Read - < 1 minute
ಉಡುಪಿ ಅ:30: ಸರ್ಕಾರವೇ ನಡೆಸಬೇಕಾದ ಬಡವರ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಿ ಉಡುಪಿಯ ಜನತೆಗೆ ವಂಚಿಸಿದ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ ಸಚಿವ ಸ್ಥಾನ ರಾಜೀನಾಮೆ ನೀಡಬೇಕು ಎಂದು ಬಿ.ಜೆ.ಪಿ.ಯ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.
ಅವರು ಭಾನುವಾರ ಮುಖ್ಯಮಂತ್ರಿಗಳು ಜಿಲ್ಲಾ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ೩.೮೮ ಎಕ್ರೆ ಭೂಮಿಯಲ್ಲಿ ಖಾಸಗಿ ಉದ್ಯಮಿ ಬಿ.ಆರ್.ಶೆಟ್ಟಿ ಅವರು ನಿರ್ಮಿಸುವ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ವಿರೋಧಿಸಿ ಬಿ.ಜೆ.ಪಿ. ವತಿಯಿಂದ ಕಪ್ಪುಬಾವುಟ ಪ್ರದರ್ಶನ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸಚಿವರು ಉಡುಪಿಯನ್ನೇ ಖಾಸಗಿಯವರಿಗೆ ಮಾರುವುದಕ್ಕೆ ಹೊರಟಂತಿದೆ. ಉಡುಪಿ ನಗರ ಸಭೆಗೆ ಪ್ರಮುಖ ಆದಾಯದ ಮೂಲವಾದ ವಿಶ್ವೇಶ್ವರಯ್ಯ ಮಾರುಕಟ್ಟೆಯ ಕಟ್ಟಡವನ್ನೂ ಕೂಡ ಸಚಿವರು ಸಿಂಗಲ್ ಬಿಡ್ ಮೂಲಕ ಖಾಸಗಿಯವರಿಗೆ ನೀಡಿದ್ದಾರೆ. ಜನರಿಂದ ಲಂಚ ತೆಗೆದುಕೊಳ್ಳುವುದಿಲ್ಲ ಎನ್ನುವ ಸಚಿವರು ದೊಡ್ಡ ಮಟ್ಟದ ಡೀಲ್ ಗಳನ್ನಷ್ಟೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಸರ್ಕಾರಿ ಆಸ್ಪತ್ರೆಯ ಉನ್ನತೀಕರಣಕ್ಕೆ ಬಿ.ಜೆ.ಪಿ. ವಿರೋಧಿಸುವುದಿಲ್ಲ, ಆದರೇ ಅದನ್ನು ಸರ್ಕಾರವೇ ಉನ್ನತೀಕರಣಗೊಳಿಸದೇ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು ಸಂಶಯಾಸ್ಪದವಾಗಿದೆ. ಜನರ ಸೊತ್ತನ್ನು ಜನರನ್ನು ಕೇಳದೆ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಖಾಸಗಿಯವರಿಗೆ ಹಸ್ತಾಂತರಿಸಿರುವುದು ಪಾರದರ್ಶಕ ಕಾಯ್ದೆಗೆ ವಿರೋಧವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಬಡವರ ಸರ್ಕಾರಿ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಕ್ಕೆ ತಕ್ಷಣ ಕೈಬಿಟ್ಟು, ಸರ್ಕಾರ ಬಡವರ ಪರವಾಗಿದೆ ಎಂದು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಬಿ.ಜೆ.ಜಿ. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಉಡುಪಿ ನಗರ ಮೋರ್ಚಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಕುತ್ಯಾರು ಮತ್ತು ಯಶಪಾಲ ಸುವರ್ಣ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳೀನಿ ಪ್ರದೀಪ್, ಮಾಜಿ ಶಾಸಕ ಲಾಲಾಜಿ ಮೆಂಡನ್, ಮಹಿಳಾ ಮೋರ್ಚಾಧ್ಯಕ್ಷೆ ನಯನಾ ಗಣೇಶ್, ಯುವ ಮೋರ್ಚಾಧ್ಯಕ್ಷ ಶ್ರೀಶ ನಾಯಕ್ ಮುಂತಾದವರಿದ್ದರು.
ಜೋಡುಕಟ್ಟೆಯಲ್ಲಿ ನಡೆದ ಈ ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ಸಮಾರಂಭ ನಡೆದ ಪುರಸಭೆಯತ್ತ ಮೆರವಣಿಗೆ ಹೊರಾಟಾಗ ಪೊಲೀಸರು ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಪರಸ್ಪರ ತಳ್ಳಾಟವೂ ನಡೆಯಿತು.
Discussion about this post