ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚುನಾವಣಾ ವ್ಯವಸ್ಥೆ Election ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತೆ, ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ. ಎಪ್ಪತ್ತರ ದಶಕದಿಂದ ಈಚೆಗೆ ಚುನಾವಣಾ ವ್ಯವಸ್ಥೆ ಕೆಡಲು ಆರಂಭವಾಯಿತು ಎಂದು ಸಭಾದ್ಯಕ್ಷರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದಾರೆ. ಚುನಾವಣಾ ವ್ಯವಸ್ಥೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬಲಿಷ್ಠವಾಗುತ್ತಾ ಹೋಗಬೇಕಿತ್ತು, ಆದರೆ ನಮ್ಮಲ್ಲಿ ದುರ್ಬಲವಾಗುತ್ತಾ ಹೋಗುತ್ತಿದೆ ಎಂಬ ಒಟ್ಟು ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿದೆ. ಇದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ Siddaramaiah ಅಭಿಪ್ರಾಯಪಟ್ಟರು.
ಚುನಾವಣಾ ಸುಧಾರಣೆಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ ಅವರು, 1971 ರಿಂದ ನಾನು ರಾಜಕೀಯದಲ್ಲಿ ಭಾಗವಹಿಸಲು ಆರಂಭಿಸಿದ್ದು. ಆ ಸಂದರ್ಭದಲ್ಲಿ ನಾನು ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದೆ. ಆಗಿನ ಸಂಸತ್ ಚುನಾವಣೆಯಲ್ಲಿ ಹುಣಸೂರಿನ ಡಾ. ಹೆಚ್.ಎಲ್. ತಿಮ್ಮೇಗೌಡರ ಸಂಸ್ಥಾ ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ನಾನು ಆ ವೇಳೆಗೆ ಸಮಾಜವಾದಿ ಪಕ್ಷದ ಸದಸ್ಯನೂ ಆಗಿದ್ದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಪ್ರೋ. ನಂಜುಂಡಸ್ವಾಮಿ ಅವರು ನಮಗೆ ಹೇಳಿದ್ದರು. ಹಾಗಾಗಿ ನಾನು ನಮ್ಮೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋಗಿದ್ದೆ ಎಂದು ತಿಳಿಸಿದರು.
ಎಪ್ಪತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಒಬ್ಬರು, ಇಬ್ಬರು ಮುಖಂಡರು ಇರುತ್ತಿದ್ದರು. ನಾವು ಅವರ ಬಳಿ ಹೋಗಿ ಹಳ್ಳಿಯ ಜನರ ಮತ ನಮಗೆ ಹಾಕಿಸಿ ಎಂದು ಕೇಳುತ್ತಿದ್ದೆವು. ಆ ಮುಖಂಡ ನಮಗೆ ಒಂದು ಸಲ ಮಾತುಕೊಟ್ಟರೆ ಅಥವಾ ವೀಳ್ಯದೆಲೆ ನೀಡಿದರೆ ಆಮೇಲೆ ಯಾರೇ ಬಂದು ಆಸೆ ಆಮಿಷ ಒಡ್ಡಿದರೂ ಅವರು ಬದಲಾಗ್ತಾ ಇರಲಿಲ್ಲ. 1972 ರ ಚುನಾವಣೆಯಲ್ಲಿ ರಾಜಶೇಖರ ಮೂರ್ತಿಯವರು ಸ್ಪರ್ಧೆ ಮಾಡಿದ್ದರು. ಆಗಲೂ ಪ್ರಚಾರ ಮಾಡಿದ್ದೆ. ಅಂದಿನ ಚುನಾವಣಾ ವ್ಯವಸ್ಥೆಗೂ ಇಂದಿನ ಚುನಾವಣಾ ವ್ಯವಸ್ಥೆಗೂ ಬಹಳಷ್ಟು ಬದಲಾಗಣೆ ಆಗಿದೆ ಎಂದರು.
1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ನಾನು ಮತ್ತು ನನ್ನ ಸ್ನೇಹಿತ ವೈ. ಮಹೇಶ್ ಇಬ್ಬರು ಕರಪತ್ರವನ್ನು ಸಿದ್ಧಪಡಿಸಿಕೊಂಡು, ಒಂದೇ ಒಂದು ಸ್ಕೂಟರ್ ನಲ್ಲಿ ಊರೂರಿಗೆ ಹಂಚಿ ಬಂದಿದ್ದೆವು. ಆಗಿನ ಒಟ್ಟು ಖರ್ಚು 3,500 ರೂಪಾಯಿ. 1983 ರಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ ಜಾರ್ಜ್ ಫರ್ನಾಂಡೀಸ್ ಅವರು 10,000 ರೂಪಾಯಿ ನನಗೆ ಕೊಟ್ಟಿದ್ದರು, ನಮ್ಮೂರ ಜನ 10,000 ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು. ಹಳ್ಳಿಗಳಿಗೆ ಪ್ರಚಾರಕ್ಕೆ ಹೋದಾಗ ಜನ ದುಡ್ಡು ಕೊಡೋರು. ಆ ಚುನಾವಣೆಯಲ್ಲಿ ಒಟ್ಟು ಖರ್ಚಾದ ಹಣ 63,000 ರೂಪಾಯಿ ಎಂದು ವಿವರಿಸಿದರು.
ಚುನಾವಣಾ ಆಯೋಗ 40 ಲಕ್ಷ ರೂಪಾಯಿ ವಿಧಾನಸಭೆ ಚುನಾವಣೆಗೆ, 95 ಲಕ್ಷ ರೂಪಾಯಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಬೇಕು ಎಂದು ನಿಗದಿ ಮಾಡಿದೆ. ಆದರೆ ಚುನಾವಣಾ ಆಯೋಗಕ್ಕೆ ನೀಡುವುದು ರಾಮನ ಲೆಕ್ಕ, ಇದನ್ನು ಬಿಟ್ಟು ಇನ್ನೊಂದು ಕೃಷ್ಣನ ಲೆಕ್ಕವೂ ಇರುತ್ತೆ. ಇಂದಿನ ಚುನಾವಣಾ ವ್ಯವಸ್ಥೆ ಹಾಳಾಗಲು ನಮ್ಮ ಪಾಲು ಎಷ್ಟಿದೆಯೂ ಅಷ್ಟೇ ಪ್ರಜಾಪ್ರಭುತ್ವದ ಉಳಿದ ಅಂಗಗಳ ಪಾಲೂ ಇದೆ. ಸಮಾಜದ ಎಲ್ಲಾ ಶಿಕ್ಷಿತ, ವಿಚಾರವಂತ, ಪ್ರಗತಿಪರ, ಸಾಮಾಜಿಕ ಕಾಳಜಿ ಇರುವ ಜನರ ಜೊತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸುಧಾರಣೆ ಸಾಧ್ಯ ಎಂದರು.
ಅಮೇರಿಕಾದ ನ್ಯಾಯಮೂರ್ತಿ ಲೂಯಿಸ್ ಬ್ರಾಂಡೆಸ್ ಅವರು ” ನಾವೆಲ್ಲ ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ, ಈ ದೇಶದಲ್ಲಿ ಅಪಾರ ಸಂಪತ್ತು ಗಳಿಸಿರುವ ಜನರಿದ್ದಾರೆ, ಸಾಮಾನ್ಯ ಜನರೂ ಇದ್ದೇವೆ ಆದರೆ ಇಲ್ಲಿ ಸಿರಿವಂತರು ಮತ್ತು ಪ್ರಭುತ್ವ ಒಟ್ಟಿಗೆ ಸೇರಬಾರದು” ಎಂದು ಹೇಳಿದ್ದಾರೆ. ಇದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಧಿಕಾರ ಉಳ್ಳವರ ಕೈಯಲ್ಲಿ ಮಾತ್ರವೇ ಇರಬಾರದು ಎಂದು ಹೇಳಿದ್ದರು.
ಇಂದು ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ಬಾಡಿಗಳ ಮೈತ್ರಿ ಆರಂಭವಾಗಿದೆ. ಇದರಿಂದ ಕಾರ್ಪೊರೇಟ್ ಬಾಡಿಗಳು ಸರ್ಕಾರವನ್ನು ನಿಯಂತ್ರಿಸುವಷ್ಟು ಪ್ರಬಲವಾಗಿವೆ. 2013 ರಲ್ಲಿ ದೇಶದ ಕೆಲವೇ ಕೆಲವು 142 ಕಾರ್ಪೊರೇಟ್ ಸಂಸ್ಥೆಗಳ ಆಸ್ತಿ 23 ಲಕ್ಷ ಕೋಟಿ ರೂಪಾಯಿ ಇತ್ತು, ಈಗದು 54 ಲಕ್ಷ ಕೋಟಿಗೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕಾರ್ಪೊರೇಟ್ ಕಂಪನಿಗಳೊಂದಿಗೆ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬಾರದು ಎಂದು ಹೇಳಿದ್ದು.
ದೇಶದಲ್ಲಿ ಸುಮಾರು 19 ಲಕ್ಷ ಇವಿಎಂ ಗಳು ನಾಪತ್ತೆಯಾಗಿವೆ ಎಂಬ ವರದಿಯನ್ನು ಹೆಚ್.ಕೆ ಪಾಟೀಲರು ಓದಿ ಹೇಳಿದರು. ಇದಕ್ಕೆ ಹೊಣೆ ಯಾರು? ಇದೇ ಕಾರಣಕ್ಕೆ ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ. ನನ್ನ ಬಳಿ ಒಬ್ಬ ತಂತ್ರಜ್ಞ ಬಂದು ಇವಿಎಂ ಗಳನ್ನು ಹೇಗೆ ದುರ್ಬಳಕೆ ಮಾಡಲು ಸಾಧ್ಯ ಎಂದು ಕಣ್ಣೆದುರೇ ಡೆಮೋ ತೋರಿಸಿದ. ತಂತ್ರಜ್ಞಾನದಲ್ಲಿ ನನಗೆ ಹೆಚ್ಚು ಮಾಹಿತಿ ಇಲ್ಲದಿರುವುದರಿಂದ ಸರಿ ಬಿಡಪ್ಪಾ ಅಂತ ಹೇಳಿ ಕಳುಹಿಸಿದೆ. ಆದರೆ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ ಎಂಬುದು ಸತ್ಯ. ಅದಕ್ಕೆ ಜರ್ಮನಿಯಂತಾ ಮುಂದುವರಿದ ರಾಷ್ಟ್ರ ಕೂಡ ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್ ಗೆ ಮರಳಿದೆ.
ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷದ ಚಿಹ್ನೆಯ ಮೇಲೆ ನಡೆಯಲ್ಲ ಅಂದಮೇಲೆ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುವ ಅಗತ್ಯ ಏನಿದೆ? ಚುನಾವಣೆಯಲ್ಲಿ ವಿಳಂಬವಾದಷ್ಟೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದರು.
ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗದ ಆದ್ಯಕ್ಷರ ನೇಮಕವನ್ನು ಸರ್ಕಾರದ ಶಿಫಾರಸಿನ ಮೇಲೆ ರಾಜ್ಯಪಾಲರು, ರಾಷ್ಟ್ರಪತಿಗಳು ಮಾಡುವ ಬದಲು ಪ್ರಧಾನಿಗಳು, ವಿರೋಧ ಪಕ್ಷದ ನಾಯಕರು, ಮೇಲ್ಮನೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಂಡ ಒಂದು ಮಂಡಳಿ ರಚನೆಯಾಗಬೇಕು. ಅವರ ಮೂಲಕ ಅಧ್ಯಕ್ಷರು ಮತ್ತು ಆಯುಕ್ತರ ನೇಮಕವಾಗಬೇಕು. ಸುಧಾರಣೆಗಳು ಹೀಗೆ ಆರಂಭವಾದಾಗ ಮಾತ್ರ ಬದಲಾವಣೆ ಸಾಧ್ಯ.
1990ರಲ್ಲಿ ವಿ.ಪಿ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದಿನೇಶ್ ಗೋಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು, ಅದರಲ್ಲಿ ಅಡ್ವಾಣಿ ಅವರು ಇದ್ದರು. ಆ ಸಮಿತಿಯ 107 ಶಿಪಾರಸುಗಳಲ್ಲಿ ಹಲವು ಜಾರಿಯಾಗಲೇ ಇಲ್ಲ. 1993 ರಲ್ಲಿ ವೋರಾ ಕಮಿಟಿ ರಚನೆಯಾಯಿತು. ಅದೂ ಶಿಫಾರಸು ಮಾಡಿತ್ತು. 1885 ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪಕ್ಷಾಂತರ ನಿಷೇಧ ಕಾನೂನು ಜಾರಿಗೆ ತಂದರು. ಆದರೆ ಈಗಲೂ ಪಕ್ಷಾಂತರ ನಡೆಯುತ್ತಿದೆ. ಒಂದು ಪಕ್ಷದಿಂದ ಗೆದ್ದ ನಂತರ ಮಧ್ಯದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ವ್ಯಕ್ತಿ ಮುಂದಿನ ಹತ್ತು ವರ್ಷಗಳ ವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತ ನಿಯಮ ರೂಪಿಸಿ, ಜಾರಿ ಮಾಡಬೇಕು. ಆಗ ಪ್ರಜಾಪ್ರಭುತ್ವಕ್ಕಂಟಿದ ಪಕ್ಷಾಂತರ ಎಂಬ ರೋಗ ಗುಣವಾಗುತ್ತದೆ. ಈ ಕೆಲಸವನ್ನು ಕೇಂದ್ರ ಸರ್ಕಾರ ಏಕೆ ಮಾಡಬಾರದು? ಎಂದು ಪ್ರಶ್ನಿಸಿದರು.
ಒಂದು ದೇಶ, ಒಂದು ಚುನಾವಣೆ ಎಂಬುದು ಭಾರತದಂತ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಪ್ರಾಯೋಗಿಕವಾಗಿ ಅಸಾಧ್ಯವಾದ ಮಾತು. ಇದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.16ರಷ್ಟು, ಈಗ ದೇಶದ ಸಾಕ್ಷರತೆ ಪ್ರಮಾಣ ಶೇ.82ಷ್ಟು. ಶೈಕ್ಷಣಿಕ ಕ್ಷೇತ್ರದಲ್ಲಿ ಇಷ್ಟು ಬದಲಾವಣೆ ಆದರೂ ಇಂದಿನ ಚುನಾವಣೆಯನ್ನು ಜಾತಿ, ಹಣ ಬಲ, ತೋಳ್ಬಲ ಮತ್ತು ಮಾಫಿಯಾಗಳು ನಿಯಂತ್ರಿಸುತ್ತಿವೆ ಎಂದರು.
ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ಆತ್ಮಾವಲೋಕನ ಮಾಡಿಕೊಂಡು, ಸ್ವಯಂ ಶುದ್ದೀಕರಣ ಮಾಡದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವು ಕಷ್ಟವಾಗುತ್ತದೆ. ಪ್ರಾಮಾಣಿಕ ಜನಪರ ಕಾಳಜಿ ಇರುವ, ಆರ್ಥಿಕವಾಗಿ ದುರ್ಬಲರಾದ ನಿಷ್ಠಾವಂತ ಜನರು ರಾಜಕೀಯದಿಂದ ದೂರ ಹೋಗದಂತೆ ತಡೆಯಬೇಕು ಎಂಬ ಕಾರಣಕ್ಕೆ ರಾಜಕೀಯ ವ್ಯವಸ್ಥೆಯ ಬದಲಾವಣೆಯನ್ನು ಮಾಡಲೇಬೇಕಾಗಿದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post