ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಳಗೋಡು ಮತ್ತು 72 ಗ್ರಾಮಗಳಿಗೆ (127 ಜನವಸತಿಗಳಿಗೆ) ಮಂಚನಬೆಲೆ ಜಲಾಶಯದಿಂದ 175 ಕೋಟಿ ರೂ. ಅನುದಾನದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಎಸ್.ಟಿ. ಸೋಮಶೇಖರ್ Minister S T Somashekar ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಹೆಚ್ಚಾಗಿ ನೀರಿನ ಪೂರೈಕೆಗೆ ಅಂತರ್ಜಲ ಮೂಲವನ್ನು ಅವಲಂಬಿಸಿದ್ದು, ಈ ಮೂಲಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ನೀರಿನ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ 72 ಗ್ರಾಮಗಳಿಗೆ (127 ಜನವಸತಿಗಳಿಗೆ) ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸುಸ್ಥಿರ ಮತ್ತು ಸುರಕ್ಷಿತ ಮೇಲ್ಮೈ ಜಲಮೂಲದಿಂದ ಕುಡಿಯುವ ನೀರನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದರು.

175 ಕೋಟಿ ರೂ. ಮೊತ್ತದ ಈ ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಜಲಾಶಯದಿಂದ ನೀರನ್ನು ಸೆಳೆಯುವ ಯೋಜನೆಗೆ ಜಲಸಂಪನ್ಮೂಲ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಇದೀಗ ಸಂಪುಟ ಸಭೆಯಲ್ಲಿ ಕೂಡ ಅನುಮೋದನೆ ಸಿಕ್ಕಿರುವುದರಿಂದ ಬೆಂಗಳೂರು ದಕ್ಷಿಣ ತಾಲೂಕಿನ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

Also read: ವಿಐಎಸ್‌ಎಲ್ ನವೀಕರಣಕ್ಕೆ ಬಂಡವಾಳ ಹೂಡಿಕೆ ಮಾಡುವಂತೆ ಸಿಎಂಗೆ ಮನವಿ
“ಈ ಹಿಂದೆ ಯಶವಂತಪುರ ಕ್ಷೇತ್ರದ ಶಾಸಕರಾಗಿದ್ದ, ಹಾಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಈ ಕುರಿತು ಚಿಂತನೆ ನಡೆಸಿದ್ದರು. ನಾವು ಶಾಸಕರಾಗಿ ಆಯ್ಕೆಯಾದ ಬಳಿಕ ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಾಗಿತ್ತು. ಸತತ 9 ವರ್ಷಗಳ ನಿರಂತರ ಪ್ರಯತ್ನದ ಕನಸಿನ ಯೋಜನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. 15 ತಿಂಗಳಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ” ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post