ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಬ್ರಹ್ಮಣ್ಯ ನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಕನ್ನಡ ಕಿರುತೆರೆ ನಟಿ ಚೇತನಾರಾಜ್ (22) Actress Chethana Raj ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಫ್ಯಾಟ್ ರಿಡಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಚೇತನಾ, ರಾಜಾಜಿನಗರ ಬಳಿ ಇರುವ ಶೆಟ್ಟಿ ಆಸ್ಪತ್ರೆಯಲ್ಲಿ ದೇಹದ ಕೊಬ್ಬು ತೆಗೆಯುವ ವೇಳೆ, ಶ್ವಾಸಕೋಶಕ್ಕೆ ನೀರು ಸೇರಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಚೇತನಾ ತಂದೆ ವರದರಾಜ್ ಮಗಳು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ನನಗೆ ಗೊತ್ತಾಗಿರೋ ಪ್ರಕಾರ, ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವಳಿಗೆ ಉಸಿರಾಟದ ತೊಂದರೆಯಾಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.
Also read: ಭದ್ರಾವತಿ: ಶಿಕ್ಷಕ ವರ್ಗದಿಂದ ವಿದ್ಯಾರ್ಥಿನಿಯರಿಗೆ ಅದ್ಧೂರಿ ಸ್ವಾಗತ…
ಚೇತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರಿದ್ದು, ಚೇತನಾ ತಂದೆ ಮತ್ತು ತಾಯಿ ಲಕ್ಷ್ಮಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.


ಬೆಂಗಳೂರಿನ ಅಬ್ಬಿಗೆರೆ ಮೂಲದ ಚೇತನಾ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದರು. ಹವಾಯಾಮಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಈಕೆ, ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸಿದ್ದರು ಎನ್ನಲಾಗಿದೆ.
ಚೇತನಾ ರಾಜ್ ಸಾವನ್ನಪ್ಪಿರುವುದು ಕಿರುತೆರೆ ಲೋಕಕ್ಕೆ ಆಘಾತ ಮೂಡಿಸಿದ್ದು, ಅಷ್ಟೊಂದು ದಪ್ಪ ಇರದ ಆ ಹುಡುಗಿಗೆ ಯಾರು ಈ ರೀತಿಯ ಸಲಹೆ ನೀಡಿದರೋ, ಫ್ಯಾಟ್ ಸರ್ಜರಿಗೆಂದು ಹೋದವಳು, ಜೀವಂತವಾಗಿ ವಾಪಸ್ಸು ಬರಲಿಲ್ಲ ಎಂದು ಚೇತನಾ ಸ್ನೇಹಿತೆಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















