ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜೆಜಿಐ ಎಕ್ಸ್ಪೋ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಿದ್ದು, ಇಡಿಯ ಕಾರ್ಯಕ್ರಮ ಪೋಷಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಬಿಎಚ್ ರಸ್ತೆಯ ನಿದಿಗೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜೆಜಿಐ ಎಕ್ಸ್ಪೋ ಆಯೋಜಿಸಲಾಗಿತ್ತು. ಮೊದಲಿಗೆ ವೇದಿಕೆ ಕಾರ್ಯಕ್ರಮ ನಡೆಯಿತು. ಆನಂತರ ಎಲ್ಲ ತರಗತಿಯ ವಿದ್ಯಾರ್ಥಿಗಳು ರೂಪಿಸಿದ್ದ ವಿವಿಧ ರೀತಿಯ ಎಕ್ಸಿಬಿಷನ್ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಸಹ್ಯಾದ್ರಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಚಂದ್ರಶೇಖರ್, ಭದ್ರಾವತಿ ಹಿರಿಯೂರಿನ ಉಪನ್ಯಾಸಕ ಎಂವಿಎಸ್ ಸ್ವಾಮಿ ಅವರುಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಂದ ಆಯಾ ವಿಭಾಗವಾರು ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ತರಗತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಮಾಡೆಲ್’ಗಳನ್ನು ತಯಾರು ಮಾಡಿದ್ದರು.
ಎಲ್’ಕೆಜಿ, ಯುಕೆಜಿಯ ಪುಟ್ಟ ಮಕ್ಕಳು ವಿವಿಧ ರೀತಿಯ ವೇಷಭೂಷಣ ಧರಿಸಿ ಗಮನ ಸೆಳೆದರು. ವಿವಿಧ ರೀತಿಯ ಪ್ರಾಣಿ-ಪಕ್ಷಗಳು, ತರಕಾರಿ, ಹಣ್ಣು, ಪರಿಸರ ಮಾತ್ರವಲ್ಲದೇ ಮಹಾನ್ ವ್ಯಕ್ತಿಗಳ ವೇಷದಲ್ಲಿ ಮಕ್ಕಳು ಕಂಗೊಳಿಸುತ್ತಿದ್ದರು. ವಿಷಯಾಧಾರಿತ ವಿಭಾಗವಾರು ವಿವಿಧ ರೀತಿಯ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳು ಅತ್ಯಂತ ಶಿಸ್ತುಬದ್ದವಾಗಿ ರೂಪಿಸಿದ್ದ ರೀತಿಯ ಆಕರ್ಷಣೀಯವಾಗಿತ್ತು.
ಕನ್ನಡ ನಾಡು ನುಡಿ-ಮಹನೀಯರು-ಶ್ರೇಷ್ಠ ಕವಿಗಳ ಪರಿಚಯ, ಶಿವಮೊಗ್ಗ ಜಿಲ್ಲೆ ಇತಿಹಾಸ, ಪ್ರಾಕೃತಿಕ ಸೊಬಗು ಪರಿಚಯಿಸುವ, ಹಂಪಿ, ಬೇಲೂರು, ಹಳೆಬೇಡು, ಶೃಂಗೇರಿ, ನಗರ ಕೋಟೆ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ಸ್ಥಳಗಳ ಪರಿಚಯ, ಸಂಗೀತದ ವಾದ್ಯಗಳ ಪರಿಚಯ, ಸ್ವಾತಂತ್ರ ಹೋರಾಟಗಾರರ ಪರಿಚಯ, ಅರಣ್ಯ ಹಾಗೂ ಪ್ರಾಣಿ ಸಂಕುಲಗಳ ಉಳಿವು, ನೀರಿನ ಮಿತ ಬಳಕೆ ಜೊತೆಯಲ್ಲಿ ಜಲ ಮೂಲಗಳ ಸಂರಕ್ಷಣೆ, ವಿವಿಧ ರೀತಿಯ ಅರಣ್ಯಗಳ ಪರಿಚಯ ಕುರಿತಾಗಿ ಮಾಡೆಲ್’ಗಳು ಗಮನ ಸೆಳೆದವು.
ವಿಜ್ಞಾನ ವಿಭಾಗದಲ್ಲಿ ಗಾಳಿಯಿಂದ ವಿದ್ಯುತ್ ಉತ್ಪಾದನೆ, ಮಾನವನ ದೇಹದ ವಿವಿಧ ಅಂಗಾಂಗಗಳ ಪರಿಚಯ, ಆರೋಗ್ಯಕರ ಆಹಾರಗಳು, ಸೇರಿದಂತೆ ವಿವಿಧ ರೀತಿಯ ವಸ್ತು ಪ್ರದರ್ಶಣ ಆಕರ್ಷಣೀಯವಾಗಿತ್ತು.
ಪ್ರಮುಖವಾಗಿ ವಿಜ್ಞಾನ ವಿಭಾಗದಲ್ಲಿ ಸೌರ ಮಂಡಲ ಹಾಗೂ ಗ್ರಹಗಳ ಪರಿಚಯ ಕುರಿತಾಗಿ ಒಂದು ಕೊಠಡಿಯಲ್ಲಿ ರೂಪಿಸಿದ್ದ ಪ್ರದರ್ಶನ ಅತ್ಯಂತ ಆಕರ್ಷಣೀಯವಾಗಿತ್ತು. ಬಾಹ್ಯಾಕಾಶವನ್ನೇ ಹೋಲುವ ರೀತಿಯ ವಿನ್ಯಾಸ, ಅನುಕ್ರಮಣಿಕೆಯಲ್ಲಿ ಗ್ರಹಗಳು, ಅದಕ್ಕೆ ವಿದ್ಯುತ್ ದೀಪಗಳನ್ನು ಅತ್ಯಂತ ಸುಂದರವಾಗಿ ರೂಪಿಸಲಾಗಿತ್ತು. ಪ್ರಮುಖವಾಗಿ ಇಡಿಯ ಕೊಠಡಿಯಲ್ಲಿ ಕತ್ತಲೆಗೊಳಿಸಿ ಸೌರಮಂಡಲ ಪ್ರದರ್ಶನದ ದೀಪಗಳನ್ನು ಮಾತ್ರ ಬೆಳಗಿಸಿ, ಹಿನ್ನೆಲೆಯಲ್ಲಿ ಪೂರಕ ಶಬ್ದಗೊಂದಿಗೆ ಒಂದೊಂದು ಗ್ರಹಗಳ ಕುರಿತಾಗಿ ವಿದ್ಯಾರ್ಥಿಗಳು ವಿವರಿಸುತ್ತಿದ್ದ ಪರಿ ನಿಜಕ್ಕೂ ನೆರೆದವರನ್ನು ಮಂತ್ರಮುಗ್ದಗೊಳಿಸಿತು.
ಒಟ್ಟಿನಲ್ಲಿ ಚಟುವಟಿಕೆ ಮೂಲಕ ಪಠ್ಯಜ್ಞಾನವನ್ನು ಪರಿಣಾಮಕಾರಿಯಾಗಿ ಕಲಿಸುವುದಕ್ಕೆ ಒತ್ತು ನೀಡಿರುವ ಈ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನ ಮಾದರಿಯಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಂಯೋಜಕಿ ದಿವ್ಯಾ ಶೆಟ್ಟಿ, ಶಾಲೆಯ ಸಿಇಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ಅಧಿಕಾರಿ ವಿಜಯ್ ಕುಮಾರ್, ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post