ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸದಾ ತಾಂತ್ರಿಕತೆಯ ಚರ್ಚೆ ನಡೆಯುತ್ತಿದ್ದ ಚಿಂತಕರ ಚಾವಡಿಯು ಇಂದು ಸಂಪೂರ್ಣ ಕನ್ನಡ ಮಯವಾಗಿತ್ತು. ನೆರೆದಿದ್ದವರ ಕಂಠಗಳಲ್ಲಿ ಕನ್ನಡದ ಗೀತೆ ಮೊಳಗುತ್ತಿತ್ತು. ಇಂತಹ ದೃಶ್ಯ ಕಂಡುಬಂದದ್ದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ. JNNCE
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊಳಗಿದ ಕನ್ನಡದ ಗೀತೆಗಳು, ನೆರೆದಿದ್ದವರ ಮನಗಳಲ್ಲಿ ಕನ್ನಡದ ದೀವಿಗೆ ಪ್ರಜ್ವಲಿಸುವಂತೆ ಮಾಡಿತ್ತು.
ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಕೋಟಿ ಕಂಠ ಗಾಯನದ ಮೂಲಕ ಕನ್ನಡದ ಅಸ್ಮಿತೆ ಮತ್ತಷ್ಟು ಪ್ರಜ್ವಲಿಸಲಿದೆ. ಕನ್ನಡ ಮಾತನಾಡುವಲ್ಲಿ ಹಿಂಜರಿಕೆ ಬೇಡ.
ಕನ್ನಡದಲ್ಲಿ ಬರೆಯುವ ಓದುವ ಅಭ್ಯಾಸ ಮಾಡಿಕೊಳ್ಳಿ. ಈ ಮೂಲಕ ಕನ್ನಡದ ಶಬ್ದ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಿ. ಇಂದಿನ ಮಕ್ಕಳಲ್ಲಿ ಕನ್ನಡದ ಓದು ಬರವಣಿಗೆಯ ಕೊರತೆ ಎದ್ದು ಕಾಣುತ್ತಿದೆ. ಮಮ್ಮಿ ಡ್ಯಾಡಿ ಸಂಸ್ಕೃತಿ ಇಂದಿನ ಮಕ್ಕಳಿಂದ ದೂರಾಗಲಿ. ನಮ್ಮಲ್ಲಿರುವ ಪದ ಶ್ರೀಮಂತಿಕೆಯನ್ನು ಬಿಟ್ಟು ವಿದೇಶಿ ಭಾಷೆಗಳಿಗೆ ಮೊರೆ ಹೋಗುತ್ತಿರುವುದು ದುರಂತ.
ಗೋಕಾಕ್ ಚಳುವಳಿಗೆ ಹೊಸ ಶಕ್ತಿ ನೀಡಿದವರು ಡಾ.ರಾಜಕುಮಾರ್. ಅವರು ನಟಿಸುತ್ತಿದ್ದ ಚಿತ್ರಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ನಮ್ಮ ನಾಡು ನುಡಿಯ ಸಂದೇಶ ನೀಡುವ ಚಲನಚಿತ್ರಗಳು ಮತ್ತಷ್ಟು ರೂಪಗೊಳ್ಳಲಿ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಆಂಗ್ಲ ಭಾಷೆಯು ತನ್ಮದೇ ವ್ಯಾಕರಣ ಸೃಷ್ಟಿಸಿಕೊಳ್ಳುವ ವೇಳೆಗೆ, ಕನ್ನಡದಲ್ಲಿ ಅನೇಕ ಬೃಹತ್ ಗ್ರಂಥಗಳು ಪ್ರಕಟಗೊಂಡಿದ್ದವು. ಇಂದಿಗೂ ಕನ್ನಡ ಭಾಷೆಯ ಕುರಿತಾಗಿ ಅನೇಕ ಸಂಶೋಧನೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
Also read: ಡಾ. ಕೆ.ಎಸ್. ಪವಿತ್ರಾರ ‘ಚಿತ್ತ ಸಮುದ್ರ’ಕ್ಕೆ ಪ್ರಶಸ್ತಿ
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಕಾರ್ಯಕ್ರಮ ಸಂಯೋಜಕರಾದ ಡಾ.ಸುಭದ್ರಾ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post