕಥೆಗಾರರಾಗಿಯೂ ಬಹುಮುಖಿ ರಂಗದಲ್ಲಿ ಕಾರ್ಯ ನಿರ್ವಹಿಸಿದ ಅವರಿಗೆ ಮಿತ್ರವೃಂದವೂ ಬಹಳ ದೊಡ್ಡದಿದೆ. ಗಣ್ಯರ ವಲಯದ ನಿಕಟಾತಿನಿಕಟ ಸಂಪರ್ಕವಿದೆ. ಹೀಗೆ ಸಿದ್ದಪ್ಪ ಅವರನ್ನು ಬಹಳ ಹತ್ತಿರದಿಂದ ಕಂಡವರು, ದೇವಿ ನುಡಿಯಿಂದ ಅನುಗ್ರಹೀತರಾಗಿರುವ ಆಯ್ದ ಭಕ್ತರು ‘ಶ್ರೀ ದೊಡ್ಡಮ್ಮ ದೇವಿ ಮಹಿಮೆ’-ಕೃತಿಯಲ್ಲಿ ತಮ್ಮ ಪ್ರೌಢ ಚಿಂತನೆ, ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವುಗಳಿಗೆಲ್ಲ ಈಗ ಒಂದು ಸಮಗ್ರ ಕೃತಿಯಾಗಿ ಹೊರಬರುವ ಸುಸಂದರ್ಭ ಒದಗಿದೆ.
100 ಪುಟಗಳ ಈ ಕೃತಿಯಲ್ಲಿ ಶಿವಮೊಗ್ಗ ಮೂಲದ ಲೇಖಕ ಮತ್ತು ವಿಜಯವಾಣಿ ದಿನಪತ್ರಿಕೆ ಮೈಸೂರು ಆವೃತ್ತಿ ಕಚೇರಿಯ ಮುಖ್ಯ ಉಪ ಸಂಪಾದಕ ಎ.ಆರ್. ರಘುರಾಮ್ ಅವರ ಅಗ್ರ ಲೇಖನವೂ ಅಡಕವಾಗಿರುವುದು ವಿಶೇಷ. ಅದು ಇಡೀ ಕೃತಿಯ ಆಶಯವನ್ನು, ಸಿದ್ದಪ್ಪನವರೊಂದಿಗಿನ ಒಡನಾಟವನ್ನೂ, ದೇವಿಯ ಮಹಿಮಾಮೃತದ ಫಲ ದೊರೆತ ಪರಿಯನ್ನು, ಸಹ ಜೀವನದ ಮಾಧುರ್ಯವನ್ನೂ, ಸನ್ಮಿತ್ರರ ಮಹತ್ವವನ್ನೂ ಅಡಗಿಸಿಕೊಂಡಿದೆ. ಈ ಲೇಖನದ ಪೂರ್ಣಪಾಠ ನಮ್ಮ ‘ಕಲ್ಪ ಮೀಡಿಯಾ ಹೌಸ್’ನ ಡಿಜಿಟಲ್ ಮೀಡಿಯಾ’ ಓದುಗ ವರ್ಗಕ್ಕೆ ನೀಡಲು ಬಹಳ ಹೆಮ್ಮೆ ಎನಿಸುತ್ತಿದೆ.

ತಡವೇಕೆ…. ಬನ್ನಿ… ಓದಿನಲ್ಲಿ ನೀವು ಒಂದಾಗಿ…..ಭಕ್ತಿ ಭಾವದ ಲೋಕದಲ್ಲಿ ಮಿಂದು ಪುನೀತರಾಗಿ.

ಭಕುತಿ ಮಾರ್ಗದಿಂದ ಬಂಧುತ್ವಕ್ಕೆ ಬೆಳಕು
ಇದು ಸಾಧಾರಣ ಗೆಳೆತನಕ್ಕೆ ಮೀರಿದ ಮಿತ್ರತ್ವ. ಲೌಕಿಕ ಸಂಗತಿಗಳನ್ನು ದಾಟಿದ ಬಂಧುತ್ವ. ವಿಚಾರಗಳ ವಿನಿಮಯದಲ್ಲೂ ಒಂದು ನವಿರಾದ ಘನತೆ ಮತ್ತು ಗೌಪ್ಯತೆ ಪಾಲನೆ. ವಿವಿಧ ಸಂಗತಿಗಳ ಅರ್ಥಪೂರ್ಣ ತುಲನೆ. ಚರ್ಚೆಗೆ ಬರುವ ಸಂಗತಿಗಳೆಲ್ಲವೂ ಸರ್ವೋತೃಷ್ಟವಾಗಿಯೇ ಇರುತ್ತಿದ್ದದ್ದು ಮತ್ತೊಂದು ವಿಶೇಷ. ಇಬ್ಬರ ನಡುವೆ ವಯಕ್ತಿಯವಾಗಿ ಎಷ್ಟೇ ಸಲುಗೆ-ಸಾಂಗತ್ಯ-ಸಾಮೀಪ್ಯವಿದ್ದರೂ ಸಾರ್ವಜನಿಕ ವೇದಿಕೆಗೆ ಬಂದಾಗ, ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಗುರುತರ ವ್ಯಕ್ತಿತ್ವಗಳೊಂದಿಗೆ ಸಂಪರ್ಕ ನಿರ್ವಹಿಸುವಾಗ ಸಮಾನ ಗೌರವ, ಸಂಯಮ ಮತ್ತು ಸೌಹಾರ್ದಗಳು ಪರಸ್ಪರ ಸದ್ದಿಲ್ಲದೇ ಪ್ರಕಟವಾಗುತ್ತಿದ್ದವು ಎಂದು ನೆನಪಿಸಿಕೊಳ್ಳಲು ಬಹಳ ಹೆಮ್ಮೆ ಎನಿಸುತ್ತದೆ.

ಹೌದು.

ಇದು ನನ್ನ ಮತ್ತು ಸಿದ್ದಪ್ಪ ಅವರ ನಡುವೆ ಎರಡು ದಶಕಗಳಿಗೂ ಮೀರಿದ ಅವಿನಾಭಾವ ನಂಟು. ನಾಳಿನ ಬದುಕು ಹೇಗೆ ಎಂದು ಚಿಂತನ-ಮಂಥನ ನಡೆಸಿ ಇನ್ನೇನು ಸುಂದರ ಕನಸು ಕಟ್ಟಿಕೊಳ್ಳೋಣ ಎನ್ನುವಷ್ಟರಲ್ಲೇ ಢಾಳಾಗಿ ಬಂದು ಎದುರಾಗುವ ಸಾಲು ಸಾಲು ಸಮಸ್ಯೆಗಳು… ಹಾಗಿದ್ದೂ ಜತೆ ಜತೆಗೆ ದಶಕಗಳ ಕಾಲ ಒಂದೇ ಕಚೇರಿಯಲ್ಲಿ ಅಕ್ಕ ಪಕ್ಕ ಕುಳಿತು ಒತ್ತಡದ ಸಂದರ್ಭಗಳನ್ನೂ ನಿರ್ವಹಿಸುತ್ತಲೇ ಬೆವರ ಹನಿಗಳ ನಡುವೆ ನಮ್ಮ ನಮ್ಮ ಕಷ್ಟದ ಘಳಿಗೆಗಳನ್ನು ಮರೆತು ಮೊಗದ ಮೇಲೆ ಒಂದು ತಿಳಿಹಾಸ್ಯ ಮೂಡಿಸಿಕೊಳ್ಳುತ್ತಿದ್ದದ್ದು -ವಾಹ್. ಅದರ ಸಂಭ್ರಮವೇ ಬೇರೆ. ಕಚೇರಿಯ ಕರ್ತವ್ಯವನ್ನೆಲ್ಲಾ ಮುಗಿಸಿ ರಾತ್ರಿ 11 ಆಗಿದ್ದರೂ ನಮ್ಮ ಮನೆಯ ಬಾವಿ ಕಟ್ಟೆಯ ಕೆಳಗೆ ಊಟಕ್ಕೆ ಕೂತಾಗ ‘ಅರಸನಂತೆ ಉಣ್ಣುವ’ ಖುಷಿ. ಅಲ್ಲೊಂದಿಷ್ಟು ಹೃದಯ ಹೊಮ್ಮುವ ನಗು. ಜೀವನ ಅರಳಲು ಇವೆಲ್ಲವೂ ಭದ್ರ ಬುನಾದಿಗಳಾದವು.

ಕಾಡುವ ಬಡತನವೋ, ಜೀವನದ ಹಾದಿಯ ಕಗ್ಗತ್ತಲುಗಳೋ, ಬೇಡವೆಂದೂ ಬಂದೆರಗುವ ಸಂಕಷ್ಟಗಳೋ, ಏನಾದರೂ ವಿಶೇಷವಾಗಿ ಮಾಡಿಯೇ ವಿರಮಿಸೋಣ ಎಂದರೆ ಅಷ್ಟರಲ್ಲೇ ಅಟಕಾಯಿಸಿಕೊಳ್ಳುವ ಅನಿಷ್ಟಗಳೋ- ಇದಕ್ಕೆಲ್ಲಾ ಅಪವಾದ ಎಂಬಂತೆ ಧುತ್ತನೆ ಬಂದು ಅಲಂಕರಿಸುವ ವೇದಿಕೆ, ಸನ್ಮಾನ, ಪ್ರಶಸ್ತಿಗಳೋ ಅಂತೂ ಇಂತು ನನ್ನ- ಸಿದ್ದಪ್ಪನವರ ನಡುವೆ ಸಾಕಷ್ಟು ಭಿನ್ನತೆಗಳು ಇದ್ದರೂ ಬದುಕಿನ ಬಗ್ಗೆ ಚಿಂತಿಸುವ ಧಾಟಿಯಲ್ಲಿ ಸಾಕಷ್ಟು ಸಾಮ್ಯತೆ ಇದ್ದ ಕಾರಣಕ್ಕಾಗಿ ಒಂದು ರೀತಿಯ ಬಂಧುತ್ವ ಉಗಮಿಸಿತು. ಹಾಲು- ಜೇನುಗಳ ಮಿಲನಕ್ಕೆ ಒಂದಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು. ರಂಗ ಭೂಮಿಯಲ್ಲಿ ಪಾತ್ರಗಳನ್ನು ನೀಡಿದರು. ಟೀಂ ಗಳಲ್ಲಿ ಕೆಲಸ ನಿರ್ವಹಣೆ ಕುಶಲತೆ ‘ಪಾಠ’ ಕಲಿಸಿದರು. ಸ್ಪರ್ಧಾತ್ಮಕ ಬರವಣಿಗೆಗಳಿಂದ ನಮ್ಮ ನಮ್ಮಲ್ಲೇ ಪರಸ್ಪರ ಹೊಸತನಗಳು ಟಿಸಿಲೊಡೆದವು.

ಪತ್ರಿಕೆಯ ಪ್ರಧಾನ ಸಂಪಾದಕರೊಡನೆ ಇಬ್ಬರಿಗೂ ಒಂದು ರೀತಿಯಲ್ಲಿ ಸಮಾನ ಸಖ್ಯ ಬೆಸೆದುಕೊಂಡಿತ್ತು. ಹೀಗೆ 26ರಿಂದ 40ರ ವಯೋಮಾನದ ವರೆಗೆ ನಾವಿಬ್ಬರೂ ಕಾಲೆಳೆಯುವ ಜನಗಳ ನಡುವೆಯೂ ಕಲೆತದ್ದು-ಕಲಿತದ್ದು ಹಲವು ಹತ್ತು. ಬೆಂಬಲಿಸುವ ಆತ್ಮೀಯ ಹೃದಯಗಳಿಂದ ಪಡೆದ ಹಾರೈಕೆಗಳು ಸಾವಿರಾರು.
ಬೆಳಗ್ಗೆ ಕಾನೂನು ಪದವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರೂ ಸಂಜೆ ಯಿಂದ ರಾತ್ರಿ 2 ರ ವರೆಗೆ ಪಾಳಿ ಇರುವ ಉದ್ಯೋಗಕ್ಕೆ ಸೇರಿಕೊಳ್ಳುವುದು ಸಿದ್ದಪ್ಪ ಅವರಿಗೆ ಅಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿತ್ತು. ರಾಜ್ಯ ಮಟ್ಟದ ಪ್ರತಿಷ್ಠಿತ ಪತ್ರಿಕೆಯಲ್ಲಿ ಇಬ್ಬರೂ ಸಹೋದ್ಯೋಗಿಗಳಾಗಿದ್ದಾಗಿನ ಸಂದರ್ಭವದು. ಸುದ್ದಿಗಳ ಕರಡು ತಿದ್ದುವಾಗ ಒಂದಿನಿತೂ ಸಿದ್ದಪ್ಪ ಕಣ್ಣು ತಪ್ಪುವಂತೆಯೇ ಇಲ್ಲ. ಕೌಟುಂಬಿಕ ಜಂಜಡಗಳು ಕಣ್ಣೆದುರು ಬರುವಂತಿಲ್ಲ. ಆತನಿಗೋ ಮನೆ- ಮನೆತನ, ಒಡ ಹುಟ್ಟಿದವರನ್ನು ನೆಲೆ ನಿಲ್ಲಿಸುವ ಗುರುತರ ಜವಾಬ್ದಾರಿ, ಇನ್ನೊಂದೆಡೆ ಕಾನೂನು ಪದವಿ ಶಿಕ್ಷಣ, ಇವೆಲ್ಲವಕ್ಕೂ ಒಂದಷ್ಟು ನೆರವಾಗಲಿ ಎಂಬುದಕ್ಕೆ ನಿದ್ರಿಸುವ ಸಮಯದಲ್ಲೂ ವೃತ್ತಿ- ಹೀಗೆ ನಿತ್ಯದ ವಿದ್ಯಮಾನದ ಹಲವು ಪ್ರಸಂಗದಲ್ಲಿ ಸಂಕಷ್ಟ-ನೋವು, ಅನಪೇಕ್ಷಿತ ಹೊಡೆತಗಳು, ಶೋಷಣೆ ಅನುಭವಿಸಿ ಅನುಭವಿಸಿ ರೋಸಿಹೋಗಿದ್ದ ಮನೋ ಭೂಮಿಕೆಯಲ್ಲಿ ಕೆಲ ವರ್ಷ ಹೋರಾಟ ಮನೋಭಾವದ ವಿಚಾರಧಾರೆಗಳು ಮನೆ ಮಾಡಿಬಿಟ್ಟಿದ್ದವು. ಅಂದಿನ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಸಿದ್ದಪ್ಪ ಅವರ ‘ ಸೋಷಿಯಲಿಸ್ಟ್ ನಾಯಿ’ ಎಂಬ ಕಥೆಗೆ ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಬಹುಮಾನವೂ ಬಂದದ್ದು ರಾಜ್ಯ ಮಟ್ಟದಲ್ಲಿ ಸಾಕಷ್ಟು ಚರ್ಚೆ ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು. ಇದನ್ನೆಲ್ಲಾ ನೆನಪಿಸಿಕೊಳ್ಳಲು ಒಂದು ಗುರುತರವಾದ ಕಾರಣವೂ ಇದೆ ಎನ್ನಿ.

ಹೊಟ್ಟೆಗೆ ಸರಿಯಾದ ಸಮಯಕ್ಕೆ ಹಿಟ್ಟು ಇಲ್ಲದಿದ್ದರೂ ಏನಂತೆ? ನಮ್ಮ ಜುಟ್ಟು ಸದಾ ಮಲ್ಲಿಗೆಯ ಸ್ನೇಹವಲಯದಲ್ಲೇ ಆತ್ಮಾನಂದವನ್ನು ಅನುಭವಿಸುತ್ತಿತ್ತು. ಅಲ್ಲಿ ಹಸಿವು, ನಿದ್ರೆ, ವಯೋ ಸಹಜ ಬಯಕೆಗಳತ್ತ ಹೆಚ್ಚಾಗಿ ಸುಳಿಯಲೇ ಇಲ್ಲ. ಬರೋಬ್ಬರಿ 20 ವರುಷಗಳ ನಂತರ ಇವೆಲ್ಲವನ್ನೂ ಅವಲೋಕಿಸಿ ಅದನ್ನು ಅಕ್ಷರ ರೂಪಕ್ಕೆ ಇಳಿಸುವಾಗ ಒಂದು ಧನ್ಯತಾಭಾವ ಮೂಡುತ್ತದೆ.

ಭಗವಂತಾ… ನೀನು ಆರ್ಥಿಕವಾಗಿ ಬಡತನವನ್ನು ಕೊಟ್ಟಿದ್ದೆ. ಆದರೆ ಸಾಮಾಜಿಕ ಸಂಪರ್ಕದಲ್ಲಿ, ತಿಳಿದವರ ಒಡನಾಟದಲ್ಲಿ, ಉತ್ತಮ ಬರಹ, ಕೃತಿ-ಗ್ರಂಥಗಳಲ್ಲಿ ಪರಮೋತ್ಕೃಷ್ಠವಾದದ್ದನ್ನೇ ದಯಪಾಲಿಸಿದೆ. ಬಿಸಿ ರಕ್ತದ ವಯೋಮಾನದಲ್ಲಿ ಜೀವನವನ್ನು ಹದಪಾಕವನ್ನಾಗಿಸಿದೆ. ಅಧ್ಯಾತ್ಮದ ಮೆಟ್ಟಿಲನ್ನು ಪ್ರವೇಶ ಮಾಡಲು ಉನ್ನತೋನ್ನತ ರಹದಾರಿಯನ್ನು ದರ್ಶನ ಮಾಡಿಸಿದೆ. ಪಾರಮಾರ್ಥಿಕವಾಗಿ ಒಂದಷ್ಟನ್ನು ಪರಾಮರ್ಷಿಸಲು ‘ಶ್ರೀಪಾದ’ಗಳ ಸಾಮೀಪ್ಯಕ್ಕೆ ಕರೆದೊಯ್ದೆ. ವಿವಿಧ ಮಠ-ಪೀಠಾಧೀಶರೊಂದಿಗೆ ಸಾವಧಾನವಾಗಿ, ಆಪ್ತವಾಗಿ ಕುಳಿತು ಹಲವು ಹತ್ತು ವಿಷಯಗಳನ್ನು ಕೇಳಿ ತಿಳಿಯುವ, ಮನನ ಮಾಡುವ, ಧ್ಯಾನಿಸುವ, ಅದರ ಸಾರ ಸಂಗ್ರಹ ರೂಪವನ್ನು ಬರಹಕ್ಕೆ ಇಳಿಸುವ ಸಂದರ್ಭಗಳು ಹಲವು ಹತ್ತು. ಒಂದೊಂದೂ ವರ್ಣಿಸಲು ಅಸದಳ.
ಆನೋ ಭದ್ರಃ, ಕೃತವೋಯಂತು ವಿಶ್ವತಃ- ಇಷ್ಟೆಲ್ಲಾ ಭದ್ರ, ಸುಭದ್ರ ನೆಲೆಗಟ್ಟನ್ನು ಒದಗಿಸಿದ ಮೇಲೆ ಅಂತರಂಗದ ಜ್ಯೋತಿಯೊಂದು ‘ಬೆಳಕು’ ನೀಡಲು ಪ್ರಾರಂಭ ಮಾಡಲೇಬೇಕಲ್ಲವೇ ? ಅಂದಹಾಗೆ ಸಿದ್ದಪ್ಪ ಹುಟ್ಟಿ ಬೆಳೆದ ಮನೆಯ ಹೆಸರೂ ‘ಬೆಳಕು’. ಇದು ಜಗನ್ಮಾತೆಯ ಮಹಾ ಕರುಣೆಯ ಕೃಪೆ. ಮಮಕಾರದ ಮಹತ್ತು. ಕೃಪಾಶೀರ್ವಾದದ ಕೈಂಕರ್ಯ ಎನ್ನಲು ಯಾವುದೇ ಸಂಕೋಚವೇ ಇಲ್ಲ. ಅಂದು ಮೂಡಿದ ಬೆಳಕಿನ ಸೆಲೆ ಇಂದು ಪ್ರಭೆಯಾಗಿ ರೂಪುಗೊಂಡಿದೆ. ನೊಂದವರ ಬಾಳಿಗೆ ಮಾರ್ಗದರ್ಶಿಯಾಗಿದೆ.

ಅರಿವಿನಿಂದ- ಗುರುವಿನೆಡೆಗೆ
ನಮ್ಮ ಜನ್ಮಭೂಮಿ, ಕರ್ಮಭೂಮಿಯಾದ ಶಿವಮೊಗ್ಗಕ್ಕೆ ಆಗ ತಾನೇ ರಾಮಕೃಷ್ಣಾಶ್ರಮದ ಯತಿಗಳೊಬ್ಬರು ಆಗಮಿಸಿದ್ದರು. ಮಿತ್ರ ಕಿರಣ ಹೆಗ್ಗದ್ದೆ ಅವರ ಪರಿಚಯ ಮಾಡಿಕೊಟ್ಟ. ಸಂದರ್ಶನಕ್ಕೆ ಗುರುಗಳು ಅನುಮತಿ ನೀಡಿದರು. ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಎಂಬುದು ಅವರ ನಾಮಧೇಯ. ಅವರ ಸಾಂಗತ್ಯದಿಂದ ರಾಮಕೃಷ್ಣ ವಿವೇಕಾನಂದ ಆಶ್ರಮ ಹತ್ತಿರ ಹತ್ತಿರವಾಯಿತು. ನನಗೆ ಯಾರೇ ಪೂಜ್ಯರು ಸಿಗಲಿ, ಅವರ ಬಗ್ಗೆ ಸಿದ್ದಪ್ಪನವರೊಂದಿಗೆ ಅಂದೇ ಒಂದು ವಿಚಾರ ವಿನಿಮಯ ಆಗುತ್ತಲಿತ್ತು. ಅವರಿಗೂ ರಾಮಕೃಷ್ಣಾಶ್ರಮದ ನಂಟು ಬೆಳೆಯಿತು. ಮೈಸೂರಿನ ಆಶ್ರಮದಲ್ಲಿ ಮಂತ್ರದೀಕ್ಷೆಯೂ ಆಯಿತು.
ಪರೀಕ್ಷೆ ಮಾಡದೇ ಯಾರನ್ನೂ ಒಪ್ಪಿಕೊಳ್ಳಬೇಡ, ಪರಾಮರ್ಶೆ ಮಾಡದೇ ಯಾವ ವ್ಯಕ್ತಿಯನ್ನೂ ನಂಬಬೇಡ. ಆದರೆ ಅದು ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕದ ಸಂಗತಿ ಎಂದು ತಿಳಿದಾಕ್ಷಣ ಮೊದಲು ನಂಬು. ನಂತರ ಹಂತ ಹಂತವಾಗಿ ಪರೀಕ್ಷಿಸಿ ನೀನು ಅದರಲ್ಲೇ ಒಂದಾಗಿಬಿಡು ಎನ್ನುತ್ತಾರೆ ಸ್ವಾಮೀ ವಿವೇಕಾನಂದರು.

ಸಿದ್ದಪ್ಪ ಮಾಡಿದ್ದೂ ಹೀಗೆಯೇ. ನಾಮ ಜಪದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲಾರಂಭಿಸಿದ ಅವರು ಕೆಲ ದಿನ ಯಾವ ಮಠ- ಮಂದಿರಗಳಿಗೂ ಹೋಗಲೇ ಇಲ್ಲ. ತಾನು, ತನ್ನ ಕೆಲಸ, ಅಂತರಂಗ ಶೋಧನೆ, ದಿನಕ್ಕೆ ಮೂರು ಹೊತ್ತು ಮಂತ್ರ ಜಪ- ಇಷ್ಟಕ್ಕೇ ಕಟ್ಟಿಹಾಕಿಕೊಂಡರು. ನೆನೆದವರ ಮನದಲ್ಲಿ ಮಹಾಮಾತೆ ಬಂದೇಬಿಟ್ಟಳು.

ಇಂದು ಸಿದ್ದಪ್ಪ ಅವರಿಂದ ಹೊಮ್ಮುವ ದಿವ್ಯ ವಾಣಿ, ಮಹಾಮಾತೆ ಅವರಲ್ಲಿ ನೆಲೆಸಿ ನುಡಿಸುವ ನುಡಿ ಮುತ್ತುಗಳು ನೂರಾರು ಭಕುತರಿಗೆ ಅಮೃತ ಸಮನಾಗಿ, ಸಾವಿರಾರು ಶ್ರದ್ಧಾಳುಗಳ ಬಾಳನ್ನು ಬೆಳಗಲು ಕಾರಣವಾಗಿವೆ ಎಂದರೆ ಅದರ ಹಿಂದೆ ಆಶ್ರಮ ಹಾಕಿಕೊಟ್ಟ ಸಂಸ್ಕಾರಯುತ ನೆಲೆ, ವಯಕ್ತಿಯ ಶ್ರಮದ ಹಿನ್ನೆಲೆಯಲ್ಲಿ ದೇವಿ ಅವರಿಗೆ ಮಾರ್ಗದರ್ಶನ ನೀಡಿ, ಅಂತರಂಗದಲ್ಲಿ ನೆಲೆಸಿ ಅನುಗ್ರಹಿಸಿದ ಚರಿತ್ರೆಯನ್ನು ಮರೆಯುವಂತೆಯೇ ಇಲ್ಲ.
ಪವಾಡ ಸದೃಶ ಬದಲಾವಣೆ
ಹೋರಾಟದ ಮನೋಭಾವ, ಅಂತರಂಗಲ್ಲಿ ಕೆಲ ಸಂಗತಿಗಳ ಬಗ್ಗೆ ತೀವ್ರ ಪ್ರತಿರೋಧಗಳಿದ್ದ ನನ್ನ ಮಿತ್ರನ ‘ಮನದಲ್ಲಿ ಮಂದಿರ’ವೊಂದು ರೂಪುಗೊಳ್ಳುತ್ತದೆ ಎಂದು ಯಾರೊಬ್ಬರೂ ಕನಸು ಕಂಡಿರಲಿಲ್ಲ. ಈ ಮೂಲಕ ದಶಕದ ನಂತರ ನೂರಾರು ಭಕ್ತರು ಶಾಂತಿ ಮತ್ತು ನೆಮ್ಮದಿಗಳನ್ನು ಕಂಡುಕೊಳ್ಳುತ್ತಾರೆ ಎಂದು ಯಾರಿಗೂ ಕಲ್ಪನೆ (ಹೆತ್ತವರಾದಿಯಾಗಿ) ಇರಲೇ ಇಲ್ಲ ಬಿಡಿ. ಎಲ್ಲವೂ ಪವಾಡ ಸದೃಶ ಬದಲಾವಣೆ.

ಮಹಾನುಭಾವರು ಹಚ್ಚಿದ ಹಣತೆ
ಬೆಂಗಳೂರಿನಲ್ಲಿದ್ದ ಜಗನ್ಮಾತೆ ಆರಾಧಕರಾಗಿದ್ದ ಸ್ವಾಮಿ ಶ್ರೀಧರಾನಂದರೊಂದಿಗೆ ಅದು ಹೇಗೋ ನಂಟು ಬೆಳೆಯಿತು. ಒಂದು ಸುದಿನ ಶಿವಮೊಗ್ಗೆಗೆ ದಯಮಾಡಿಸಿದ ಅವರು, ಹೊಸಮನೆಯ ಶ್ರೀ ದೊಡ್ಡಮ್ಮ-ಜಲದುರ್ಗಮ್ಮ ದೇವಾಲಯ ಸನ್ನಿಧಿಗೆ ಆಗಮಿಸಿದರು. ‘ಸಿದ್ದಪ್ಪಾ…. ಈಗಾಗಲೇ ತಾವು ಮಂತ್ರ ಜಪ, ಅನುಷ್ಠಾನದಲ್ಲಿ ಇದ್ದೀರಿ. ಅದು ನಿಮಗೆ ಪೂರ್ಣ ಸಿದ್ಧಿಯಾಗುವತ್ತ ಸಲ್ಪ ಗಮನ ಕೊಡಿ. ನಿಮ್ಮ ಮನೆಯಲ್ಲೂ ಕಲ್ಯಾಣವಾಗುತ್ತದೆ. ಈ ದೇವಿಯೇ ನಿಮಗೆ ಕೈ ಹಿಡಿದು ನಡೆಸುತ್ತಾಳೆ, ನೂರಾರು ಜನರ ಬದುಕಿನಲ್ಲೂ ಕಲ್ಯಾಣ ಕಾರ್ಯಗಳಾಗಲು ದೇವಿ ನಿಮ್ಮಲ್ಲಿ ನೆಲೆ ನಿಲ್ಲುತ್ತಾಳೆ. ಆ ಮೂಲಕ ಸಮಾಜಕ್ಕೆ ನಿಮ್ಮಿಂದ ದೊಡ್ಡ ದೊಡ್ಡ ಕೊಡುಗೆಗಳಾಗಲು ದೊಡ್ಡಮ್ಮ ಅನುಗ್ರಹವೀಯುತ್ತಾಳೆ. ನೀವು ದೊಡ್ಡ ಮನಸ್ಸು ಮಾಡಿ ಇನ್ನೂ ಇನ್ನೂ ಆಳವಾದ ಜಪಾನುಷ್ಠಾನಕ್ಕೆ ಸಂಕಲ್ಪಿಸಿ’ ಎಂದು ಪ್ರೇರಣೆ ನೀಡಿ ಹರಸಿದರು. ಇದು ಒಂದು ಮಹಾನ್ ಪರಿವರ್ತನೆಗೆ ಹೆಬ್ಬಾಗಿಲನ್ನೇ ತೆರೆಸಿತು. ಸ್ವಾಮಿ ಶ್ರೀಧರಾನಂದರು ಶಿವಮೊಗ್ಗದ ಭಕುತರ ಹಲವು ಮನೆಗಳಿಗೆ ಭೇಟಿ ನೀಡುವ ಸಂದರ್ಭ ಸಿದ್ದಪ್ಪನವರನ್ನೂ ಜತೆಗೆ ಕರೆದುಕೊಂಡು ಹೋದರು. ‘ಜಗನ್ಮಾತೆಯ ಭಕುತರೇ…. ಇವರ ಸಂಪರ್ಕ ಇಟ್ಟುಕೊಳ್ಳಿ. ದೇವಿ ಇವರ ಮೂಲಕ ಅನೇಕ ಸತ್ಕಾರ್ಯಗಳನ್ನು ಮಾಡಿಸಲು ಬರಲಿದ್ದಾಳೆ, ನಿಮ್ಮ ಬವಣೆಗಳನ್ನು ದೂರ ಮಾಡಲಿದ್ದಾಳೆ, ಬದುಕಿನ ಸಂಕಟಗಳನ್ನು ನಿವಾರಿಸಲಿದ್ದಾಳೆ’ ಎಂದು ಆದೇಶ ನೀಡಿದರು. ಅಂತರಂಗದ ಸಾಧಕರಾಗಿದ್ದ ಸ್ವಾಮಿ ಶ್ರೀಧರಾನಂದರ ವಾಣಿ ಭಕುತರ ಮೇಲೆ ಅಪಾರ ಪ್ರಭಾವ ಬೀರಿತು. ಸಿದ್ದಪ್ಪ ಅಧ್ಯಾತ್ಮದ ಆಳದಲ್ಲಿ ಇನ್ನಷ್ಟು, ಮತ್ತಷ್ಟು ಇಳಿಯಲು ಚೈತನ್ಯ ನೀಡಿತು. ಮಹಾನುಭಾವರು ಹಚ್ಚಿದ ಹಣತೆಯೊಂದು ತನ್ನದೇ ಆದ ರೀತಿಯಲ್ಲಿ ‘ಬೆಳಕು’ ನೀಡಲು ಶುಭಾರಂಭ ಮಾಡಿತು. ಅದರ ವಿಸ್ತಾರ ಮತ್ತು ವ್ಯಾಪ್ತಿ ದಿನದಿಂದ ದಿನಕ್ಕೆ ಪ್ರಭಾವಶಾಲಿಯಾಗಿ ನೂರ್ಮಡಿಸುತ್ತಲೇ ಹೋಯಿತು. ಅದರ ಫಲವೇ ಇಂದು ನಾವೆಲ್ಲರೂ ಕಾಣುತ್ತಿರುವ ದಿವ್ಯ ವಾಣಿ, ಹೇಳಿಕೆ, ಪ್ರಸಾದ ಅನುಗ್ರಹ, ಅಂತರಂಗದ ಸಲಹೆ, ಪರಮ ಆಶೀರ್ವಾದ. ಏನಿದು ಪವಾಡ? ಅಂತಿಮವಾಗಿ ‘ಜಗನ್ಮಾತೆಯೇ ಇದರ ರಹಸ್ಯ ಬಲ್ಲಳು’ ಎನ್ನಲಷ್ಟೇ ನಾವು ಅರ್ಹರು.

ಮನೆಯೇ ಮಂತ್ರಾಲಯವಾಗಲು, ಮನಸೇ ದೇವಾಲಯವಾಗಲು ಹೀಗೆ ಹಲವು ಸಂಕಷ್ಟಮಯ ಸ್ಥಿತಿಗಳನ್ನು ಎದುರಿಸಿದಾಗಲೇ ಮನುಷ್ಯನಿಗೆ ಪಕ್ವತೆ ಬರುವುದಂತೆ ಎಂದು ಹಿರಿಯರಿಂದ, ತಜ್ಞರಿಂದ ಕೇಳಿದ್ದೆ. ಓದಿದ್ದೆ. ಈಗ ಅದನ್ನು ಪ್ರತ್ಯಕ್ಷ ನನ್ನ ಮಿತ್ರನಲ್ಲಿ ನೋಡುವ ಭಾಗ್ಯ ನನಗೆ ದಕ್ಕಿರುವುದು ಒಂದು ಸುಕೃತವೇ ಸರಿ ಎನ್ನಿ. ಸಿದ್ದಪ್ಪ ಅವರ ಮೇಲೆ ದೊಡ್ಡಮ್ಮ ಬರುತ್ತಾಳಂತೆ. ಅವರ ಹೇಳಿಕೆಗಳು ನಿಜ ಆಗುತ್ತವೆಯಂತೆ. ಹೌದೇನ್ರೀ…. ಎಂದು ನನಗೆ ಹಲವರು ಪ್ರಶ್ನೆ ಮಾಡಿದ್ದೂ ಉಂಟು. ಅದಕ್ಕೆ ಸೂಕ್ತ ಉತ್ತರವೂ ಅವರಲ್ಲೇ ಇತ್ತು. ನಾಲ್ಕು ಜನ ಸಭ್ಯರು, ಸಂಸ್ಕಾರವಂತರು ಮೆಚ್ಚುವ ಧಾರ್ಮಿಕ ವೇದಿಕೆಯಲ್ಲಿ ಇಂಥವು ಚರ್ಚೆಗೆ ಬರುತ್ತಿದ್ದವು ಎಂಬುದೇ ಒಂದು ಘನತೆ.

ಬದುಕು ನಮ್ಮನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ?
ವೃತ್ತಿ ಒಂದೇ ಆದರೂ, ಹತ್ತು ವರ್ಷ ಒಂದೆಡೆಯೇ ಕೂತು ಕೆಲಸ ಮಾಡಿದ್ದರೂ ಲೌಕಿಕಕ್ಕೆ ಹೆಚ್ಚಾಗಿ ಅಂಟಿಕೊಳ್ಳದ ಸಿದ್ದಪ್ಪ ಅವರ ಮನೋ ಭೂಮಿಕೆ ಯಾವುದೋ ಒಂದು ಮಹತ್ ಕಾರ್ಯಕ್ಕೆ ತಂತಾನೆ ವೇದಿಕೆ ರೂಪಿಸಿಕೊಳ್ಳುತ್ತಿದೆ ಎಂದು ನನಗೆ ಆಗಾಗ್ಗೆ ಅನಿಸುತ್ತಿತ್ತು. ಯಾರೇ ಮಿತ್ರರು ಆಡಿಕೊಳ್ಳಲಿ, ಸಹೋದ್ಯೋಗಿಗಳು ಗೇಲಿ ಮಾಡಲಿ, ಪರಿಚಯಸ್ಥರು ಟೀಕಿಸಲಿ- ಅವುಗಳನ್ನೆಲ್ಲಾ ಮೀರಿ ಅಂತಿಮವಾಗಿ ಎಲ್ಲರೂ ಒಪ್ಪುವ, ಅಪ್ಪುವ, ಆದರಿಸುವ ಮತ್ತು ಅನವರತ ಆರಾಧಿಸುವ ಹಂತದ ವಿಚಾರಧಾರೆಗಳೇ ನಮ್ಮ ಸುತ್ತ ಸುಳಿಯುತ್ತಿವೆ ಎಂಬ ಭಾವ ದಿನ ಕಳೆದಂತೆ ಪರಿಪಕ್ವಗೊಳ್ಳುತ್ತಿದ್ದುದಂತೂ ಸತ್ಯ. ನಮ್ಮಿಬ್ಬರ ಮನೆ ಮತ್ತು ಮಿತ್ರರ ಪರಿಸರದಲ್ಲೂ ಸಾಕಷ್ಟು ಸಾತ್ವಿಕ ಸಂಗತಿಗಳೇ ಸುಳಿಯುತ್ತಿದ್ದವು.ಖ್ಯಾತ ಪ್ರಖ್ಯಾತ ಪಂಡಿತರು, ವಿದ್ವಾಂಸರು, ಸಂಗೀತ ಕಲಾವಿದರು, ಮಠಾಧೀಶರು, ಸಾಧು ಸಂತರು, ಸತ್ಪುರರು, ಮೌನ ಸಾಧಕರು, ವಿವಿಧ ರಂಗದಲ್ಲಿ ಅದ್ವಿತೀಯ ಹಂತ ತಲುಪಿದವರು- ಹೀಗೆ ಒಂದು ವಿಶೇಷದಲ್ಲಿ ವಿಶಿಷ್ಠವಾದ ಗಣ್ಯರ ಪರಿಚಯ- ನಿಕಟ ಬಾಂಧವ್ಯವನ್ನು ದೇವರು ನಮಗೆ ವೃತ್ತಿ ಆರಂಭದಲ್ಲೇ ಕಲ್ಪಿಸಿಬಿಟ್ಟಿದ್ದ. ನಮ್ಮಿಬ್ಬರದು ಯೌವ್ವನದ ಹಂತವಾದರೂ ಸುತ್ತಲೂ ಇರುವವರು ಜ್ಞಾನ ಮತ್ತು ಸಾಧನೆಗಳಲ್ಲಿ ಅಪ್ರತಿಮರಲ್ಲಿ ಅಪ್ರತಿಭರು. ಮಜ್ಜಿಗೆಯಲ್ಲಿದ್ದ ಬೆಣ್ಣೆ ಎಂದೂ ಕೆಡುವುದಿಲ್ಲ. ಉತ್ತಮ ಚೌಕಟ್ಟಿನಲ್ಲಿದ್ದ ವ್ಯಕ್ತಿ ಎಂದೂ ಹಾಳಾಗುವುದಿಲ್ಲ, ಸಜ್ಜನರ ಸಂಗದಲಿ ಇದ್ದವ ಎಂದೂ ಸಾತ್ವಿಕ ಮಾರ್ಗ ಬಿಟ್ಟು ಹೋಗುವುದಿಲ್ಲ- ನಮ್ಮ ಹಿರಿಯರ ನಾಣ್ಣುಡಿ ಸತ್ಯಾತಿ ಸತ್ಯ.

ದಿವ್ಯ ಅನುಗ್ರಹ- ದಿಟ್ಟ ಹೆಜ್ಜೆ:
ಮಂತ್ರದೀಕ್ಷೆ, ನಾಮ ಜಪ, ನಿತ್ಯ ಸ್ತುತಿ- ಇವೆಲ್ಲವುಗಳಿಂದ ಪಕ್ವತೆಯ ಹಾದಿಯಲ್ಲಿ ಸಾಧನೆ ಮಾಡಿದ ಫಲದಿಂದ ಸಾಕ್ಷಾತ್ ಜಗನ್ಮಾತೆಯ ಪ್ರತೀಕಳಾದ ‘ದೊಡ್ಡಮ್ಮ-ಜಲ ದುರ್ಗಮ್ಮ’ ಸಿದ್ದಪ್ಪ ಅವರ ಮನದಂಗಳದಲ್ಲಿ ನೆಲೆ ನಿಂತು ನುಡಿ ಸೇವೆಗೆ ಈ ವ್ಯಕ್ತಿಯನ್ನು ನಿಯೋಜಿಸಿ ಭಕುತಗಣವನ್ನು ದಿನದಿಂದ ದಿನಕ್ಕೆ ಅನುಗ್ರಹಿಸುತ್ತಲೇ ಹೋದಳು. ಈ ನಿಟ್ಟಿನಲ್ಲಿ ಎಂದೂ ಹಿಂದೆ ನೋಡಿದ್ದೇ ಇಲ್ಲ. ನಂಬಿ ಬಂದವರಿಗೆ ಅಭಯ ನೀಡುವಲ್ಲಿ ಆಕೆ ಸರ್ವೋನ್ನತೆ ಎಂಬುದನ್ನು ಹಲವರು ಅನುಭವಿಸಿಯೇ ತಿಳಿದಿದ್ದಾರೆ.

ಇಂತಹಾ ದಿವ್ಯ-ಭವ್ಯ ಕೃಪೆಗೆ ಒಳಗಾದವರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಬಹಳ ಧನ್ಯತೆ ಎನಿಸುತ್ತದೆ. ನಾನು ವಾಸಿಸುವ ಮನೆ ಮತ್ತು ಉದ್ಯೋಗದ ಬಗ್ಗೆ ಸಾಕಷ್ಟು ಗೊಂದಲ- ಗೋಜಲುಗಳು ಎದುರಾದವು. ಏನು ಮಾಡಬೇಕು ಎಂದು ದಾರಿ ಕಾಣದಾಯಿತು. ಸರಿ. ಅಂತರಂಗದ ಗೆಳೆಯ ಸಿದ್ದಪ್ಪರಲ್ಲಿ ವಿಷಯ ಪ್ರಸ್ತಾಪಿಸಿದೆ. ನನ್ನ ಮನದ ಸಂಕಷ್ಟ ವಿವರಿಸಿದೆ. ಎಲ್ಲವೂ ತಾಯಿಯ ಕೃಪೆಯಿಂದಲೇ ಬಗೆ ಹರಿಯುತ್ತದೆ ಕಣೋ…. ಚಿಂತಿಸಬೇಡ …ಎಂಬ ಸಾಂತ್ವನದ ನುಡಿಗಳುಗಳು ಸಹಜ ಮಾತಿನಲ್ಲೇ ಭರವಸೆ ಮೂಡಿಸಿದವು. ಹೊಟ್ಟೆ ಪಾಡಿನ ಉದ್ಯೋಗ ಎಷ್ಟೇ ಇದ್ದರೂ ಅದರ ನಡುವೆಯೇ ಧ್ಯಾನಸ್ಥ ಸ್ಥಿತಿಗೆ ಹೋಗುತ್ತಿದ್ದರು ಸಿದ್ದಪ್ಪ. ಅದೇ ಸಂದರ್ಭಕ್ಕೆ ಸರಿಯಾಗಿ ಗುರುಗಳಿಂದ ಮಂತ್ರದೀಕ್ಷೆ ಪಡೆದು ದೇವಿಯ ಅಂತರಂಗದ ಭಕ್ತರಾಗುವ ಹಂತದಲ್ಲಿದ್ದ ಸಿದ್ದಪ್ಪ ಒಂದು ದಿನ ಶಿವಮೊಗ್ಗದ ಹೊಸಮನೆಯ ಶ್ರೀ ದೊಡ್ಡಮ್ಮ-ಜಲದುರ್ಗಮ್ಮ ದೇಗುಲಕ್ಕೆ ಬರಲು ಸೂಚಿಸಿದರು. ದೇವಿಗೆ ಕೆಂಡದಾರ್ಚನೆ, ವಾರ್ಷಿಕ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳಿಗೆ ಅಲ್ಲಿ ಸಿದ್ಧತೆ ನಡೆದಿತ್ತು. ಪತ್ನಿ ಸಮೇತ ತೆರಳಿದ ನನಗೆ ದೇವಿಯ ದರ್ಶನ ಮಾಡಿಸಿದರು. ಉಡಿ ತುಂಬುವುದು, ಮಹಾ ಮಂಗಳಾರತಿ ಇತ್ಯಾದಿ ನಡೆದವು.

ಇದಾದ ಕೆಲವೇ ಕ್ಷಣಗಳಲ್ಲಿ ದೇವಿ ಸಿದ್ದಪ್ಪನವರಲ್ಲಿ ಮೈದುಂಬಿದಳು. ಹೂಂಕಾರವನ್ನು ಮಾಡುತ್ತಾ ‘ ನೀನು ವಾಸಿಸುವ ಮನೆ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ನನ್ನ ಕುಂಕುಮ ಮತ್ತು ಹೂವಿನ ಪ್ರಸಾದವನ್ನು ಮನೆಯ ಅಡಿಪಾಯಕ್ಕೆ ಹಾಕು. ನಿನ್ನ ಮತ್ತು ನಿನ್ನ ಕುಟುಂಬದ ಕ್ಷೇಮ ಪಾಲನೆಗೆ ನಾನು ಇದ್ದೇನೆ, ಚಿಂತೆ ಬಿಡು. ಪ್ರಾರ್ಥನೆ ಮಾಡು, ಎಲ್ಲವೂ ಒಳಿತಾಗುತ್ತದೆ’ ಎಂಬ ಹೇಳಿಕೆ ಬಂತು.

ನನಗೆ ಒಂದು ಕ್ಷಣ ರೋಮಾಂಚನವಾಯಿತು. ಅಲ್ಲೀವರೆಗೆ ನನ್ನ ಕುಟುಂಬದ ಸ್ನೇಹಿತ, ಕಚೇರಿಯಲ್ಲಿ ಸಹೋದ್ಯೋಗಿ ಆಗಿದ್ದ ಸಿದ್ದಪ್ಪ ದೇವಿಯ ಸ್ವರೂಪದಲ್ಲಿ ಗೋಚರವಾಗಿದ್ದನ್ನು ಕಂಡು ಅದ್ಭುತ ಎನಿಸಿತು. ನನ್ನ ಮಿತ್ರನಲ್ಲಿ ಆದ ಈ ಮಹತ್ತರ ಸುಧಾರಣೆ ಕೇವಲ ನನಗೆ ಮಾತ್ರ ಅಭಯವಲ್ಲ, ಮುಂಬರುವ ದಿನಗಳಲ್ಲಿ ನೂರಾರು-ಸಾವಿರಾರು ಜನರಿಗೆ ‘ಧೀಶಕ್ತಿ’ ಯಾಗಲಿದೆ ಎನಿಸಿತು. ಈ ನಂಬಿಕೆ ಪೊಳ್ಳಾಗಲಿಲ್ಲ, ಶೀಘ್ರ ಫಲಿಸಿತು.

ಕೆಲವೇ ದಿನಗಳಲ್ಲಿ ನನ್ನ ಮನೆ ಸಮಸ್ಯೆ ‘ಹೂವು ಎತ್ತಿದಷ್ಟು ಸರಾಗವಾಗಿ’ ಪರಿಹಾರ ಕಂಡುಕೊಂಡಿತು. ಇದಾದ ನಂತರ ನನ್ನ ಉದ್ಯೋಗ ಸ್ಥಾನ, ಸಂಸ್ಥೆ ಬದಲಾವಣೆ ಸದವಕಾಶವೊಂದು ಪ್ರಾಪ್ತವಾದಾಗ ಒಂದು ದಿನ ಉತ್ತಮ ಸೂಚನೆ ಮತ್ತು ಸಮರ್ಥ ಮಾರ್ಗದರ್ಶನ ದೇವಿ ಕೃಪೆಯಿಂದ ನುಡಿಯಲ್ಪಟ್ಟಿತು. ಅದು ನನಗೆ ದಿವ್ಯ ಬೆಳಕಾಯಿತು. ಇದಕ್ಕಿಂತಾ ಇನ್ನೇನು ಬೇಕು ?. ಸ್ನೇಹ ಮತ್ತು ಅಭಿಮಾನ ಪ್ರತೀಕಗಳ ನೆಲೆಯಲ್ಲಿ ಸಿದ್ದಪ್ಪ ಅವರಿಗೆ ನಮ್ಮ ಕುಟುಂಬದ ಬಗ್ಗೆ ವಿಶೇಷ ಮಮತೆ ಹಸಿರಾಗಿದೆ. ಅದು ಮುಂದೆಯೂ ಪರಸ್ಪರ ನಿತ್ಯ ನೂತನ.

ಸಾಧಕನ ಜೀವನ ಹೆಮ್ಮರವಾಗಲಿ
ಒಂದು ಬೀಜ ಮೊದಲು ಅಂಕುರವಾದಾಗ ಮೊದಲು ಕೆಳಮುಖವಾಗಿ ಬೆಳೆದು ಬೇರುಗಳನ್ನು ಕೊಂಚ ಗಟ್ಟಿ ಮಾಡಿಕೊಳ್ಳುತ್ತದೆ. (ಅಂತರ್ಮುಖ ಸಾಧನೆ) ಮಾತೃಬೇರನ್ನು ಕೆಳಗೆ ಇಳಿಸಿಕೊಂಡದ್ದು ದೃಢವಾದ ನಂತರವೇ ಅದು ಮೇಲ್ಮುಖವಾಗಿ (ಬಹಿರ್ಮುಖವಾಗಿ) ಬೆಳೆಯಲು ಆರಂಭಿಸುತ್ತದೆ. ನಾಳಿನ ದಿನಗಳಲ್ಲಿ ಮಣ್ಣನ್ನು ದಾಟಿಬಂದು, ಚಿಗುರಿ, ಟೊಂಗೆ, ಟಿಸಿಲುಗಳನ್ನು ಒಡೆದು ಹೆಮ್ಮರವಾಗಿ ನೂರಾರು ಜನರಿಗೆ ತಂಪು, ನೆರಳು, ಗಾಳಿಗಳನ್ನು ತಾನಾಗಿಯೇ ನೀಡುತ್ತದೆ. ಎಲ್ಲೋ ಇದ್ದ ಪಕ್ಷಿ ಸಂಕುಲ ಈ ಮರವನ್ನು ಆಶ್ರಯಿಸಿ ನೆಮ್ಮದಿಯ ಗೂಡನ್ನು ಕಟ್ಟಿಕೊಳ್ಳುತ್ತದೆ. ದಾರಿಯಲ್ಲಿ ಹೋಗುವವರು ಒಂದಷ್ಟು ಹೊತ್ತು ವಿರಮಿಸಿ ಮನದಲ್ಲೇ ಕೃತಜ್ಞತೆಯನ್ನು ಹೇಳಿ ಮುಂದೆ ಸಾಗುತ್ತಾರೆ. ಆದರೆ ನಾನು ಇಂತಿಷ್ಟು ಜನರಿಗೆ ಉಪಕಾರ ಮಾಡಿದೆ ಎಂದು ಎಲ್ಲಿಯೂ ಫಲಕ ಹಾಕಿಕೊಳ್ಳುವುದಿಲ್ಲ. ಹೆಮ್ಮರದ ಧ್ಯೇಯ ಮತ್ತು ಉದ್ದೇಶ ಅಪಾರ ಮತ್ತು ಅನಂತ. ನೂರಾರು ವರ್ಷಗಳ ವರೆಗೆ ಅದರ ವ್ಯಾಪ್ತಿ ಮತ್ತು ಸೇವಾ ವಿಸ್ತಾರ. ಹಾಗೆಯೇ ಸಾಧಕರ ಜೀವನವೂ…..
ಪುರುಷನ ಪುಣ್ಯ-ನಾರಿಯ ಭಾಗ್ಯ
ಯಾವುದೇ ವ್ಯಕ್ತಿ ಉದ್ದೇಶಿತ ಗುರಿ ಸಾಧನೆ ಕಡೆಗೆ ಸಾಗಬೇಕು ಎಂದರೆ ಅದಕ್ಕೆ ಕುಟುಂಬ ಪೂರಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಆತ ಕುಟುಂಬ ಜೀವನ ತ್ಯಾಗ ಮಾಡಿ ಸನ್ಯಾಸ ಮಾರ್ಗ ಹಿಡಿಯಬೇಕು. ಅದೂ ಆಗದಿದ್ದರೆ ಏಕಾಂಗಿಯಾಗಿದ್ದುಕೊಂಡು ಉದ್ದೇಶ ಈಡೇರಿಸಿಕೊಳ್ಳುವತ್ತ ಜೀವನ ಸಾಗಿಸಬೇಕು. ಸಿದ್ದಪ್ಪ ಮೊದಲನೇ ವರ್ಗಕ್ಕೆ ಸೇರಿದವರು. ಅಪ್ಪ-ಅಮ್ಮ ಶಾಲೆಯುಲ್ಲಿ ಕಲಿಯದಿದ್ದರೂ ಜೀವನವೇ ಅನೇಕ ಪಾಠಗಳನ್ನು ಕಲಿಸಿತ್ತು. ನಮ್ಮ ಮಕ್ಕಳು ನಾಲ್ಕು ಅಕ್ಷರ ಓದಿ ಸಮಾಜದಲ್ಲಿ ಒಳ್ಳೆಯವರಾಗಿ ಬಾಳಬೇಕು ಎಂಬುದೇ ಅವರ ಧ್ಯೇಯ. ಇದಕ್ಕಾಗಿ ನಿತ್ಯವೂ ಬೆವರು ಸುರಿಸಿ ದುಡಿಯುವ ಕಾಯಕ ಅವರಿಬ್ಬರದ್ದು. ಮಕ್ಕಳ ಶಿಕ್ಷಣದಲ್ಲಿ ಅವರೆಂದೂ ಗೆರೆ ಹಾಕಿದವರಲ್ಲ. ಆದರೆ ಹಿರಿಯ ಮಗನಾದ ಸಿದ್ದಪ್ಪ ತಮ್ಮ ಮತ್ತು ತಂಗಿಯರ ಬದುಕು ಕಟ್ಟಿಕೊಡಲು ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸುವುದು ಅನಿವಾರ್ಯವಾಯಿತು. ಇಲ್ಲಿ ಎದುರಾದ ಕಷ್ಟ-ನಷ್ಟಗಳನ್ನು ಮೌನವಾಗಿ ತಾನೇ ನುಂಗಿಕೊಂಡು ನಾವಿಕನಂತೆ ನಿಂತು ಒಡ ಹುಟ್ಟಿದವರನ್ನು ದಡಕ್ಕೆ ಸೇರಿಸಿದರು. ಇವೆಲ್ಲಾ ಹತ್ತಿರದಿಂದ ಕಂಡವರಿಗೆ ಮಾತ್ರ ಗೊತ್ತು. ಇದರೊಂದಿಗೆ ತನ್ನ ಗುರಿಯನ್ನೂ ಸ್ವಯಂ ರೂಪಿಸಿಕೊಳ್ಳುವತ್ತ ಆದ್ಯ ಗಮನ ಹರಿಸಬೇಕಾಯಿತು. ಈ ಹಂತಗಳನ್ನು ದಾಟಿದ ಮೇಲೆ ಕೈ ಹಿಡಿದ ಪತ್ನಿಯ ‘ಅನು’ದಿನದ ಸಹಕಾರವೂ, ಕಂದನ ಮಮತೆಯೂ ಪ್ರಾಪ್ತವಾದದ್ದು ಒಂದು ಸುಯೋಗ. ಇದನ್ನೇ ಹಿರಿಯರು ‘ಪುರುಷನ ಪುಣ್ಯ-ನಾರಿಯ ಭಾಗ್ಯ’ ಎಂದು ಬಣ್ಣಿಸುತ್ತಾರೆ. ಅದಿಲ್ಲಿ ದಿಟವಾಗಿದೆ ಎಂಬುದೇ ಎಲ್ಲರಿಗೂ ಸಂಭ್ರಮ.

ಹುಟ್ಟಿದ ಮೇಲೆ ಎಲ್ಲವೂ ಹೇಗೋ ಆಗುತ್ತದೆ ಎನ್ನುವುದಕ್ಕಿಂತ ಅದೆಲ್ಲವೂ ಒಂದು ದೈವಿಕ ಕೃಪೆಯಿಂದ ನೆರವೇರುವುದು ಶ್ರೇಷ್ಠಾತಿಶ್ರೇಷ್ಠ ಭಾಗ್ಯ. ಮೊದಲನೆಯದು ಪಶುಗಳ ವರ್ಗ, ಎರಡನೇಯದು ಪರಮ ಸಾತ್ವಿಕರ ಸುಕೃತ. ಎರಡನೇ ವರ್ಗದಲ್ಲಿ ಸಾಗುವ, ತನ್ನ ವ್ಯಾಪ್ತಿಗೆ ಬಂದವರನ್ನು ಈ ಮಾರ್ಗದಲ್ಲಿ ಸಾಗುವಂತೆ ಪ್ರೇರಣೆ-ಪ್ರೋತ್ಸಾಹ ನೀಡುವಲ್ಲಿ ಸಿದ್ದಪ್ಪ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಮಹಾಮಾತೆಯೇ ಇದಕ್ಕೆ ಬಲ-ಬೆಂಬಲವಾಗಿ ನಿಂತಾಗ ಉಳಿದ ಮಾತು ಗೌಣ. ಗುಣಗಳು ಮಾತ್ರ ಇಲ್ಲಿ ಮಾನ್ಯ.

ಭಗವತಿ ದರುಶನಕ್ಕೆ ದಕ್ಷಿಣೆ ಇಲ್ಲ
ಜಗನ್ಮಾತೆಯ ಭಕುತರೆಲ್ಲರೂ ಸೇರಿ ಸಿದ್ದಪ್ಪ ಅವರ ಮನೆಯಲ್ಲಿ ದೊಡ್ಡಮ್ಮ- ಜಲದುರ್ಗಮ್ಮರ ಉತ್ಸವ ಮೂರ್ತಿಯನ್ನು ಪೂಜಿಸುವ ವ್ಯವಸ್ಥೆ ಮಾಡಿದ್ದಾರೆ. ಭಗವತಿಯನ್ನು ನೋಡಲು, ದೇವಿಯ ಹೇಳಿಕೆಗಳನ್ನು ಕೇಳಲು ಯಾವ ರೀತಿಯ ದಕ್ಷಿಣೆ ಇಲ್ಲ. ಯಾವುದೇ ಭಕ್ತರು, ಫಲನುಭವಿಗಳು ಕಾಣಿಕೆ ಹಣ ನೀಡಲು ಬಂದರೂ ಈವರೆಗೆ ಅದನ್ನು ಸಿದ್ದಪ್ಪ ಸ್ವೀಕಾರ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ ಎಂಬುದವರ ಸಂಕಲ್ಪ. ದೇವಿಗೆ ಶರಣಾಗತಿಯಾದ ಮೇಲೆ ಹಣದ ಬಗ್ಗೆ ಒಂದಿನಿತೂ ವ್ಯಾಮೋಹ ಇರಿಸಿಕೊಳ್ಳಬಾರದು. ಇದು ಸಾಧನೆಗೆ ಅಡ್ಡಿಯಾಗುತ್ತದೆ. ಭಕುತರ ಹಿತಪಾಲನೆಯಷ್ಟೇ ಇಲ್ಲಿ ಮುಖ್ಯವಾಗಬೇಕು ಎಂಬುದು ಒಟ್ಟಾರೆ ಅಭಿಮತ.

ವಾಸ್ತವಕ್ಕೆ ಬರೋಣ. ದಿನವೂ ಸ್ನೇಹತ್ವದ ಒಡನಾಟದಲ್ಲಿದ್ದ ನಾವಿಬ್ಬರೂ ಈಗ ಅಪರೂಪಕ್ಕೆ ಭೇಟಿ ಆಗುವ ಬಂಧುಗಳು. ಸದ್ಯ ನಾನು ಮೈಸೂರು ನಿವಾಸಿ. ಆದರೂ ಮನದಾಳದಲ್ಲಿ ಮಿತ್ರತ್ವ ಚಿರವಾಗಿದೆ. ಅದಕ್ಕೆ ಭಕ್ತಿ ಮತ್ತು ಭಾವಗಳ ಪೂರಣವಾಗಿ ಪವಿತ್ರತೆಯನ್ನು ಪಡೆದುಕೊಂಡಿದೆ. ಜಗನ್ಮಾತೆಯ ಅನವರತ ಕೃಪೆಯಿಂದ ನನ್ನ ಮಿತ್ರ ‘ಹೆಮ್ಮರವಾಗಿ ಬೆಳೆಯುವ ಸಿರಿ’ ಎಂದು ಹೇಳಲಿಕ್ಕೆ ಹೆಮ್ಮೆ ಮತ್ತು ಗೌರವ ಎನಿಸುತ್ತದೆ. ಈಗಾಗಲೇ ಹತ್ತಾರು ರಂಗದ ಜನರು ಅವರ ಮನೆಯಲ್ಲಿ ನಡೆಯುವ ದೇವಿ ಹೇಳಿಕೆಗೆ ಬಂದು ಧನ್ಯರಾಗುತ್ತಿದ್ದಾರೆ. ಸಿದ್ದಪ್ಪ ಅವರು ರಾಜ್ಯದ ವಿವಿಧೆಡೆ ಭಕ್ತರ ಅಪೇಕ್ಷೆ ಮತ್ತು ಬೇಡಿಕೆ ಮೇರೆಗೆ ಸಂಚಾರ ಆರಂಭಿಸಿದ್ದಾರೆ. ಇದಕ್ಕೆ ಹನುಮ ಶಕ್ತಿ ಅವರಿಗೆ ಪ್ರೇರಣೆ ನೀಡಿದೆ. ಹೆಜ್ಜೆ ಇಟ್ಟಲ್ಲಿ ಹಸಿರು ಮೂಡಿಸುವ, ಅಭಯ ನೀಡಿದಲ್ಲಿ ಅನಂತ ಸುಖ ಮತ್ತು ನೆಮ್ಮದಿ ಕರುಣಿಸುವ, ಮನ:ಪೂರ್ವಕವಾಗಿ ಪ್ರಾರ್ಥಿಸಿದಲ್ಲಿ ಇಷ್ಟಾರ್ಥ ನೆರವೇರಿಸುವ, ಒಂದೊಂದು ಮಾತಿನಲ್ಲೂ ಜೀವನದ ಮಹತ್ತುಗಳ ದರ್ಶನ ಮಾಡಿಸಿ ಸಾರ್ಥಕತೆ ಮೆರೆಸುವ ಶಕ್ತಿಯನ್ನು ‘ಮಹಾತಾಯಿ’ ಕರುಣಿಸಿದ್ದಾಳೆ. ಇದು ಅನಂತ ಮತ್ತು ಅಕ್ಷಯ ನಿಧಿ. ಅದನ್ನು ಸಾಧ್ಯವಾದಷ್ಟು ನಮ್ಮ ಮನೆ -ಮನಗಳಲ್ಲಿ ತುಂಬಿಸಿಕೊಳ್ಳುವ ಗುಣ ಮತ್ತು ಗಣಗಳ ಸಂಖ್ಯೆ ಸಾವಿರ ಸಾವಿರವಾಗಲಿ. ಆನಂದೋತ್ಸಾಹಗಳು ಎಲ್ಲೆಡೆ ಚಿಮ್ಮಲಿ. ….ಸಮಾಜದ ಸಮಸ್ತ ವ್ಯಕ್ತಿತ್ವಗಳು ಸಂಕಟ ಮರೆತು ಸಮೃದ್ಧಿಯಿಂದ ಮೆರೆಯಲಿ. ವಿಜಯದಶಮಿಯಂದು ಜನಿಸಿದ ಕಂದನಲ್ಲಿ ಮಹಾಮಾತೆ ನಿಂತಿದ್ದು, ನಾಡಿಗೆ ಮಂಗಳವನ್ನೇ ಉಂಟುಮಾಡಲಿ. ಒಟ್ಟಾರೆ ‘ಸರ್ವತ್ರ ವಿಜಯ’ವಾಗಲಿ.

ಬಾಳು ಸುಂದರ ಚೆಲುವ ಹಂದರ
ಹೃದಯ ಹೊಮ್ಮುವ ನಗೆ ಇರೆ…
ಹೂವ ಬಟ್ಟಲು ಜೇನ ತೊಟ್ಟಿಲು
ಮೊಗೆದು ಕುಡಿಯುವ ಮನವಿರೆ….
ಜೀವ ಧನ್ಯವು, ಬಾಳ ಪುಣ್ಯವು
ಜಗನ್ಮಾತೆಯ ಕೃಪೆ ಇರೆ …

ವಿಶೇಷ ಲೇಖನ: ಎ.ಆರ್. ರಘುರಾಮ
99160 22982, 99161 38436

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Airport in ShivamoggaBENGALURUBhavatarini AshramaLatest News KannadaShimogaShivamoggaShivamogga NewsSri Doddamma Devi MahimeSri Siddappajiಭವತಾರಿಣಿ ಆಶ್ರಮಮಾತಾ ವಿವೇಕಮಯಿಶಿವಮೊಗ್ಗಶ್ರೀ ದೊಡ್ಡಮ್ಮ ದೇವಿ ಮಹಿಮೆಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮಶ್ರೀ ಸಿದ್ದಪ್ಪಾಜಿಶ್ರೀಮಾತಾ ಬ್ರಹ್ಮಮಯಿಶ್ರೀಮಾತಾ ಶಾರದಾಶ್ರಮಹೊಸಕೋಟೆ
Share196Tweet123Send
Previous Post

ಹಿಜಾಬ್ ಕುರಿತು ನಾಳೆ ಹೈಕೋರ್ಟ್ ತೀರ್ಪು ಪ್ರಕಟ: ಎಷ್ಟು ಗಂಟೆಗೆ ಹೊರಬೀಳಲಿದೆ?

Next Post

ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇಂದು ಸಂಜೆ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ, ಸೆಕ್ಷನ್ ಮುಂದುವರಿಕೆ ನಿರ್ಧಾರ

ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕುಂಸಿಯ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | ಕಾರಣವೇನು?

January 22, 2026
ಉಡುಪಿ | ಗರ್ಭಾಶಯದ ಆಸಹಜ ರಕ್ತಸ್ರಾವ | ಉಚಿತ ಆಯುರ್ವೇದ ಸಮಾಲೋಚನೆ & ಚಿಕಿತ್ಸಾ ಶಿಬಿರ

ಉಡುಪಿ | ಗರ್ಭಾಶಯದ ಆಸಹಜ ರಕ್ತಸ್ರಾವ | ಉಚಿತ ಆಯುರ್ವೇದ ಸಮಾಲೋಚನೆ & ಚಿಕಿತ್ಸಾ ಶಿಬಿರ

January 27, 2026
ಭದ್ರಾವತಿ | ಜನವಸತಿ ಪ್ರದೇಶದಲ್ಲಿ ಕುರಿ ಹೊತ್ತೊಯ್ದ ಚಿರತೆ | ಸ್ಥಳೀಯರಲ್ಲಿ ಆತಂಕ

ಭದ್ರಾವತಿ | ಜನವಸತಿ ಪ್ರದೇಶದಲ್ಲಿ ಕುರಿ ಹೊತ್ತೊಯ್ದ ಚಿರತೆ | ಸ್ಥಳೀಯರಲ್ಲಿ ಆತಂಕ

January 27, 2026
ಹುಬ್ಬಳ್ಳಿ | ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಹುಬ್ಬಳ್ಳಿ | ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

January 27, 2026
ಹುಬ್ಬಳ್ಳಿ | ನೈಋತ್ಯ ರೈಲ್ವೆ ಸಾಧನೆಗಳೊಂದಿಗೆ 77ನೇ ಗಣರಾಜ್ಯೋತ್ಸವ ಸಂಭ್ರಮ

ಹುಬ್ಬಳ್ಳಿ | ನೈಋತ್ಯ ರೈಲ್ವೆ ಸಾಧನೆಗಳೊಂದಿಗೆ 77ನೇ ಗಣರಾಜ್ಯೋತ್ಸವ ಸಂಭ್ರಮ

January 27, 2026
ಕೇರಳ | 10 ವರ್ಷದಲ್ಲಿ ಬೀದಿ ನಾಯಿ ಕಡಿತಕ್ಕೆ 118 ಮಂದಿ ಬಲಿ

ಹೊಳೆಹೊನ್ನೂರು | ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿತ | ವ್ಯಾಪಕ ಆಕ್ರೋಶ

January 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL