ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯದಲ್ಲಿ ಕನ್ನಡದ ಬಗ್ಗೆ ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಂದು ಕನ್ನಡ ಮಾಯವಾಗುತ್ತಿದೆ. ಕನ್ನಡದಲ್ಲಿ 100 ಕ್ಕೆ 100 ಸಾಧನೆ ಮಾಡುವ ಶಿಕ್ಷಕರು ಹಾಗೂ ಶಾಲೆಗೆ ವಿಶೇಷ ಯೋಜನೆ ರೂಪಿಸಿ, ಪ್ರೋತ್ಸಾಹಿಸಲಾಗುವುದು. ಕನ್ನಡ ಶಿಕ್ಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಬೇಕು.ಕನ್ನಡ ಉಳಿಸಿ, ಬೆಳೆಸುವ ಕೆಲಸಗಳು ಆಗಬೇಕಿವೆ ಎಂದು ಮಾಜಿ ಸಭಾಪತಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯ ವಿದ್ಯಾನಗರದ ಬಿ.ವಿ.ಬಿ ಕಾಲೇಜ್ ಆವರಣದ ಬಯೋಟೆಕ್ ಸಭಾಂಗಣದಲ್ಲಿ ಇಂದು ಧಾರವಾಡ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಸಿರಿಗನ್ನಡ ನುಡಿ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಭಾಷಾ ಬೋಧಕರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಬೋಧನೆ ಮಾಡುವ ಶಿಕ್ಷಕರು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಮೇಲೆ ಪ್ರಭುತ್ವ ಸಾಧಿಸಬೇಕಾದರೆ ಹೆಚ್ಚು ಹೆಚ್ಚು ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಹೆಚ್ಚು ಸಮರ್ಥವಾಗಿ ಉತ್ತರವನ್ನು ನೀಡಬಹುದಾಗಿದೆ. ಆಕರ ಗ್ರಂಥಗಳ ಅಧ್ಯಯನದಿಂದ ಆಸಕ್ತಿಕರವಾದ ಬೋಧನೆ ಮಾಡಬಹುದು. ಭಾಷೆ ಮೇಲೆ ಹಿಡಿತವಿರಬೇಕು. ಕನ್ನಡ ಭಾಷೆಯಲ್ಲಿ ಮಕ್ಕಳು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಬೇಕು. ಮಕ್ಕಳಲ್ಲಿ ಪ್ರಾವೀಣ್ಯತೆ ಬರಲು ಶಿಕ್ಷಕರು ಮೊದಲು ತಯಾರಾಗಬೇಕು. ಕನ್ನಡ ಬೋಧನೆ ಮಕ್ಕಳಿಗೆ ಯಾವ ರೀತಿಯಾಗಿ ಪರಿಣಾಮಕಾರಿಯಾಯಿತು ಎಂಬುದನ್ನು ಅರಿತುಕೊಳ್ಳಬೇಕಾಗಿದೆ.ಮಕ್ಕಳಲ್ಲಿ ಭಾಷೆ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು ಎಂದರು.

ಕನ್ನಡ ವಿಷಯದ ಪರಿವೀಕ್ಷಕರಾದ ಅರಿಹಂತ ಪಾಟೀಲ ಅವರು, ಮಕ್ಕಳಿಗೆ ಪಾಠ ಬೋಧನೆ ಮಾಡುವಾಗ ನೈತಿಕ ಮೌಲ್ಯಗಳನ್ನು ತುಂಬಬೇಕು. ಒಬ್ಬರಿಂದ ಇನ್ನೊಬ್ಬರಿಂದ ಕಲಿಯಬೇಕು. ನಾವುಗಳು ಆದರ್ಶ ಶಿಕ್ಷಕರಾಗಬೇಕು. ತಂತ್ರಜ್ಞಾನ ಬಳಸಿಕೊಂಡು ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಬಹುದು ಎಂದು ಅನಿಸಿಕೆ ಹಂಚಿಕೊಂಡರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಗಳಾದ ಸುರೇಶ ಹುಗ್ಗಿ, ಡಿವೈಪಿಸಿಗಳಾದ ಜಿ.ಎನ್. ಮಠಪತಿ, ಎಸ್.ಎಮ್.ಹುಡೇದಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಎನ್.ಎಸ್. ಖಾನಗೌಡ್ರ, ಮಂಜಯ್ಯ ಶಿವಳ್ಳಿಮಠ, ಜಿಲ್ಲಾ ಸಿರಿಗನ್ನಡ ನುಡಿ ಬಳಗದ ಅಧ್ಯಕ್ಷ ವೆಂಕಟೇಶ ಲಕ್ಷಾಣಿ, ಕನ್ನಡ ಭಾಷಾ ಬೋಧನಾ ಪರಿವಾರದ ವಿವಿಧ ಘಟಕಗಳ ಅಧ್ಯಕ್ಷರಾದ ವಿ.ಆಯ್. ಪಾಟೀಲ, ಎಸ್.ಎಸ್. ಬೆನಕನಾಳ, ಸಂಗಮೇಶ ಹಡಪದ, ಎಲ್.ಎ.ನದಾಫ್, ಎಂ.ಎಚ್. ಮುನ್ನೋಳಿ, ಅಶೋಕ ಈರಗಾರ, ಪ್ರಕಾಶ ಕಳಸದ, ವರ್ಧಮಾನ ಕುರಕುರಿ, ವೆಂಕಟೇಶ ಭೋವಿ, ಹನುಮಂತ ಪೂಜಾರ ಸೇರಿದಂತೆ ವಿವಿಧ ಜಿಲ್ಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ಕನ್ನಡ ವಿಷಯ ಪರಿವೀಕ್ಷಕರಾದ ಪೂರ್ಣಿಮಾ ಮುಕ್ಕುಂದಿ ಸ್ವಾಗತಿಸಿದರು. ಕನ್ನಡ ಭಾಷಾ ಬೋಧಕ ಪರಿವಾರ ನವಲಗುಂದ ಘಟಕದ ಅಧ್ಯಕ್ಷೆ ಶರೀಫಾ ಬೇಗಂ ವಂದಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು.










Discussion about this post