ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕರಣದ ಭ್ರಮೆಯಿಂದ ಹೊರಬಂದು, ಪ್ರಜ್ಞಾಪೂರ್ವಕದ ಅರಿವು ನಮ್ಮ ಬದುಕಿನ ಗುರುವಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ನಿರ್ದೇಶಕರಾದ ಡಾ.ಜಿ.ಪ್ರಶಾಂತ ನಾಯಕ ಅಭಿಪ್ರಾಯಪಟ್ಟರು.
ಇಂದು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವತಿಯಿಂದ 2021-22 ನೇ ಸಾಲಿನ ಸಾಂಸ್ಕೃತಿಕ ಸಂಘ ಹಾಗೂ ಕ್ರೀಡಾವಿಭಾಗಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಆಧುನಿಕರಣದ ಭ್ರಮೆಯಲ್ಲಿ ನಮಗೆ ತಿಳಿಯದ ಹಾಗೇ ಅವಲಂಬನೆ ಹೆಚ್ಚಾಗುತ್ತಿದೆ. ಹೀಗೆಯೇ ಅತಿಯಾದ ಅವಲಂಬನೆ ನಮ್ಮಲ್ಲಿನ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಕ್ಷೀಣಿಸುತ್ತಿದೆ. ಹಾಗಾಗಿಯೇ ನಮ್ಮ ಹಿರಿಯರು ಸಾಹಿತ್ಯದ ಮೂಲಕ ಅರಿವೇ ಗುರುವೆಂದು ಸಾರೀದರು. ಸಾಹಿತ್ಯ ಒಳ್ಳೆಯ ತನದ ಬದುಕನ್ನು ನಡೆಸುವ ಪ್ರಜ್ಞೆ ಕಲಿಸಿಕೊಡಲಿದೆ. ತನ್ನ ಶತ್ರುಗಳನ್ನು ನಿರಾಳವಾಗಿ ಕ್ಷಮಿಸಿಬಿಡುವ ಮನೋಸ್ಥೈರ್ಯ ತುಂಬುತ್ತದೆ. ಹಾಗೆಂದ ಮಾತ್ರಕ್ಕೆ ಓದು ಉದ್ಯೋಗಪಡೆಯುವ ಸಾಧನವಾಗಿ ಉಳಿದುಬಿಡಬಾರದು. ಬದುಕಿನ ಪ್ರಜ್ಞೆಯೇ ಇಲ್ಲದ ಓದು ಅನುಪಯುಕ್ತ. ಭಾರತ ದೇಶದಲ್ಲಿ ಹೆಣ್ಣನ್ನು ತಾಯಿಯಾಗಿ, ಪೂಜ್ಯನೀಯವಾಗಿ ನೋಡುವ ಸಂದರ್ಭದಲ್ಲಿ ಇಂದಿಗೂ ಮೀಸಲಾತಿಯ ಚರ್ಚೆ ನಡೆಯುತ್ತಿರುವುದು ದುರಂತ. ಹೆಣ್ಣಿಲ್ಲದ ಜಗತ್ತನ್ನು ಊಹಿಸಲು ಅಸಾಧ್ಯ. ವ್ಯಕ್ತಿಯ ಪರಿಪೂರ್ಣತೆಯಾಗುವುದು ಹೆಣ್ಣಿಂದ. ಇಂದು ಪುರಷರಿಗಿಂತ ಮಹಿಳೆಯರು ಹೆಚ್ಚು ಅಕ್ಷರಸ್ಥರಾಗಿ ಹೊರಹೊಮ್ಮುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
Also read: ನಿವೃತ್ತ ಕಾರ್ಮಿಕರಿಗೆ ವಸತಿ ಗೃಹ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ: ಸಂಸದ ರಾಘವೇಂದ್ರ ಭರವಸೆ
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ ತುಂಬಿದ ಕುಟುಂಬದ ಪರಿಕಲ್ಪನೆ ಕಡಿಮೆಯಾಗುತ್ತಿದೆ. ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯಗಳು ಕ್ಷೀಣಿಸುತ್ತಿದೆ. ಶಿಕ್ಷಣ ಹಣದ ಆಧಾರಿತವಾಗಿ ನಡೆಯುತ್ತಿದೆ.ನಮ್ಮ ನೋವು ನಮಗೆ ಗೊತ್ತಾದರೆ ಬದುಕಿದ್ದೇವೆ ಎಂದರ್ಥ, ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಹಾಗಾಗಿಯೇ ಬುದ್ದಿವಂತರಿಗಿಂತ ಮನೋವಂತರನ್ನು ಶಿಕ್ಷಣದ ಮೂಲಕ ತಯಾರಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಆರಡಿ ಮಲ್ಲಯ್ಯ, ಡಾ.ರಮೇಶ್.ಎನ್.ಡಿ, ದೈಹಿಕ ಶಿಕ್ಷಣ ನಿರ್ದೇಶಕರಾದ ವಿದ್ಯಾಶ್ರೀ ಬಿ.ಕೆ, ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷರಾದ ಪಲ್ಲವಿ ಶೇಟ್, ಕಾರ್ಯದರ್ಶಿಗಳಾದ ಸಂಗೀತ.ಎ, ಕ್ರೀಡಾ ನಾಯಕಿಯರಾದ ರಚನಾ.ಆರ್, ಚೈತನ್ಯ. ಜಿ.ಎಚ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















