ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೌದು… ಸಾವರ್ಕರ್ ಫ್ಲೆಕ್ಸ್ ಹರಿದಿದ್ದು, ಸುಮ್ಮನೆ ನಿಂತಿದ್ದ ಪ್ರೇಮ್ ಸಿಂಗ್’ಗೆ ಚಾಕು ಹಾಕಿಸಿದ್ದು ನಾನೇ… ಹೀಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಖಡಕ್ ಆಗಿ ಚಾಟಿ ಬೀಸಿದ್ದಾರೆ ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ.
ಹೌದು… ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗದಲ್ಲಿ ನಡೆದ ಘಟನೆ ಎಲ್ಲರಿಗೂ ತಿಳಿದಿದೆ. ಸ್ವತಃ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳಿಗೂ ಸಹ ಸತ್ಯ ತಿಳಿದಿದೆ. ಆದರೂ, ನಮ್ಮ ವಿರುದ್ಧವೇ ಆರೋಪ ಮಾಡಿದರೆ, ನಾವು ಇನ್ನೇನು ಮಾಡಲು ಸಾಧ್ಯ. ಹೌದು ನಾನೇ ಮಾಡಿಸಿದ್ದು ಎಂದು ಒಪ್ಪಿಕೊಳ್ಳಬೇಕಷ್ಟೇ. ಅವರಿಗೆ ಕನಿಷ್ಠ ಕ್ಷಮೆ ಕೇಳುವ ಸೌಜನ್ಯವೂ ಇಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷ ಮುಖಂಡರಿಗೆ ಖಾರವಾಗಿ ಟಾಂಗ್ ನೀಡಿದ್ದಾರೆ.
ಹಿಂದೆ ಕಾಂಗ್ರೆಸ್ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಒಡೆದರು. ಈಗ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರುಗಳು ಅದನ್ನೇ ಮುಂದುವರೆಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಇನ್ನು, ರಾಜಕಾರಣದಲ್ಲಿ ನೇರ ಹಾಗೂ ಟ್ವೀಟ್ ವಾರ್ ನಡೆಯುವುದು ಸಾಮಾನ್ಯ. ನಾವು ಮಾಡಿದ ಎಲ್ಲ ಒಳ್ಳೆಯ ಕೆಲಸವನ್ನು ಅವರು ಹೊಗಳುತ್ತಾರೆಯೇ? ಟೀಕಿಸುವುದೇ ಅವರ ಕೆಲಸ. ಇದೇ ರಾಜಕಾರಣ ಎಂದು ಕಾಂಗ್ರೆಸ್ಸಿಗರ ವಿರುದ್ಧ ನಗುತ್ತಲೇ ಕಟಕಿಯಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















