ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಚ್ಛ ಪರಿಸರದಿಂದ ಆರೋಗ್ಯಪೂರ್ಣ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಪ್ಪ ತಾಲೂಕು ಗೌರಿಗದ್ದೆಯ ಅವಧೂತ ವಿನಯ ಗುರೂಜಿ Gowrigadde Vinay Guruji ಹೇಳಿದರು.
ಕೊಪ್ಪ ತಾಲೂಕು ಗೌರಿಗದ್ದೆ ಮಹಾತ್ಮಾ ಗಾಂದಿ ಸೇವಾ ಟ್ರಸ್ಟ್, ಶಿವಮೊಗ್ಗ ಸರ್ಜಿ ಪೌಂಡೇಷನ್, ರೌಂಡ್ ಟೇಬಲ್ ಇಂಡಿಯಾ, ಓಪನ್ ಮೈಂಡ್ಸ್ ಸ್ಕೂಲ್, ಜೆಸಿಐ ಮಲ್ನಾಡ್, ಪರೋಪಕಾರಂ, ಆಶ್ರಯ ಬಡಾವಣೆ ವೇದಿಕೆ, ಪರ್ಯ್ವರ್ಣ್ ವತಿಯಿಂದ ಗುರುವಾರ ಮುಂಜಾನೆ ಸಕ್ರೇಬೈಲು – ಮಂಡಗದ್ದೆ ಮಾರ್ಗದ 6 ಕಿಲೊ ಮೀಟರ್ ದೂರದ ಇಕ್ಕೆಲಗಳಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತ್ಯಾಜ್ಯವು ವನ್ಯ ಜೀವಿಗಳ ಪ್ರಾಣಕ್ಕೂ ಎರವಾಗುವ ಸಾಧ್ಯತೆ ಹೆಚ್ಚಿದೆ. ಜಾನುವಾರುಗಳಿಗೂ ಅಪಾಯ ಎದುರಾಗಲಿದೆ. ಮದ್ಯ ಸೇವನೆ ಮಾಡುವವರಿಗೂ ಒಂದು ವ್ಯವಸ್ಥೆ ಎಂಬುದಿದೆ. ಹಾಗಾಗಿ ಈ ರೀತಿ ಎಲ್ಲೆಂದರಲ್ಲಿ ಕುಡಿದು ಖಾಲಿ ಬಾಟಲಿಗಳನ್ನು ಬಿಸಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ವಿಶೇಷ ಕಾರ್ಯಕ್ರಮ, ಮದುವೆ, ಶುಭ ಕಾರ್ಯಗಳಲ್ಲಿ ಹಣ ಮತ್ತು ಬೆಲೆ ಬಾಳುವ ವಸ್ತು ಕೊಡುವುದಕ್ಕಿಂತ ಸಸಿಗಳನ್ನು ಉಡುಗೊರೆ ನೀಡುವ ಮೂಲಕ ಗಿಡ ಮರ ಬೆಳೆಸಲು ಪ್ರೇರಣೆ ನೀಡುವ ಕೆಲಸವಾಗಬೇಕು. ಕಾಡು ನಾಡು ಎಲ್ಲವೂ ಸಮೃದ್ಧವಾಗಿರುತ್ತದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆ ಅದಿಕಾರಿಗಳಿಂದ ಎಲ್ಲ ರೀತಿಯ ಸಹಕಾರವನ್ನು ದೊರೆತಿದೆ. ಅಲ್ಲದೇ ಹಲವು ಸಂಘಟನೆಗಳ ಸಹಕಾರದೊಂದೊಂದಿಗೆ ರಸ್ತೆ ಬದಿಗಳಲ್ಲಿ 500 ಮೀಟರ್‌ಗೊಂದರಂತೆ 8 ತ್ಯಾಜ್ಯದ ಸ್ಟೀಲ್ ತೊಟ್ಟಿಗಳನ್ನು ಭದ್ರವಾಗಿ ಅಳವಡಿಸಲಾಗಿದೆ. ಇದರಲ್ಲೇ ತ್ಯಾಜ್ಯವನ್ನು ಹಾಕಬೇಕು. ವಾರಕ್ಕೊಮ್ಮೆ ಕಸದ ಸೂಕ್ತ ವಿಲೆವಾರಿಗೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕೊಳೆಯಬೇಕೆಂದರೆ ಸುಮಾರು 200 ವರ್ಷಗಳ ಕಾಲ ಬೇಕಾಗುತ್ತದೆ. ಹಾಗೆಯೇ ಬಿಟ್ಟರೆ ಪ್ಲಾಸ್ಟಿಕ್ ಬಿದ್ದ ಜಾಗದಲ್ಲಿ ಯಾವುದೇ ಬೆಳೆ, ಸಸ್ಯ ಕೂಡ ಮೇಲೇಳುವುದಿಲ್ಲ. ಅದರಲ್ಲೂ ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ ಬೇಕಾಬಿಟ್ಟಿ ಬಿಸಾಡುವುದರಿಂದ ಪರಿಸರದ ಸೌಂದರ್ಯವೂ ಹಾಳಾಗುತ್ತದೆ. ಹಾಗಾಗಿ ಪ್ರವಾಸಿಗರೂ ಸೇರಿದಂತೆ ಎಲ್ಲರೂ ಪರಿಸರ ರಕ್ಷಣೆಯ ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೂರು ಲೋಡ್‌ಗಿಂತ ಹೆಚ್ಚು ತ್ಯಾಜ್ಯ:
ಮುಂಜಾನೆ 6 ಗಂಟೆಯಿಂದ ಸತತ ನಾಲ್ಕೈದು ತಾಸು ರಸ್ತೆ ಬದಿ ಹಾಗೂ ಕಾಡೊಳಗಿನ ಘನ ತ್ಯಾಜ್ಯವನ್ನು ಚೀಲಗಳಲ್ಲಿ ಗಾಜಿನ ಬಾಟಲಿ, ಮರು ಸಂಸ್ಕರಣೆ ಆಗುವ ಪ್ಲಾಸ್ಟಿಕ್ ಹಾಗೂ ಮರು ಸಂಸ್ಕರಣೆ ಆಗದ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ವಿಂಗಡಿಸಿ ಮೂರು ಲಾರಿ ಲೋಡ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.










Discussion about this post