ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಾಯ್ನಾಡು ಕರ್ನಾಟಕಕ್ಕೆ ಕೊಡುಗೆ ನೀಡಬೇಕೆಂಬ ಕಾರಣಕ್ಕೆ ಅಮೆರಿಕದಲ್ಲಿರುವ ಕನ್ನಡತಿ ಜ್ಯೋತಿ ಗಂಗಾಧರ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ 50 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಯೋತಿ ಗಂಗಾಧರ್ ಅವರು, ಮನುಷ್ಯರಂತೆಯೇ ಪ್ರಾಣಿ – ಪಕ್ಷಿಗಳು ಸಹ ಜೀವಿಸುವ ಹಕ್ಕನ್ನು ಹೊಂದಿವೆ. ಅಲ್ಲದೆ ಮೈಸೂರಿನ ಮೃಗಾಲಯದಲ್ಲಿ Mysore Zoo ಹಲವಾರು ಪ್ರಭೇದದ ಪ್ರಾಣಿ, ಪಕ್ಷಿಗಳಿದ್ದು, ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ನಾನು ವಿಶ್ವದ ಹಲವು ಮೃಗಾಲಯಗಳನ್ನು ನೋಡಿದ್ದೇನೆ. ಆದರೆ, ಮೈಸೂರು ಮೃಗಾಲಯದಂತೆ ಸುಸಜ್ಜಿತವಾಗಿ ನಿರ್ವಹಣೆ ಮಾಡುವುದನ್ನು ಎಲ್ಲಿಯೂ ನೋಡಿಲ್ಲ. ಅಲ್ಲದೆ ಇದನ್ನು ಅಚ್ಚುಕಟ್ಟಾಗಿ ಸಹ ನೋಡಿಕೊಳ್ಳಲಾಗುತ್ತಿದೆ. ಇದನ್ನು ನಾನು ಆಗಾಗ ಗಮನಿಸುತ್ತಲೇ ಇದ್ದೇನೆ. ಅಲ್ಲದೆ ಈಗ ಬೇಸಿಗೆ ಸಂದರ್ಭವಾಗಿದ್ದರಿಂದ ಪ್ರಾಣಿಗಳಿಗೆ ಕುಡಿಯುವ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಹುಟ್ಟುಹಬ್ಬದ ಪ್ರಯುಕ್ತ ಐವತ್ತು ಸಾವಿರ ರೂ. ದೇಣಿಗೆಯನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಕಳೆದ ವರ್ಷ ನನ್ನ ಪುತ್ರಿ ಪ್ರಿಶಾ ಹೆಸರಿನಲ್ಲಿ ಆನೆಯೊಂದನ್ನು ದತ್ತು ಪಡೆದಿದ್ದೆ. ಈ ಬಾರಿ ನನ್ನ ಹುಟ್ಟುಹಬ್ಬದ ಸಲುವಾಗಿ ಈ ರೀತಿಯ ಕೊಡುಗೆ ನೀಡುತ್ತಿದ್ದೇನೆ ಎಂದು ಜ್ಯೋತಿ ಗಂಗಾಧರ್ ತಿಳಿಸಿದ್ದಾರೆ.
Also read: ಪುನೀತ್ ರಾಜ್ ಕುಮಾರ್ ಸೇರಿ 60 ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ
ನಮ್ಮದು ನೀರನ್ನು ಕೇಳಿದವರಿಗೆ ಕೊಡುವ ಸಂಸ್ಕೃತಿ. ಆದರೆ ಮೂಕ ಪ್ರಾಣಿಗಳು ನೀರನ್ನು ಕೇಳುತ್ತವೆಯೇ? ಅದನ್ನು ನಾವೇ ಅರಿತುಕೊಳ್ಳಬೇಕು. ಅಲ್ಲದೆ ಬೇಸಿಗೆ ಸಂದರ್ಭದಲ್ಲಿ ನೀರಿಗೆ ಎಂಥ ಸಂಕಷ್ಟ ಇದೆ ಎಂಬುದು ನನ್ನ ಅರಿವಿಗೆ ಬಂದಿದೆ. ಹುಟ್ಟುಹಬ್ಬದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದಕ್ಕಿಂತ ಮೂಕ ಪ್ರಾಣಿಗಳಿಗೆ ನೆರವಾದರೆ ಅದರಲ್ಲಿ ಸಿಗುವ ಖುಷಿ ಮತ್ತೊಂದರಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಜ್ಯೋತಿ ಗಂಗಾಧರ್ ಅವರು ಹೇಳಿಕೊಂಡಿದ್ದಾರೆ.
ಅಭಿನಂದನೆ ಸಲ್ಲಿಸಿದ ಅಜಿತ್ ಕುಲಕರ್ಣಿ
ಜ್ಯೋತಿ ಗಂಗಾಧರ್ ಅವರ ಕೊಡುಗೆಗೆ ಅಭಿನಂದನೆ ಸಲ್ಲಿಸಿರುವ ಮೈಸೂರು ಮೃಗಾಲಯ ಪ್ರಾಧಿಕಾರಿದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಅವರು, “ಮೈಸೂರು ಮೃಗಾಲಯದಲ್ಲಿ ವಿವಿಧ ವರ್ಗದ 1455 ಪ್ರಾಣಿ – ಪಕ್ಷಿಗಳಿವೆ. ಕರ್ನಾಟಕದ ಮೇಲಿನ ಅವರ ಅಭಿಮಾನ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದೂರದ ಅಮೆರಿಕದಲ್ಲಿದ್ದುಕೊಂಡು ನಮ್ಮ ಮೃಗಾಲಯಕ್ಕೆ ನೆರವು ನೀಡುವ ಅವರ ಹೃದಯ ವೈಶಾಲ್ಯಕ್ಕೆ ನಾವು ಆಭಾರಿಯಾಗಿದ್ದೇವೆ. ಅಲ್ಲದೆ, ಕಳೆದ ವರ್ಷ ಅವರು ಪುತ್ರಿ ಹೆಸರಿನಲ್ಲಿ ಆನೆಯೊಂದನ್ನು ದತ್ತು ಪಡೆದಿದ್ದರು. ಇಂಥವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವಂತಾಗಲಿ ಮತ್ತು ಇತರರಿಗೂ ಇದು ಮಾದರಿಯಾಗಲಿ. ಇವರ ಈ ಕೊಡುಗೆಗೆ ಮೃಗಾಲಯ, ರಾಜ್ಯ ಸರ್ಕಾರ ಹಾಗೂ ಜನತೆ ಪರವಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post