ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ 4ನೆಯ ಬ್ಲಾಕ್’ನಲ್ಲಿರುವ ಸುಸ್ವರ ಲಯ ಪ್ರೌಢ ಸಂಗೀತ ಕಲಾ ಶಾಲೆಯಲ್ಲಿ ಈಗ 23ರ ವಸಂತದ ಸಂಭ್ರಮ ಮನೆ ಮಾಡಿದ್ದು, ಇದರ ಅಂಗವಾಗಿ ನಾಳೆಯಿಂದ ನಾಲ್ಕು ದಿನ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಕರ್ನಾಟಕ ಸಂಗೀತದಲ್ಲಿ ಗಾಯನ ಮತ್ತು ಮೃದಂಗ ವಾದನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಇನ್ನೂ ಹಲವಾರು ಪ್ರಕಾರಗಳಲ್ಲಿ ತನ್ನ ಸಂಗೀತ ಕೈಂಕರ್ಯವನ್ನು ಸಲ್ಲಿಸುತ್ತಾ ಸಂಗೀತ ಪ್ರಪಂಚದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಸುಸ್ವರಲಯ ಪ್ರೌಢ ಸಂಗೀತ ಕಲಾ ಶಾಲೆ 23ರ ಹರೆಯದ ಸಂಭ್ರಮದಲ್ಲಿದೆ.
ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಬನಶಂಕರಿ 2ನೆಯ ಹಂತ, 9ನೆಯ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮಲಲಿತ ಕಲಾ ಮಂದಿರದ ವೇದಿಕೆಯಲ್ಲಿ ಅ.29ರಿಂದ ನ.1ರವರೆಗೂ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಳ್ಳಲು ಸನ್ನದ್ಧವಾಗಿದೆ.
ಅ.29ರ ಬೆಳಿಗ್ಗೆ 10 ಘಂಟೆಗೆ ನಾಡಿನ ಖ್ಯಾತ ಮೃದಂಗ ವಾದನ ಪಟುಗಳು ಮತ್ತು ತಾಳವಾದ್ಯ ಕಲಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿ. ಕೃಷ್ಣ ಅವರು ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಈ ಸುಸಂದರ್ಭದಲ್ಲಿ 75 ವಸಂತಗಳನ್ನು ಕಂಡು, ಧನ್ಯತೆಯಿಂದ ಬೀಗುತ್ತಾ, ಮೃದಂಗ ವಾದನ ಮತ್ತು ಶಿಕ್ಷಣದಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ವಾನ್ ನುಗ್ಗಿಮಕ್ಕಿ ರಾಮಚಂದ್ರರಾವ್ ಅವರಿಗೆ ಪ್ರೀತಿ ಪೂರ್ವಕ ಸನ್ಮಾನ ನಡೆಯಲಿದೆ. ಅಲ್ಲದೇ, ಬೆಂಗಳೂರು ನಾಗರತ್ನಮ್ಮ ಸ್ಮರಣಾರ್ಥ ಪ್ರಶಸ್ತಿಯಾದ ಸ್ವರಲಯ ರತ್ನವನ್ನು ಖ್ಯಾತ ಗಾಯಕರಾದ ವಿದ್ವಾನ್ ಎನ್.ಆರ್. ಪ್ರಶಾಂತ್ ಅವರಿಗೆ ನಮ್ಮ ನಾಡು ಕಂಡ ಮತ್ತೊಬ್ಬ ಶ್ರೇಷ್ಠ ವೈಣಿಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಡಿ. ಬಾಲಕೃಷ್ಣ ಅವರು ಪ್ರದಾನ ಮಾಡಲಿದ್ದಾರೆ.
ಕಲಾ ಶಾಲೆಯ ಹಿರಿಮೆಯ ಪುರಸ್ಕಾರವಾದ ಸ್ವರಲಯ ಶೃಂಗವನ್ನು ಖ್ಯಾತ ಪಿಟೀಲು ವಿದ್ವನ್ಮಣಿಗಳಾದ ಸಿ.ಎನ್. ಚಂದ್ರಶೇಖರ್ ಅವರಿಗೆ, ನಾಡು ಕಂಡ ಹಿರಿಯ ಮೃದಂಗ ವಾದನ ಪಟು, ಕರ್ನಾಟಕ ಕಲಾಚಾರ್ಯ ಪುರಸ್ಕೃತ ವಿದ್ವಾನ್ ಎಂ. ವಾಸುದೇವರಾವ್ ಅವರು ನೀಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಹರಿದಾಸ ಸಾಹಿತ್ಯ ಚಿಂತಕರಾದ ವಿದ್ವಾನ್ ಚಂಪಕಧಾಮ ಅವರಿಂದ ಪ್ರಾತ್ಯಕ್ಷಿಕೆ-ಜನಪ್ರಿಯ ಹರಿದಾಸ ಕೀರ್ತನೆಗಳಲ್ಲಿ ಅಡಗಿರುವ ಗೂಡಾರ್ಥಗಳು, ಸಂಜೆ 4.15ಕ್ಕೆ ಕಲಾಶಾಲೆಯ ಮಕ್ಕಳಿಂದ ತಾಳವಾದ್ಯ, ನಂತರ ಹರಿಹರಪುರ ಕೆ. ಅಭಿರಾಮ್ ಅವರಿಂದ ಗಾಯನ, ನಂತರ ಸಂಜೆಯ ಮುಖ್ಯ ಸಂಗೀತ ಕಾರ್ಯಕ್ರಮವನ್ನು ಸರಳಾಯ ಸಹೋದರಿಯರು ಸಂಪನ್ನಗೊಳಿಸಲಿದ್ದಾರೆ.
ಅ.30ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಹರಿಶಂಕರ್ ಮೆನನ್ ಅವರಿಂದ ಸಂಪ್ರದಾಯ ಭಜನೆ, ಮೇಳಕರ್ತ ತಾಳಮಾಲಿಕೆಯಲ್ಲಿ ಗಾನಮೂರ್ತಿ ರಾಗ ಮೇಳ ತಾಳದ ಲಯ ವಿನ್ಯಾಸ, ವಿದುಷಿ ಸುಮಿತ್ರಾ ನಿತಿನ್ ಅವರಿಂದ ಸಂಗೀತ ಮತ್ತು ನೃತ್ಯಕ್ಕೆ ತಂಜಾವೂರು ನಾಲ್ವರ ಕೊಡುಗೆ ಬಗ್ಗೆ ಪ್ರಾತ್ಯಕ್ಷಿಕೆ ನೆರವೇರಲಿದೆ.
ಸಂಜೆ 4ರಿಂದ ಕಲಾಶಾಲೆಯ ವಿದ್ಯಾರ್ಥಿಗಳಿಂದ ಲಯ ವಿನ್ಯಾಸ, ವಿದ್ವಾನ್ ಮಧುಸೂಧನ್ ಮತ್ತು ವಾಸುಕಿ ಪರಿಮಳ ಅವರಿಂದ ಪಿಟೀಲು ಯುಗಳ ವಾದನ, ನಂತರ ಸ್ವರಲಯ ರತ್ನ ಎನ್.ಆರ್. ಪ್ರಶಾಂತ್ ಅವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.
ಅ.31ರ ಸೋಮವಾರ ಸಂಜೆ 4.30ರಿಂದ ಟಿ.ಆರ್.ಕೆ. ಸಹೋದರರಿಂದ ಯುಗಳ ಗಾಯನ, ನಂತರ ಸ್ವರಲಯ ಶೃಂಗ ವಿದ್ವಾನ್ ಸಿ.ಎನ್. ಚಂದ್ರಶೇಖರ್ ಅವರಿಂದ ಪಿಟೀಲು ತನಿ ಕಚೇರಿ ನಡೆಯಲಿದೆ.
ಕರುನಾಡ ರಾಜ್ಯೋತ್ಸವದಂದು ಬೆಳಿಗ್ಗೆ 9.30ಗೆ ಕಲಾಶಾಲೆಯ ವಿದ್ಯಾರ್ಥಿಗಳಿಂದ ತಾಳವಾದ್ಯ, ನಾಡು ಕಂಡ ಖ್ಯಾತ ಸಂಗೀತ ವಿದುಷಿ ಮತ್ತು ವಿಮರ್ಶಕಿ ಡಿ. ಶಶಿಕಲಾ ಅವರಿಂದ ವಿವಿಧ ರೀತಿಯ ಪಲ್ಲವಿಗಳ ಬಗ್ಗೆ ಪ್ರಾತ್ಯಕ್ಷಿಕೆ , ಮಿಸ್ಟರ್ ಘಟಂ ತಂಡದಿಂದ ವಿಶೇಷವಾದ ಘಟ ತರಂಗ ಲಯ ವಿನ್ಯಾಸ ನಡೆಯಲಿದೆ.
ಸಂಜೆ 4ರಿಂದ ಕಲಾ ಶಾಲೆಯ ಮಕ್ಕಳಿಂದ ಲಯ ವಿನ್ಯಾಸ, ಕು.ಚಿನ್ಮಯಿ ಅವರಿಂದ ಗಾಯನ, ನಂತರ ಮುಖ್ಯಕಾರ್ಯಕ್ರಮದಲ್ಲಿ ಟಿವಿಎಸ್ ಮಹದೇವನ್ ಅವರ ಗಾಯನ ಕಚೇರಿಯೊಂದಿಗೆ ವಾರ್ಷಿಕೋತ್ಸವವು ವಿಜೃಂಭಿಸಿ ಸಂಪನ್ನಗೊಳ್ಳಲಿದೆ.
ಸುಸ್ವರಲಯ ಬೆಳೆದುಬಂದ ಹಾದಿ
ರಾಜಧಾನಿ ಬೆಂಗಳೂರಿನಲ್ಲಿ 1999 ರಲ್ಲಿ ವಿದ್ವಾನ್ ಎಚ್.ಎಸ್. ಸುಧೀಂದ್ರ ಹಾಗೂ ವಿದ್ವಾನ್ ಬಾಲು ರಘುರಾಮನ್ ಅವರಿಂದ ಸ್ಥಾಪನೆಗೊಂಡ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಒಂದು ಅಂಗೀಕೃತ ಧರ್ಮ ಸಂಸ್ಥೆಯಾಗಿ ಭಾರತೀಯ ಪರಂಪರೆಯ ಪ್ರದರ್ಶಿತ ಕಲೆಗಳನ್ನು ಪೋಷಿಸಿ ಬೆಳೆಸುವ ಘನ ಉದ್ದೇಶ ಹೊಂದಿದೆ.
ಕಲಾ ಶಾಲೆಯು ಪರಿಣಿತ ವಿದ್ವಾಂಸರ ತಂಡವನ್ನು ಹೊಂದಿದ್ದು, ಯುವ ಮತ್ತು ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡುವುದರೊಂದಿಗೆ ಬೋಧ ಪ್ರದವಾದ, ಆಸಕ್ತಿಯಿಂದ ಕೂಡಿದ ಸಂಗೀತ ಕಚೇರಿಗಳನ್ನೂ ಆಗಾಗ್ಗೆ ಆಯೋಜಿಸುತ್ತದೆ.
ಕಳೆದ 22 ವರ್ಷಗಳಿಂದ ವಾದನ ಹಾಗೂ ತಾಳವಾದ್ಯ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುತ್ತಾ, ಒಂದು ವಿದ್ವತ್ಪೂರ್ಣ ಕಚೇರಿಗೆ ಬೇಕಾಗುವ ಸಮಗ್ರ ತರಬೇತಿ ನೀಡಿ, ಸಾಹಿತ್ಯ ಮತ್ತು ಲಯದ ತಿಳುವಳಿಕೆಗೆ ವಿಶೇಷ ಆದ್ಯತೆ ನೀಡುವ ಮಹತ್ತರವಾದ ಸೇವೆ ಮಾಡುತ್ತಿದೆ.
ಈ ಶಾಲೆಯ ಆಶ್ರಯದಲ್ಲಿ ಬೆಳೆದ ನೂರಾರು ಕಲಾವಿದರು ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ, ದೇಶ-ವಿದೇಶಗಳಲ್ಲಿ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿ ಖ್ಯಾತರಾಗಿರುವುದು ಹೆಮ್ಮೆಯ ಸಂಗತಿ.
ಕಲೆಗಾಗಿ ತಮ್ಮಜೀವನವನ್ನೇ ಸಮರ್ಪಿಸಿಕೊಂಡ ವಿದ್ವಾನ್ ಎಚ್.ಎಸ್. ಸುಧೀಂದ್ರ ಈ ಪ್ರೌಢ ಸಂಗೀತ ಕಲಾ ಶಾಲೆಯ ಸಾಧನೆಗಳ ಹಿಂದಿನ ರೂವಾರಿ. ಶಾಲೆಯ ಪ್ರಾಂಶುಪಾಲರಾಗಿ ಇವರು ಅಹರ್ನಿಷಿ ಸೇವೆ ಸಲ್ಲಿಸುತ್ತಿರುವುದು ಕಲಾರಂಗದ ಸುಕೃತವೇ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post