ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಸರಾ ಅಂಗವಾಗಿ ಗಾಂಧಿ ಪಾರ್ಕ್‌ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ದೂರದ ಬೆಂಗಳೂರಿನಿಂದ ಬಂದಿದ್ದ ಶ್ವಾನ ’ಭೀಮ’ ಜನರನ್ನು ಆಕರ್ಷಿಸಿತು.
ಈ ಶುನಕನ ಬೆಲೆಯ ಬಗ್ಗೆ ಸಂಘಟಕರು ಮಾಡಿದ್ದ ಪ್ರಚಾರದಿಂದಾಗಿ ಹಿಂದಿನ ದಿನವೇ ನಗರದ ಶ್ವಾನ ಪ್ರಿಯರ ಕುತೂಹಲ ಇಮ್ಮಡಿಗೊಂಡಿತ್ತು. ಹೀಗಾಗಿ ವಾರಾಂತ್ಯದ ರಜೆಯ ದಿನ ’ಭೀಮ’ನ ಬರುವಿಕೆಗೆ ಮುನ್ನವೇ ಜನರು ಗಾಂಧಿ ಪಾರ್ಕ್‌ನಲ್ಲಿ ಜಮಾಯಿಸಿದ್ದರು. ಈ ಶ್ವಾನದ ಫೋಟೊ ತೆಗೆದುಕೊಂಡರು.
ಅದರ ನಿರ್ವಹಣೆ ವೆಚ್ಚ, ಬದುಕಿನ ರೀತಿ ಸಂಘಟಕರಿಂದ ಕೇಳಿ ತಿಳಿದುಕೊಂಡರು. ಅದು ಗಾಂಭೀರ್ಯದಿಂದ ಕೆಲ ಹೊತ್ತು ಸಮಾರಂಭದ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದನ್ನು ನೋಡಲು ನೂಕು-ನುಗ್ಗಲು ಉಂಟಾಯಿತು. ಈ ಗಡಿಬಿಡಿಯಲ್ಲಿ ’ಭೀಮ’ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ಈಡೇರದೆ ಹಲವರು ’ಇದು ನಾವು ಸಾಕಲು ತಕ್ಕುದ್ದಲ್ಲ. ಈ ಶ್ವಾನದ ಸಹವಾಸ ನಮಗಲ್ಲ’ ಎಂದು ಗೊಣಗುತ್ತಾ ಮರಳಿದರು.
Also read: ಲಕ್ಷ್ಮೀ ಪ್ರಸಾದ್ ವರ್ಗಾವಣೆ: ಶಿವಮೊಗ್ಗ ನೂತನ ಎಸ್‌ಪಿಯಾಗಿ ಮಿಥುನ್ ಕುಮಾರ್
ಬೆಂಗಳೂರಿನಿಂದ ಹಿಂದಿನ ದಿನವೇ ರೇಂಜ್ ರೋವರ್ ಕಾರಿನಲ್ಲಿ ತಂದಿದ್ದ ಈ ಶ್ವಾನವನ್ನು ಇಲ್ಲಿನ ಬಿ.ಎಚ್. ರಸ್ತೆಯ ತ್ರಿಸ್ಟಾರ್ ಹೋಟೆಲ್‌ನಲ್ಲಿ ಇಡಲಾಗಿತ್ತು. ’ಅದಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಬೇಕಿದ್ದರಿಂದ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು’ ಎಂದು ಶ್ವಾನ ಮೇಳದ ಸಂಘಟಕ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ ಹೇಳಿದರು.
’ಟಿಬೆಟಿಯನ್ ಮಸ್ತಿಫ್ ಪ್ರಪಂಚದಲ್ಲಿ ಯೇ ಅತ್ಯಂತ ದುಬಾರಿ ತಳಿಯ ಶ್ವಾನ. ಇದರ ಮಾದರಿಯಲ್ಲಿಯೇ ಹಲವು ತಳಿಗಳಿದ್ದು ಬೆಲೆಯಲ್ಲಿ ವ್ಯತ್ಯಾಸವೂ ಆಗಬಹುದು. ಆದರೆ ಇದರ ಬೆಲೆ ಮಾತ್ರ 10 ಕೋಟಿ’ ಎಂದು ನಾಯಿಯ ಮಾಲೀಕ ಬೆಂಗಳೂರಿನ ಸತೀಶ ಕಾಡಬೋಮ್ಸ್ ಹೇಳುತ್ತಾರೆ.
ಶ್ವಾನ ಮೇಳದಲ್ಲಿ ಭಾನುವಾರ ಸಂಜೆವರೆಗೂ ಬೌ ಬೌ ಸದ್ದು ಅನುರಣಿಸಿತು. ಮೇಳಕ್ಕೆ ಸಾಕು ನಾಯಿಗಳನ್ನು ಕರೆತಂದಿದ್ದ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಅವುಗಳನ್ನು ಮುದ್ದಿಸುತ್ತಾ ಸ್ಪರ್ಧೆಗೆ ಅಣಿಗೊಳಿಸಿದ್ದು ಕಂಡುಬಂದಿತು. ಒಟ್ಟು 23 ತಳಿಯ ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಬಹುಮಾನ ವಿಜೇತರು:
ಪ್ರಥಮ ಬಹುಮಾನ: ಉಡುಪಿಯ ಕೆ.ಎಸ್. ಸಂದೀಪ್ (ಬಾಕ್ಸರ್ ತಳಿ) 15 ಸಾವಿರ, ದ್ವಿತೀಯ: ಹರಿಹರದ ಗಂಗಾಧರ (ರಾಟ್ ವೀಲರ್) 10 ಸಾವಿರ, ತೃತೀಯ: ಭದ್ರಾವತಿಯ ಗುರುರಾಜ್ (ಜರ್ಮನ್ ಶೆಪರ್ಡ್) 7 ಸಾವಿರ ಬಹುಮಾನ ಪಡೆದರು. ನಾಲ್ಕನೇ ಬಹುಮಾನ: ಹಾಸನದ ಚಂದನ್ (ಡಾಬರ್‌ಮನ್), ಐದನೇ ಬಹುಮಾನ: ಶಿವಮೊಗ್ಗದ ಕೆನಿತ್ ಹರ್ಷ (ಬೀಗಲ್), ಆರನೇ ಸ್ಥಾನ: ಕಡೂರಿನ ರಮೇಶ (ಗೋಲ್ಡನ್ ರಿಟ್ರೀವರ್) ಏಳನೇ ಸ್ಥಾನ: ಶಿವಮೊಗ್ಗದ ಪವನ್ (ಸಿಟ್ಜ್ಯು), ಎಂಟನೇ: ಭದ್ರಾವತಿಯ ಮದನ್ (ಗ್ರೇಟ್‌ಡೇನ್).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post