ಕಲ್ಪ ಮೀಡಿಯಾ ಹೌಸ್ | ಚಿಕ್ಕದಾನವಂದಿ(ಶಿವಮೊಗ್ಗ) |
ವಿದ್ಯಾರ್ಥಿ ಜೀವನವು ಯಾವಾಗಲೂ ಶಿಸ್ತು ಮತ್ತು ಸಂಯಮದಿಂದ ಕೂಡಿರಬೇಕು. ಕಲಿಕೆಯ ಉದ್ದೇಶವು ಉದಾತ್ತ ವಾಗಿರಬೇಕು. ನಡವಳಿಕೆಯಿಂದಾಗಿ ಸಮಾಜದ ಹಿತಕ್ಕೆ ಧಕ್ಕೆ ಬರುವಂತೆ ಇರಬಾರದು ಎಂದು ಎಂಎಲ್’ಸಿ ಆಯನೂರು ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 2021-22 ನೆಯ ಸಾಲಿನ ವಾರ್ಷಿಕ ವಿಶೇಷ ಶಿಬಿರ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕದಾನವಂದಿ ಗ್ರಾಮದಲ್ಲಿ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಶೇಷವಾಗಿ ಇತಿಹಾಸದ ಪರಿಜ್ಞಾನ ಅತ್ಯಂತ ಅಗತ್ಯ ನಮ್ಮ ಶಿವಮೊಗ್ಗ ಜಿಲ್ಲೆಯ ಇತಿಹಾಸವು ನಿಜಕ್ಕೂ ವಿಶೇಷವಾದುದು. ಕೆಳದಿಯ ಚೆನ್ನಮ್ಮ ನಂತಹ ಧೀರ ಮಹಿಳೆ ಔರಂಗಜೇಬನಂತಹ ವ್ಯಕ್ತಿಯನ್ನು ಸೋಲಿಸಿದ ಹಿರಿಮೆಯನ್ನು ಹೊಂದಿದ್ದಾಳೆ. ಉಡುತಡಿಯಲ್ಲಿ ಹುಟ್ಟಿದ ಅಕ್ಕಮಹಾದೇವಿ ನಮ್ಮ ಜಿಲ್ಲೆಯವರು ಎನ್ನುವುದು ನಮಗೆ ಹೆಮ್ಮೆ. ಎನ್‌ಎಸ್‌ಎಸ್ ನಂತಹ ಶಿಬಿರಗಳು ಸ್ಥಳೀಯ ಜ್ಞಾನವನ್ನು ಅರಿತುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಕೆ. ವೀಣಾ ಅವರು ಮಾತನಾಡಿ, ಸಮಾಜ ಮತ್ತು ಸಂಸ್ಕೃತಿಯ ಪ್ರಜ್ಞೆಯಿಂದಲೇ ನಮ್ಮ ವ್ಯಕ್ತಿತ್ವವು ಬೆಳೆಯುತ್ತದೆ. ಜ್ಞಾನ ಬುದ್ಧಿ ಮತ್ತು ವಿವೇಕವು ಶಿಕ್ಷಣದಿಂದ ಲಭಿಸುತ್ತದೆ. ಶ್ರಮಯುಕ್ತ ಬದುಕಿನ ಜೀವನ ಶೈಲಿ ಯುವಜನರಲ್ಲಿ ಕಣ್ಮರೆಯಾಗುತ್ತಿದೆ. ಎನ್‌ಎಸ್‌ಎಸ್‌ನಂತಹ ಶಿಬಿರಗಳು ಗ್ರಾಮೀಣ ಸಮುದಾಯಗಳ ಕಷ್ಟಗಳನ್ನು ಅರ್ಥ ಮಾಡಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸ್ವಚ್ಛತೆ ನೈರ್ಮಲ್ಯದ ಪರಿಜ್ಞಾನವನ್ನು ನಮ್ಮಲ್ಲೂ ಉಂಟುಮಾಡುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ವಾಗ್ದೇವಿಯವರು ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಪ್ರೀತಿಯನ್ನು ಬೆಳೆಸಿಕೊಂಡಾಗ ದೇಶ ಸಮೃದ್ಧವಾಗುತ್ತದೆ. ಇಂದು ನಮಗೆ ಬೇಕಾಗಿರುವುದು ಶುದ್ಧವಾದ ಗಾಳಿ, ಸ್ವಚ್ಛವಾದ ನೀರು. ಇದನ್ನು ಪಡೆಯಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಗಟ್ಟ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಶೋಭಾ ಶಿವಪ್ಪ, ಪಂಚಾಯತ್ ಸದಸ್ಯರಾದ ಉಮೇಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಸರಳಾ ಕೆ.ಎಸ್., ಪ್ರಾಧ್ಯಾಪಕರಾದ ಡಾ. ಕುಂದನ್ ಬಸವರಾಜ್, ಬಾಲಸ್ವಾಮಿ, ಗಿರೀಶ್ ಕಾರಂತ್ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶುಭಾ ಮರವಂತೆ ಎಲ್ಲರನ್ನು ಸ್ವಾಗತಿಸಿ, ಕುಮಾರಿ ಸ್ನೇಹಶ್ರೀ ಕಾರ್ಯಕ್ರಮ ನಿರೂಪಿಸಿದರು. ಕು.ಸುಪ್ರಿಯಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post