ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಸಮಾಜಕ್ಕೆ ಸ್ಫರ್ದಾತ್ಮಕ ಶಿಕ್ಷಣಕ್ಕಿಂತ ಶ್ರದ್ಧೆಯ ಶಿಕ್ಷಣ ಅತಿಮುಖ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಹೇಳಿದರು.
ಸೋಮವಾರ ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಪ್ರಥಮ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಪುಸ್ತಕದ ಜ್ಞಾನಕ್ಕಿಂತ ಮಸ್ತಕದ ಜ್ಞಾನದ ಅವಶ್ಯಕತೆಯಿದೆ. ಯಾರದೊ ಕುತಂತ್ರಗಳಿಂದಾಗಿ ಸಮಾಜ ಕಲುಷಿತಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಹೊಂದಿಕೊಂಡು ಬದುಕುವ ಸಂಸ್ಕಾರವನ್ನು ಮಕ್ಕಳಲ್ಲಿ ನಾವು ಬೆಳೆಸಬೇಕಿದೆ. ಹಾಗಾಗಿಯೇ ಶಿಕ್ಷಕರು ತಮ್ಮ ವಿದ್ಯಾರ್ಥಿ ಸಮೂಹಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಅನಿವಾರ್ಯತೆ ಹೆಚ್ಚಾಗುತ್ತಿದೆ.
ಜಗತ್ತಿನ ಶ್ರೇಷ್ಟ ವ್ಯಕ್ತಿತ್ವಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಹೊಸತನದ ಕಲಿಕೆಯ ತುಡಿತ ಬೇಕಾಗಿದೆ. ಆಧುನಿಕರಣದ ಭರಾಟೆಯಲ್ಲಿ ಬದುಕು ಯಾಂತ್ರಿಕವಾಗುತ್ತಿದ್ದು, ವಿಕೃತಭಾವ ಮೂಡಿಸುತ್ತಿರುವುದು ದುರಂತ. ಇಂತಹ ಹೊತ್ತಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಹಾಗೂ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯ ಆಗಬೇಕಿದೆ. ಬದುಕಿನಲ್ಲಿ ನಾವು ಕಲಿತ ಶಿಕ್ಷಣ ನಮ್ಮನ್ನು ಎಡವಲು ಬಿಡುವುದಿಲ್ಲ, ನಾವು ಕಲಿತ ಸಂಸ್ಕಾರ ಬದುಕಿನಲ್ಲಿ ಕೆಡವಲು ಬಿಡುವುದಿಲ್ಲ ಎಂದು ಹೇಳಿದರು.
Also read: ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಮಹತ್ವದ ತೀರ್ಮಾನ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಮಂಜು.ಎನ್.ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಿಕ್ಷಣಾರ್ಥಿ ರವಿಕುಮಾರ್. ಎನ್.ಟಿ ಸ್ವಾಗತಿಸಿ, ಕೃಷ್ಣ ನಾಯಕ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post