ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಡಿಸೆಂಬರ್ ವೇಳೆಗೆ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್’ಗಳನ್ನು ವಿತರಿಸಲಾಗುವುದು. ಒಟ್ಟು 1 ಕೋಟಿ ಕಾರ್ಡ್’ಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ಕೋಟಿ ಕಾರ್ಡ್’ಗಳನ್ನು ಸಿದ್ಧಪಡಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆಯುಷ್ಮಾನ್ ಕಾರ್ಡ್’ಗಳನ್ನು ಎಲ್ಲಾ ಅರ್ಹರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಮಾರ್ಚ್ ವೇಳೆಗೆ ಎಲ್ಲಾ ಅರ್ಹರಿಗೆ ಕಾರ್ಡ್
ಇಡಿಸಿಎಸ್ ವಿಭಾಗದ ನಿರಂತರ ಪ್ರಯತ್ನ ಶ್ಲಾಘನೀಯವಾಗಿದ್ದು, ಗ್ರಾಮ ಒನ್ ಕೇಂದ್ರಗಳಲ್ಲಿ ದೈನಂದಿನ ಗುರಿ ತಲುಪಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಅನೇಕ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಆಪರೇಟರ್ಗಳು ಬೆಳಿಗ್ಗೆ 6 ರಿಂದ ರಾತ್ರಿ 11 ಗಂಟೆವರೆಗೆ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ನೋಂದಣಿ ಅಭಿಯಾನ ನಡೆಸುವ ಜೊತೆಗೆ ತಾಂತ್ರಿಕ ಅಡಚಣೆಗಳನ್ನು ಎನ್’ಎಚ್’ಎ ನೆರವಿನಿಂದ ಪರಿಹರಿಸಲಾಗುತ್ತಿದೆ. ಮುಂದಿನ ಮಾರ್ಚ್ ವೇಳೆಗೆ ಎಲ್ಲಾ ಅರ್ಹರಿಗೆ ಎಬಿ-ಎಆರ್’ಕೆ ಕಾರ್ಡ್’ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಯೋಜನೆ ಹೆಚ್ಚಿನ ವ್ಯಾಪ್ತಿ ಹೊಂದಿದ್ದರಿಂದ ಮತ್ತು ಪ್ರಯೋಜನಕಾರಿಯಾಗಿದ್ದರಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಹೆಸರಿನಡಿ ಯೋಜನೆಯನ್ನು ಜಾರಿ ತರಲಾಯಿತು. ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯ ನೈಜ ಸ್ಪೂರ್ತಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದ್ದು, ಎಲ್ಲಾ 5.09 ಕೋಟಿ ಅರ್ಹ ನಾಗರಿಕರಿಗೆ ಎಬಿ-ಪಿಎಂಜೆಎವೈ-ಎಆರ್’ಕೆ ಕಾರ್ಡ್’ಗಳನ್ನು ವಿತರಿಸಲಾಗುವುದು. ಎಬಿ-ಪಿಎಂಜೆಎವೈ ರಾಷ್ಟ್ರೀಯ ಯೋಜನೆಯಾಗಿದ್ದು, ಪ್ರತಿ ರಾಜ್ಯಗಳಲ್ಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕೋ ಬ್ರಾಂಡೆಡ್ ಕಾರ್ಡ್’ಗಳನ್ನು ಸೃಜಿಸುವ ಅಭಿಯಾನವನ್ನು ಸಹ ಆರಂಭಿಸಿವೆ ಎಂದು ಸಚಿವರು ತಿಳಿಸಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post