ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಹುಟ್ಟು ಮತ್ತು ಸಾವು ಇವೆರಡೂ ಕೂಡ ಎಲ್ಲ ಜೀವರ ಜೀವನದಲ್ಲಿ ಬಂದೇ ಬರುವಂತಹುದು. ನಾವು ಕೂಡ ಒಂದು ದಿನ ಮರಣವನ್ನು ಹೊಂದುತ್ತೇವೆ ಎಂಬುದು ನಮಗೆಲ್ಲರಿಗೂ ಅರಿತಿದೆ. ಆದರೂ ನಾವೆಲ್ಲರೂ ಮರಣಕ್ಕೆ ಹೆದರುತ್ತೇವೆ. ಕಾರಣ ಏನು? ವಸ್ತುತಸ್ತು ಮರಣ ಎಂದರೇನು? ಈ ವಿಚಾರವನ್ನು ವಿಮರ್ಶಿಸಲು ಹೋದರೆ, ಕೆಲವರು ಮರಣ ಎಂದರೆ ದೇಹನಾಶ ಮಾತ್ರ ಎನ್ನುತ್ತಾರೆ. ಇನ್ನು ಕೆಲವರು ದೇಹದೊಟ್ಟಿಗೆ ಆತ್ಮವೂ ಕೂಡ ನಾಶವಾಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಈ ಆತ್ಮನಾಶ, ದೇಹನಾಶಗಳ ಬಗ್ಗೆ ಮೊದಲು ತಿಳಿಯಬೇಕು.
ಮೊದಲನೆಯದಾಗಿ ಆತ್ಮಕ್ಕೆ ನಾಶ ಎಂಬುದಿಲ್ಲ. ಕಾರಣ; ದೇಶ, ಕಾಲ, ಆಕಾಶ, ಆತ್ಮ, ಸ್ವಭಾವ ಇವೆಲ್ಲವೂ ಕೂಡ ಅನಾದಿನಿತ್ಯ. ಅಂದರೆ ಹುಟ್ಟು ಇಲ್ಲ, ಸಾವೂ ಇಲ್ಲ. ಒಂದು ವೇಳೆ ಆತ್ಮನಾಶವನ್ನು ಒಪ್ಪಿದರೆ, ಆಗ ಪೂರ್ವ ಜನ್ಮದ ಸ್ಮರಣೆ, ಸಂಸ್ಕಾರಗಳು ಈ ಜನ್ಮದಲ್ಲಿ ಬರದೇ ಹೋಗಬೇಕಾದೀತು. ಇನ್ನು, ಈಗ ತಾನೇ ಹುಟ್ಟಿದ ಮಗುವು ಸ್ತನ್ಯಪಾನ ಮಾಡಲು ಆರಂಭಿಸುತ್ತದೆ. ಆ ಮಗುವಿಗೆ ಯಾರು ಕೂಡ “ಸ್ತನ್ಯಪಾನದಿಂದ ನಿನಗೆ ಸುಖವಾಗುತ್ತದೆ.
ಆರೋಗ್ಯಕರ. ಹೀಗಾಗಿ ಸ್ತನ್ಯಪಾನ ಮಾಡು” ಎಂಬುದಾಗಿ ಯಾರೂ ಹೇಳಿಕೊಡುವುದಿಲ್ಲ. ಹಾಗಿದ್ದರೂ ಕೂಡ ಮಗು ಸ್ತನ್ಯಪಾನ ಮಾಡುತ್ತದೆ. ಹಾಗಿದ್ದರೆ ಮಗುವು ಸ್ತನ್ಯಪಾನವನ್ನು ಹೇಗೆ ಮಾಡುತ್ತದೆ?? ಎಂದರೆ, ಪೂರ್ವಜನ್ಮದ ಸಂಸ್ಕಾರದ ಬಲದಿಂದ ಸ್ತನ್ಯಪಾನ ಮಾಡುತ್ತದೆ. ಹೀಗಾಗಿ ಒಂದು ವೇಳೆ ಆತ್ಮನಾಶವನ್ನು ಒಪ್ಪಿದರೆ, ಅನುಭವದಿಂದಲೇ ವಿರೋಧ ಬರುತ್ತದೆ.
ಮೇಲೆ ತಿಳಿಸಿದ್ದನ್ನು ಓದಿದಾಗ, ಆತ್ಮಕ್ಕೆ ನಾಶ ಇಲ್ಲ ಎಂಬುದು ನಮಗೆ ಸಿದ್ಧವಾಯಿತು. ಹಾಗಾದರೆ ಮರಣ ಎಂದರೆ ದೇಹನಾಶ ಮಾತ್ರ ಎಂದಾಯಿತು. ಇದರ ಮೇಲೆ ನಮ್ಮಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ನಾವು ಎಂದರೆ ಆತ್ಮ, ಆತ್ಮಕ್ಕೆ ನಾಶವಿಲ್ಲ ಎಂದರೆ, ನಮಗೆ ನಾಶವಿಲ್ಲ. ಹಾಗಾದರೆ ಮರಣವನ್ನು ಕುರಿತು ನಮಗೇಕೆ ಅಷ್ಟೊಂದು ಭಯ?
(ನಾಳಿನ ಲೇಖನ: ನಾವು ತಿನ್ನುವುದು ಏನನ್ನು?)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















