ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮೀಪದ ಶಿರಸಿ ತಾಲೂಕಾ ಪಂಚಾಯತ ಜೀವವೈವಿಧ್ಯ ಸಮಿತಿ ಸಭೆಯಲ್ಲಿ ಐತಿಹಾಸಿಕ ಕೋಟೆ ಪ್ರದೇಶಕ್ಕೆ ಪಾರಂಪರಿಕ ತಾಣ ಎಂದು ಮಾನ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ಸಹಸ್ರಲಿಂಗದ ಸ್ವಚ್ಛತೆ, ಸಂರಕ್ಷಣೆ, ಬೇಡ್ತಿ ಕಣಿವೆ, ಸೋಂದಾ ಕೋಟೆ ರಕ್ಷಣೆ ಬಗ್ಗೆ ಭೈರುಂಬೆ ಪಂಚಾಯತ ಬಿ.ಎಂ.ಸಿ. ಕೈಗೊಂಡ ಕ್ರಮಗಳ ಬಗ್ಗೆ ಪಂಚಾಯತ ಅಧ್ಯಕ್ಷ ರಾಘವೇಂದ್ರ ನಾಯ್ಕ ಸದಸ್ಯ ಕಿರಣ ಭಟ್ ಮಾಹಿತಿ ನೀಡಿದರು.
ಶಿರಸಿ ತಾಲೂಕಾ ಪಂಚಾಯತ ಕಚೇರಿಯ ಸಭಾ ಕೊಠಡಿಯಲ್ಲಿ ನಡೆದ ಸಭೆಗೆ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಜೀವವೈವಿಧ್ಯ ಮಂಡಳಿಯ ಅಧಿಕಾರಿಗಳಾದ ಪವಿತ್ರಾ, ಡಾ. ಪ್ರೀತಮ್, ನಿಖಿಲ್ ಅವರು ಆಗಮಿಸಿ ತಾಲೂಕಿನ ಗ್ರಾಮ ಪಂಚಾಯತ ಜನಪ್ರತಿನಿಧಿಗಳಿಗೆ ಬಿ.ಎಂ.ಸಿ. ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸೋಂದಾ ವಿದ್ಯಾರ್ಥಿಗಳಿಗೆ ಪರಿಸರ ಹಾಡುಗಳ ಸ್ಪರ್ಧೆ ನಡೆಸಬೇಕು. ಸೂಕ್ಷ್ಮ ಪರಿಸರ ತಾಣಗಳಿಗೆ ವಿಜ್ಞಾನಿಗಳ ಭೇಟಿ, ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು. ಮಾದರಿ ಬಿ.ಎಂ.ಸಿ.ಗಳ ಸಮಾವೇಶ ನಡೆಸಬೇಕು. ಹಸಿರು ಶಾಲೆಗೆ ಪ್ರೋತ್ಸಾಹ ನೀಡಲು, ಎಕ್ಕಂಬಿ ಸೀತಾ ಅಶೋಕ ವನಕ್ಕೆ ದೇವರಕಾಡು ಎಂಬ ನಾಮಕರಣ, ಕೃಷಿ ಜೀವವೈವಿಧ್ಯ ಕ್ಷೇತ್ರ ಸಾಧಕರಿಗೆ ಸನ್ಮಾನ ಮಾಡಲು ಸಭೆ ನಿರ್ಧರಿಸಿತು.
ಸೋಂದಾ ಕೋಟೆ ಪಾರಂಪರಿಕ ತಾಣ ಪ್ರಸ್ತಾವನೆಗೆ ರಾಜ್ಯ ಮಟ್ಟದಲ್ಲೂ ಮಾನ್ಯತೆ ನೀಡಲು ಜೀವವೈವಿಧ್ಯ ಮಂಡಳಿಗೆ ಮನವಿ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
Also read: ಸೊರಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ನೇಮಕ
ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ತಲಕೊಪ್ಪ ಅವರು ಬಿ.ಎಂ.ಸಿ. ಸಭೆ, ತರಭೇತಿಗಳ ಸಂಯೋಜನೆ ಮಾಡಿದರು. ದೂರದೃಷ್ಟಿ ಯೋಜನೆ ರೂಪಿಸುವಾಗ ನಿಸರ್ಗ ಸಂಪನ್ಮೂಲ ಉಳಿವಿಗೆ ಗಮನ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಜೀವವೈವಿಧ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆ ತಡೆಯಲು ಪಂಚಾಯತ ಜೀವವೈವಿಧ್ಯ ಸಮೀತಿಗಳು ಅರಣ್ಯ ಅಧಿಕಾರಿಗಳ ಮೂಲಕ ಕ್ರಮಕ್ಕೆ ಮುಂದಾಗಬೇಕು ಎಂದು ಮಂಡಳಿಯ ಅಧಿಕಾರಿಗಳು ಸೂಚಿಸಿದರು.
ಜೀವವೈವಿಧ್ಯ ಕಾಯಿದೆ ಮೂಲಕ ಸೋಂದಾ ಮುಂಡಿಗೆಕೆರೆ ಪಕ್ಷಿಧಾಮ ಎಂದು ಘೋಷಣೆ ಮಾಡಿದ ರಾಜ್ಯದ ಮೊದಲ ಗ್ರಾಮ ಪಂಚಾಯತ ಸೋಂದಾ ಇದಕ್ಕಾಗಿ ವಿಜ್ಞಾನಿ ಡಾ. ಪ್ರೀತಮ್ ಸೋಂದಾ ಪಂಚಾಯತಕ್ಕೆ ಅಭಿನಂದನೆ ಹೇಳಿದರು.
ಶಿರಸಿ ತಾಲೂಕಿನ ಬಿ.ಎಂ.ಸಿ.ಗಳ ಕ್ರಿಯಾಶೀಲತೆ ಬಗ್ಗೆ ಮಂಡಳಿ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದರು. ಮಧ್ಯಾಹ್ನ ನಂತರ ಜೀವವೈವಿಧ್ಯ ಮಂಡಳಿ ತಂಡ ಬಕ್ಕಳ ಪವಿತ್ರ ವನ, ಭೈರುಂಬೆ ಪಂಚಾಯತ, ಶಾಲ್ಮಲಾ ಸಂರಕ್ಷಿತ ಪ್ರದೇಶ, ಸೋಂದಾ ಕೋಟೆ ಪ್ರದೇಶಗಳಿಗೆ ಭೇಟಿ ನೀಡಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post