ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಡಿನಲ್ಲಿ ಮುಂಗಾರು ಮಳೆ ಸುರಿದು, ಸಮೃದ್ಧ ಬೆಳೆ ಬೆಳೆಯುವಂತಾಗಿ ರೈತನ ಬದುಕು ಹಸನಾಗಲಿ ಎಂದು ಪದ್ಮಶ್ರೀ ಪುರಸ್ಕೃತೆ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ Saalumarada Thimmakka ಆಶಯ ವ್ಯಕ್ತಪಡಿಸಿದರು.
ನಗರದ ಸರ್ಜಿ ಫೌಂಡೇಷನ್ Saji Foundation ಹಾಗೂ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಗಿಡ ನೆಟ್ಟು ಬಳಿಕ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಮುಂಗಾರು ಮಳೆಯಾಗಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡು ಹುಲುಸಾದ ಬೆಳೆಯನ್ನು ಬೆಳೆದು ದೇಶ ಸಮೃದ್ಧವಾಗಬೇಕು ಎಂದು ಹೇಳಿದರು.
ಮಕ್ಕಳು ಚಿಕ್ಕವಯಸ್ಸಿನಿಂದಲೇ ಹಸಿರಿನ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ನೆಟ್ಟ ಗಿಡಗಳನ್ನು ರಕ್ಷಣೆ ಮಾಡಬೇಕು. ದೇಶವು ಕೊರೊನಾ ಮಹಾಮಾರಿಯಂತಹ ಕಾಯಿಲೆಯಿಂದ ನಲುಗಿ ಹೋಗಿದೆ. ಸಂಕಷ್ಟದ ದಿನಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಆರೊಗ್ಯವಂತರಾಗಿ, ಹಸನಾಗಿ ಬಾಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿ, ವರ್ಷವಿಡೀ ವನಮಹೋತ್ಸವ ಆಚರಣೆ ಮಾಡಿದರೂ ಸಾಲದು. ಬರೀ ಗಿಡ ನೆಡುವುದಷ್ಟೇ ಜವಾಬ್ದಾರಿಯಲ್ಲ, ನೆಟ್ಟ ಗಿಡಗಳನ್ನು ಜಾಗೃತಿಯಿಂದ ರಕ್ಷಿಸುವುದೇ ನಿಜವಾದ ಪರಿಸರ ಪೂರಕ ಚಟುವಟಿಕೆಗಳನ್ನು ಎಂದು ಹೇಳಿದರು.
ಜಲಮಾಲಿನ್ಯ, ವಾಯು ಮಾಲಿನ್ಯದಂತಹ ಸಂದಿಗ್ಧತೆಗಳಿಂದ ಹೊರಬರಬೇಕಾದರೆ ಇರುವುದೊಂದೇ ಭೂಮಿ ಹಾಗೂ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಿದೆ. ಇಂದಿನ ತಾಂತ್ರಿಕತೆಯ ಹೊಡೆತಕೆಕ ಅರಣ್ಯ ನಾಶವಾಗುತ್ತಿದೆ. ಇದರ ಪರಿಣಾಮ ಪ್ರಾಕೃತಿಕವಾಗಿ ವೈಪರೀತ್ಯಗಳನ್ನು ಕಾಣುತ್ತಿದ್ದೇವೆ. ಎಲ್ಲರೂ ಕಟಿಬದ್ಧರಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಹಸಿರು ಸೃಷ್ಟಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
Also read: ಶಾರದಾ ಅಂಧರ ವಿಕಾಸ ಕೇಂದ್ರದಲ್ಲಿ ಅಭಿಮಾನಿಗಳಿಂದ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ ಹಾಗೂ ಪ್ರೇರಣೆ. ಜೀವನದುದ್ದಕ್ಕೂ ಅವರು ಬೆವರು ಸುರಿಸಿ, ನೆಟ್ಟ ಗಿಡಗಳು ಇಂದು ಹೆಮ್ಮರಗಳಾಗಿದ್ದು, ಬರೀ ನೆರಳಾಗದೇ ಆಮ್ಲಜನಕ ಮೂಲಕ ಉಸಿರಾಗಿವೆ. ಒಂದು ಆಲದ ಮರ ಕನಿಷ್ಠ 10 ಮಂದಿಗೆ ಸಾಕಾಗುವಷ್ಟು ಆಮ್ಲಜನಕ ಪೂರೈಸುತ್ತದೆ. ಈ ರೀತಿ ಲೆಕ್ಕ ಹಾಕಿದರೆ ಸಾಲು ಮರದಮ್ಮ ಅವರು ಸಾವಿರಾರು ಮಂದಿಯ ಜೀವವನ್ನು ಉಳಿಸಿದಂತಾಗಿದೆ. ಆ ಮೂಲಕ ಮನುಷ್ಯನಿಗೆ ಹಸಿರು ಎಷ್ಟು ಮುಖ್ಯ ಎಂಬುದನ್ನು ಕಾಯಕ ಪ್ರಜ್ಞೆಯ ಮೂಲಕ ಸಾಕ್ಷೀಕರಿಸಿದ್ದಾರೆ. ಇವರ ಪರಿಸರ ಜಾಗೃತಿ ಎಲ್ಲರಿಗೂ ಪಾಠವಾಗಿದೆ, ಪ್ರೇರಣೆಯಾಗಿದೆ ಎಂದರು.
ದೇಶದ ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ನಾಶದ ಪ್ರಮಾಣವೂ ಹೆಚ್ಚಾಗಿದೆ. ಶೇಕಡ 80 ರಷ್ಟಿದ್ದ ಕಾಡು ಇದೀಗ ಶೇ.30ಕ್ಕೆ ಬಂದು ತಲುಪಿದ್ದು ಭೂಮಿ ಬರಡಾಗುತ್ತದೆ. ಇದು ಜನಜೀವನದ ಮೇಲೆ ಪ್ರಾಕೃತಿಕ ವಿಕೋಪದಂತಹ ಅವಘಡಗಳು ಸಂಭವಿಸುತ್ತಾ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಇರುವುದೊಂದೇ ಭೂಮಿಯ ರಕ್ಷಣೆಯನ್ನು ಮಾಡಬೇಕಿದೆ ಎಂದರು.
ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಈಗ ಹೊಸದೊಂದು ಸೇರ್ಪಡೆಯಾಗಿದೆ. ಅದುವೇ ಬ್ರೈನ್ ಮಾಲಿನ್ಯ. ಈ ಎಲ್ಲ ಮಾಲಿನ್ಯಗಳು ಮನುಷ್ಯನಿಗೆ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿವೆ. ಜಾಗೃತರಾಗುವ ಮೂಲಕ ಭವಿಷ್ಯದಲ್ಲಿ ಆಪತ್ತು ಸಂಭವಿಸದಿರಲು ಭೂಮಿಯ ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಯುವ ಸಮೂಹ ಪ್ರಸ್ತುತ ಪರಿಸರದ ಬಗ್ಗೆ ಸಂವೇದನೆಯನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಜಿ ಫೌಂಡೇಷನ್ ಸಾಲುಮರದ ತಿಮ್ಮಕ್ಕ ಅವರನ್ನು ಆಹ್ವಾನಿಸಿ, ಎಲ್ಲರಿಗೂ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯಿಂದಾಗಿ ಭೂಮಿಯೇ ಸುಡಲು ಶುರುವಾಗಿದೆ. “ಒಲೆ ಹತ್ತಿ ಉರಿದೊಡೆ ನಿಲಬಹುದು, ಧರೆ ಹೊತ್ತಿ ಉರಿದೊಡೆ ನಿಲಬಹುದೇ?” ಎಂಬ ಶರಣರ ವಾಣಿಯನ್ನು ಆತ್ಮವಲೋಕನ ಮಾಡಿಕೊಳ್ಳುವ ಮೂಲಕ ಹಸಿರು ಹೊಂದಿಸುವ ಕಾರ್ಯವನ್ನು ಎಲ್ಲರೂ ಸಾಗಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿ.ಎಫ್.ಓ. ಜಿ.ಯು ಶಂಕರ್, ಸಿ.ಸಿ.ಎಫ್ ಹನುಮಂತಪ್ಪ, ಫಾದರ್ ವಿನ್ಸೆಂಟ್, ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಫಾದರ್ ನಿಕ್ಸನ್ ಮಾತನಾಡಿದರು. ಎಸ್.ಎನ್.ಸಿ.ಎಸ್ ಅಧ್ಯಕ್ಷರಾದ ರೆವರೆಂಡ್ ಫಾದರ್ ಪೂಪಲ್ಲಿಲ್ ಅಧ್ಯಕ್ಷತೆ ವಹಿಸಿದ್ದರು. ಸರ್ಜಿ ಫೌಂಡೇಷನ್ ಟ್ರಸ್ಟಿ ನಮಿತಾ ಸರ್ಜಿ ಹಾಗೂ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿಪತ್ರ ಹಾಗೂ ಸರ್ಜಿ ಹೆಲ್್ತ ಕಾರ್ಡ್ಗಳನ್ನು ಸಾಲುಮರದ ತಿಮ್ಮಕ್ಕ ಅವರು ವಿತರಿಸಿದರು. ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಗೌರಿ ಸರ್ಜಿ, ಪ್ರಾರ್ಥನಾ ನಾರಾಯಣ ಮತ್ತು ಶಾರೂನ್ ಡಿಸೋಜಾ ನಿರೂಪಿಸಿದರು. ನಾಗರಾಜ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post