ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಆರಂಭವಾಗಿದ್ದು, ಈ ಬಾರಿಯ ವಿಸರ್ಜನಾ ಪೂರ್ವ ಮೆರವಣಿಗೆ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಶಾಸಕ ಈಶ್ವರಪ್ಪ MLA Eshwarappa ಪತ್ನಿ ಜಯಲಕ್ಷ್ಮೀ ಸಮೇತ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.
ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಮಹಾಸಭಾದ ಕಾರ್ಯಕರ್ತರು ಕೇಸರಿ ಧ್ವಜ ಮತ್ತು ಬಟಿಂಗ್ಸ್‌ಗಳನ್ನು ಕಟ್ಟಿ ನಗರವನ್ನು ವಿಶೇಷವಾಗಿ ಸಿಂಗರಿಸಿದ್ದು, ಮೆರವಣಿಗೆ ಸಾಗುವ ಎಸ್.ಪಿ.ಎಂ. ರಸ್ತೆ, ಗಾಂಧಿಬಜಾರ್ ಮುಖ್ಯರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿ ಹಾಕಲಾಗಿದೆ.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಬಾರಿಸುವ ಡೊಳ್ಳು ನಾದಕ್ಕೆ ತಕ್ಕಂತೆ ಯುವಕರು ಗುಂಪು ಗುಂಪಾಗಿ ಕುಣಿದು ಸಂಭ್ರಮಿಸುತ್ತಿದ್ದು, ಮಹಿಳಾ ಕಲಾತಂಡದವರೂ ಪಾಲ್ಗೊಂಡು ಹಜ್ಜೆ ಹಾಕುತ್ತಿದ್ದಾರೆ. ವೀರಗಾಸೆ, ಮಹಿಳಾ ಡೊಳ್ಳು ತಂಡ, ನಾದಸ್ವರ, ಗೊಂಬೆ ವೇಷಧಾರಿಗಳು ಸೇರಿದಂತೆ ವಿವಿಧ ಕಲಾ ತಂಡಗಳ ಉಪಸ್ಥಿತಿ ರಾಜಬೀದಿ ಉತ್ಸವದ ಸಂಭ್ರಮನ್ನು ಇಮ್ಮಡಿಗೊಳಿಸಿದೆ.
ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ಭಕ್ತರ ದಣಿವಾರಿಸಿಕೊಳ್ಳಲು ಪಾನಕ ಕೋಸಂಬರಿ ವಿತರಣೆ ಮಾಡಲಾಗುತ್ತಿದ್ದು, ಹಸಿದು ಬಂದವರಿಗೆ ಪುಳಿಯೊಗರೆ, ಚಿತ್ರಾನ್ನ ವಿನಿಯೋಗಿಸಲಾಗುತ್ತಿದೆ.
ನಗರದೆಲ್ಲೆಡೆ ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೆರವಣಿಗೆ ಹಿನ್ನಲೆ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ನಗರದೆಲ್ಲೆಡೆ ಬ್ಯಾನರ್ ಬಂಟಿಂಗ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ. ಕೊರೊನಾ ಹಿನ್ನಲೆ ಎರಡು ವರ್ಷ ಮಂಕಾಗಿದ್ದ ಗಣೇಶನ ಉತ್ಸವಕ್ಕೆ ಈ ಬಾರಿ ಹೆಚ್ಚು ಮೆರಗು ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post