ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾತೃಭಾಷೆ ಬಳಸಿ, ಸಂಸ್ಕೃತಿ ಪರಂಪರೆ ಉಳಿಸಿ, ಬದಲಾದ ಅಭಿವೃದ್ಧಿ ತಂತ್ರಜ್ಞಾನದಿಂದ ನಮ್ಮ ಜ್ಞಾನ ವೃದ್ಧಿಗೊಳಿಸಬೇಕು ಎಂದು ಇಂಜಿನಿಯರ್ ಸಂಶೋಧಕ ಡಾ. ಗುರುಪ್ರಸಾದ್ ಹೇಳಿದರು.
ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಉತ್ತರದ ವತಿಯಿಂದ ಆಯೋಜಿಸಿದ್ದ ಕನ್ನಡದ ಕೀಲಿಮಣೆ ವಿತರಣಾ ಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಯನ್ನು ಕಂಪ್ಯೂಟರ್‌ನಲ್ಲಿ ಸರಳವಾಗಿ ಬಳಸಲು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ಸಂಶೋಧನೆ ಮಾಡಿದ್ದು, ಮಕ್ಕಳ ಬೌದ್ಧಿಕ ಮಟ್ಟ ಸುಧಾರಿಸಲು ಹಾಗೂ ಕಂಪ್ಯೂಟರ್ ಜ್ಞಾನ ವೃದ್ಧಿಸಲು ಹಾಗೂ ಕಂಪ್ಯೂಟರ್ ಬಳಕೆ ಸರಳಗೊಳಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.
ಹೊಸ ಹೊಸ ಆವಿಷ್ಕಾರಗಳಿಗೆ, ಸಂಶೋಧನೆಗೆ ಭಾರತ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ ಕೊಟ್ಟರೆ ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ರೂಪುಗೊಳ್ಳುತ್ತಾರೆ. ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆಸಕ್ತ ಗುರುತಿಸಿ ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಡಿಡಿಪಿಐ ಪರಮೇಶ್ವರ್ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆ ಆಗುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದ ನೆರವಿನ ಜತೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಬಿಇಒ ನಾಗರಾಜ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ತಂತ್ರಜ್ಞಾನದ ಸಹಾಯದಿಂದ ನಾವು ಮಕ್ಕಳಿಗೆ ಮನೆಯಲ್ಲಿ ಆನ್‌ಲೈನ್ ಮುಖಾಂತರ ಶಿಕ್ಷಣ ನೀಡಲು ಸಾಧ್ಯವಾಯಿತು. ತಂತ್ರಜ್ಞಾನದ ಸದ್ಭಳಕೆ ಮುಖ್ಯ ಎಂದರು. ದುರ್ಗಿಗುಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಕನ್ನಡದ ಕೀಲಿಮಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಉತ್ತರದ ಅಧ್ಯಕ್ಷೆ ಜಿ.ಪಿ.ಚಂದ್ರಮ್ಮ ಮಾತನಾಡಿದರು. ಮಕ್ಕಳಿಗೆ ಕೀಲಿಮಣೆಗಳನ್ನು ವಿತರಿಸಿ ಬಳಕೆ ಮಾಡುವ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ನಡೆಸಲಾಯಿತು.
ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚೇರ‍್ಮನ್ ಭಾರತಿ ಚಂದ್ರಶೇಖರ್, ವಾರಿಜಾ ಜಗದೀಶ್, ಮಾಜಿ ಅಧ್ಯಕ್ಷೆ ಅಂಬಿಕಾ ಮೂರ್ತಿ, ಹೇಮಾ, ದೀಪಾ, ಸೋಮಶೇಖರ, ರಾಘವೇಂದ್ರ, ಮುಖ್ಯಶಿಕ್ಷಕ ಮೊಹನ್, ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಉತ್ತರ ಸದಸ್ಯರು ಹಾಜರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















