ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೌಕರರು ಹಾಗೂ ಗ್ರಾಹಕರ ಮೇಲೆ ತೋರುವ ಕಾಳಜಿ, ಗೌರವದ ಮೇಲೆ ಹೋಟೆಲ್ ಉದ್ಯಮದ ಭವಿಷ್ಯ ನಿಂತಿದೆ ಎಂದು ಆಕಾಶ್ ಇನ್ ಗ್ರೂಪ್ ಮಾಲೀಕ ಎಚ್.ಎಸ್. ಸೂರ್ಯನಾರಾಯಣ ಹೇಳಿದರು.
ಶಿವಮೊಗ್ಗ ನಗರದ ಆಕಾಶ್ ಇನ್ ಗ್ರೂಪ್ ಸಭಾಂಗಣದಲ್ಲಿ ನೌಕರರಿಗೆ, ಸಿಬ್ಬಂದಿ ವರ್ಗದವರಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಹಮ್ಮಿಕೊಳ್ಳಲಾದ “ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನ ಸಮನಾಗಿ ನಿರ್ವಹಣೆ” ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕರೊನಾ ಸಂದರ್ಭದಲ್ಲಿ ಹೋಟೆಲ್ ಉದ್ಯಮ ಬಹಳ ಸಂಕಷ್ಟಕ್ಕೆ ಸಿಲುಕಿತ್ತು. ನಂತರದ ದಿನಗಳಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ತೋರಿಸುವ ಕಾಳಜಿ ಹಾಗೂ ಗೌರವ, ನೌಕರರಿಗೆ ತೋರಿಸುವ ಪ್ರೀತಿ ಸಹಕಾರದಿಂದ ಹೊಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಉದ್ಯಮ ಬೆಳೆಯುತ್ತಿದ್ದಂತೆ ಅದರ ಸಮರ್ಪಕ ನಿರ್ವಹಣೆ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಷ್ಟೇ ಕಲಿತರು ಇನ್ನೂ ಕಲಿಯುವುದು ಸಾಕಷ್ಟು ಇರುತ್ತದೆ. ಆದ್ದರಿಂದ ಇಂತಹ ಪರಿಣಾಮಕಾರಿ ತರಬೇತಿ ಶಿಬಿರಗಳನ್ನು ಎಲ್ಲ ಉದ್ಯಮಗಳಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಹೋಟೆಲ್ ಉದ್ಯಮ ಸೇವಾ ಉದ್ಯಮವಾಗಿದ್ದು, ಇಲ್ಲಿ ಗ್ರಾಹಕ ಮತ್ತು ನೌಕರರ ಸಂಬಂಧವೇ ಪ್ರಮುಖವಾಗಿರುತ್ತದೆ. ಗ್ರಾಹಕರ ತೃಪ್ತಿಗೆ ನೌಕರರ ನಡವಳಿಕೆಗಳು ಮೂಲ ಕಾರಣ ಎಂದು ಹೇಳಿದರು.
Also read: ನ್ಯಾಮತಿ: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರಕ್ಕೆ ಡಿ.ಎಸ್. ಅರುಣ್ ಚಾಲನೆ
ಶುಭಂ ಹೋಟೆಲ್ ಮಾಲೀಕ ಉದಯ್ ಕದಂಬ ಮಾತನಾಡಿ, ಶ್ರದ್ಧೆಯಿಂದ ಹೋಟೆಲ್‌ನಲ್ಲಿ ಉತ್ತಮ ರುಚಿ, ಶುಚಿಯಾದ ಆಹಾರ ನೀಡಬೇಕು. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವಂತೆ ಆಹಾರ ನೀಡಬೇಕು ಎಂದು ತಿಳಿಸಿದರು.
ಜೆಸಿಐ ರಾಷ್ಟ್ರೀಯ ಯುವ ತರಬೇತುದಾರ ಪ್ರಜ್ವಲ್ ಮಾತನಾಡಿ, ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನು ಸಮನಾಗಿ ನಿರ್ವಹಣೆ ಮಾಡಬೇಕು. ಸಮಯ ನಿರ್ವಹಣೆ ಬಗ್ಗೆ ಸರಿಯಾದ ಕೌಶಲ್ಯ ಹೊಂದಬೇಕು ಎಂದರು. ನಂತರ ನೌಕರರ ಪ್ರಶ್ನೆಗಳಿಗೆ ಉತ್ತರಿಸಿದರು.
ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ಸಂಸ್ಥೆ ವತಿಯಿಂದ ಶಾಲಾ ಕಾಲೇಜುಗಳ ಜತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವಶ್ಯವಿರುವ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ವಿವಿಧ ರೀತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್, ಮಥುರಾ ಎನ್. ಗೋಪಿನಾಥ್, ಪ್ರಜ್ವಲ್ ಜೈನ್, ಉದಯ್ ಕದಂಬ ಅವರನ್ನು ಸನ್ಮಾನಿಸಲಾಯಿತು. ಅವಿನಾಶ್ ಗೌಡ, ಕಿಶೋರ್, ಮಂಜುನಾಥ ಕದಂ, ಶರವಣ್, ಪ್ರವೀಣ್, ಯಶೋಧರ್, ಅಜಿತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post