ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮರಣ ಎಂದರೆ ದೇಹನಾಶ ಮಾತ್ರ. ನಮಗೆ(ಆತ್ಮ) ನಾಶ ಇಲ್ಲ. ಹಾಗಾದರೆ ನಮಗೆ ದುಃಖ ಏಕೆ ಆಗುತ್ತದೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ.
ಉದಾಹರಣೆಗೆ ನಮ್ಮ ಹತ್ತಿರದ ಸಂಬಂಧಿಕರೊಬ್ಬರು ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ರೈಲು ಚಲಿಸುವ ಸಂದರ್ಭದಲ್ಲಿ ಅಕಸ್ಮಾತ್ ಅಪಘಾತಕ್ಕೀಡಾಗಿ ನಮ್ಮಸಂಬಂಧಿಕರು ತೀರಿಹೋದರು ಎಂದಿಟ್ಟುಕೊಳ್ಳೋಣ. ಆಗ ನಮಗೆ ವಿಪರೀತವಾಗಿ ದುಃಖವಾಗುತ್ತದೆ. ಅದೇ ನಾವು ಪ್ರತಿನಿತ್ಯ ದಿನಪತ್ರಿಕೆಯನ್ನು ಓದುತ್ತೇವೆ. ಅದರಲ್ಲಿ ಎಷ್ಟೋ ಮಂದಿ ಸತ್ತ ವಿಷಯವನ್ನು ಓದುತ್ತೇವೆ. ಆದರೂ ನಮಗೆ ಹೆಚ್ಚು ದುಃಖವಾಗುವುದಿಲ್ಲ. ಹಾಗಾದರೆ ಸತ್ತದ್ದರಿಂದಲೋ ಅಥವಾ ವ್ಯಕ್ತಿಯಿಂದಲೋ ನಮಗೆ ದುಃಖವಾಗುವುದಿಲ್ಲ. ಮತ್ತೇನು?? ಎಂದರೆ, ನಾವು ಅವರಲ್ಲಿ ಇಟ್ಟಿರುವ ಅಭಿಮಾನದಿಂದ ನಮಗೆ ದುಃಖವಾಗುತ್ತದೆ. ನಾವು ಹೆಚ್ಚು ಅಭಿಮಾನ ಮಾಡಿದವರು ಸತ್ತರೆ, ವಿಪರೀತವಾಗಿ ನೋವಾಗುತ್ತದೆ. ಅದೇ ನಾವು ಅಭಿಮಾನ ಮಾಡದವರು ಸತ್ತರೆ, ನಮಗೆ ದುಃಖವಾಗುವುದಿಲ್ಲ. ಹಾಗಾದರೆ ದುಃಖಕ್ಕೆ ಕಾರಣ ಅಭಿಮಾನವೇ ವಿನಃ ರೈಲಾಗಲೀ, ಮರಣವಾಗಲೀ, ವ್ಯಕ್ತಿಯಾಗಲೀ ಅಲ್ಲ.
ಇದೇ ರೀತಿ, ಇಷ್ಟು ವರ್ಷ ಸುಖವಾಗಲೀ, ದುಃಖವಾಗಲೀ ನಾವು ಅನುಭವಿಸಿದ್ದು ಈ ದೇಹದ ಮೂಲಕ. ಹೀಗಾಗಿ ಎಲ್ಲಕ್ಕಿಂತ ಹೆಚ್ಚು ಅಭಿಮಾನವನ್ನು ಈ ದೇಹದ ಮೇಲೆ ನಾವು ಇಟ್ಟುಕೊಂಡಿರುತ್ತೇವೆ. ಹೀಗಾಗಿಯೇ ದೇಹನಾಶವಾಗುತ್ತದೆ ಎಂದರೆ ಸಾಕು ನಾವು ಹೆಚ್ಚು ದುಃಖಕ್ಕೆ ಒಳಗಾಗುತ್ತೇವೆ. ಹಾಗಾದರೆ, ನಾವು ದುಃಖ ಪಡಬಾರದೆಂದರೆ, ಏನು ಮಾಡಬೇಕು? ಎಂದು ಕೇಳಿದರೆ, ಉತ್ತರ ತುಂಬಾ ಸರಳ. ಈ ದೇಹದ ಮೇಲಿನ ಅಭಿಮಾನವನ್ನು ಬಿಡುವುದೊಂದೇ ಇದಕ್ಕೆ ಉಪಾಯ. ಒಂದು ಬಾರಿ ಅಭಿಮಾನವನ್ನು ಬಿಟ್ಟರೆ, ಅನಂತರ ನಾವು ಮರಣಕ್ಕೂ ಕೂಡ ಹೆದರುವುದಿಲ್ಲ.
(ನಾಳಿನ ಲೇಖನ: ಆತ್ಮನಾಶವೋ, ದೇಹನಾಶವೋ?)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















