ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸರಳವಾಸ್ತು ಚಂದ್ರಶೇಖರ್ ಗುರೂಜಿ Sarala Vaasthu Chandrashekar Guruji ಹತ್ಯೆ ಪ್ರಕರಣದ ಆರೋಪಿಗಳನ್ನು ಘಟನೆ ನಡೆದು ಕೇವಲ 4 ಗಂಟೆಗಳ ಒಳಗಾಗಿ ಸಿನಿಮೀಯ ಶೈಲಿಯಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ರಾಮದುರ್ಗಾ ಹೆದ್ದಾರಿ ಬಳಿಯಲ್ಲಿ ಹಂತಕರ ಬೆನ್ನಟ್ಟಿದ ಡಿವೈಎಸ್‌ಪಿ ನೇತೃತ್ವದ ತಂಡ ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಆದರೆ, ಇದಕ್ಕೆ ನಿರಾಕರಿಸಿದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಸ್ವತಃ ಡಿವೈಎಸ್‌ಪಿ ಅವರು ಬಂದೂಕು ತೆಗೆದು ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದ ಕಾರಣ ಬೇರೆ ದಾರಿಯಿಲ್ಲದೆ ಹಂತಕರು ಶರಣಾಗಿದ್ದಾರೆ. ಶರಣಾಗುವ ವೇಳೆಯಲ್ಲೂ ಓರ್ವ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಓಡಿದ ಪೊಲೀಸರು ಹಂತಕನನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.

Also read: ಭಾರತೀಯ ನೌಕಾಪಡೆಗೆ ದಾಪುಗಾಲಿಡಲು ಸಿದ್ಧರಾದ ಮಹಿಳಾ ಅಗ್ನಿವೀರರು!
ನಾಳೆ ಗುರೂಜಿ ಅಂತ್ಯಕ್ರಿಯೆ:
ಭೀಕರವಾಗಿ ಹತ್ಯೆಯಾದ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಾಳೆ ನಡೆಯಲಿದ್ದು, ಎಲ್ಲಿ ನಡೆಯಲಿದೆ ಎಂಬುದನ್ನು ಕುಟುಂಬಸ್ಥರು ಇನ್ನು ಬಹಿರಂಗಪಡಿಸಿಲ್ಲ. ಘಟನೆ ನಡೆದ ಸ್ಥಳವನ್ನು ಪೊಲೀಸರು ಮಹಜರು ಮಾಡುತ್ತಿದ್ದು, ರಾತ್ರಿ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ವರದಿಯಾಗಿದೆ.

ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘಟನೆ ಅತ್ಯಂತ ಹೇಯ ಕೃತ್ಯವಾಗಿದ್ದು, ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಇದೇವೇಳೆ ಮಾತನಾಡಿರುವ ಸಚಿವ ಆರ್. ಅಶೋಕ್, ಗುರೂಜಿಗೆ ಯಾವುದೇ ವೈರಿಗಳು ಇರಲಿಲ್ಲ. ಹತ್ತಿರದವರೇ ಕೃತ್ಯ ಮಾಡಿರುವ ಶಂಖೆ ಇದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದಿದ್ದಾರೆ.










Discussion about this post