ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯ ಬಿಟ್ಟರೆ ಮತ್ತಾವ ಪ್ರಾಣಿಯೂ ತಂಬಾಕನ್ನು ತಿನ್ನುವುದಿಲ್ಲ. ಇಂತಹ ಹಾನಿಕಾರಕ ತಂಬಾಕಿನ ಉತ್ಪನ್ನಗಳಿಂದ ನಾವೆಲ್ಲ ದೂರ ಇರಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯಲ್ಲಿ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಿಯವರೆಗೆ ನಾವು ಒಳ್ಳೆಯವರಾಗುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಒಳ್ಳೆಯ ಕಾನೂನು ತಂದರೂ ಪರಿಣಾಮಕಾರಿಯಾಗಿ ಅದು ಜಾರಿಯಾಗುವುದಿಲ್ಲ. ಆದ್ದರಿಂದ ನಾವೆಲ್ಲ ಪ್ರಜ್ಞಾವಂತರಾಗಿ ಕಾನೂನು, ನಿಯಮಗಳನ್ನು ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ತಂಬಾಕು ವಸ್ತುಗಳಿಂದ ದೂರವಿಡಬೇಕು ಎಂದರು.
Also read: ಮುರುಘಾ ಮಠ ಪ್ರಕರಣದ ಬಗ್ಗೆ ಅತಿಶೀಘ್ರದಲ್ಲಿ ಮುಂದಿನ ಕ್ರಮ: ಸಿಎಂ
ತಂಬಾಕು ಬಳಕೆ ಕುರಿತಾಗಿ ಅನೇಕ ರೀತಿಯ ನಿರ್ಬಂಧಗಳಿದ್ದರೂ ಜನರು ಅದಕ್ಕೆ ಹೆದರುತ್ತಿಲ್ಲ. ಕೆಲವು ಮೆಡಿಸಿನ್ ತಯಾರಿಕೆಗೆ ಮಾತ್ರ ತಂಬಾಕು ಬೆಳೆಯಲು ಅನುಮತಿ ಇದೆ. ಆದರೆ ಬರ್ಗ ಹುಕುಂ ಜಮೀನು, ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ತಂಬಾಕು ಬೆಳೆಯಲಾಗುತ್ತಿದೆ. ಆದರೆ ಜನರು ಹೆದರಿಕೊಂಡು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಜಿಲ್ಲೆಯಲ್ಲಿ ತಂಬಾಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ ಮಾತನಾಡಿ, ಸುಶಿಕ್ಷಿತರೆನಿಸಿಕೊಂಡ ವ್ಯಕ್ತಿಗಳೇ ಶಾಲಾ ಅವಧಿ ಮುಗಿದ ನಂತರ ಶಾಲಾ ಆವರಣದಲ್ಲಿ ತಂಬಾಕು, ಮದ್ಯಪಾನ, ಧೂಮಪಾನ, ಇನ್ನಿತರೆ ಮಾದಕ ವಸ್ತುಗಳನ್ನು ಸೇವನೆ ಮಾಡುವ ಮೂಲಕ ವಿಕೃತ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ ಎಂದರು.
ಉಪ ಪೊಲೀಸ್ ಅಧೀಕ್ಷಕರಾದ ಪ್ರಭು ಮಾತನಾಡಿ, ಇಂದಿಗೂ ಸಹ ರೈತರು ಕೆಲವು ಜಮೀನುಗಳಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ ಕಾನೂನು ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ. ಒಂದೆಡೆ ಈ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಕಾರ್ಯಾಗಾರ ಮಾಡುತ್ತಿದ್ದು ಮತ್ತೊಂದೆಡೆ ಜನರು ಇಂತಹ ಕೃತ್ಯಗಳಲ್ಲಿ ತೊಡಗಿರುವುದು ವಿಪರ್ಯಾಸ ಎಂದರು.
ಡಿಎಚ್’ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ತಂಬಾಕು ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಮಹತ್ವದ ಜವಾಬ್ದಾರಿ ಸಮುದಾಯ ಆರೋಗ್ಯ ಅಧಿಕಾರಿಗಳ ಮೇಲಿದ್ದು ಸಮರ್ಪಕವಾಗಿ ನಿಭಾಯಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಆರ್’ಸಿಎಚ್’ಓ ಡಾ.ನಾಗರಾಜ ನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ. ಮಲ್ಲಪ್ಪ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್, ಶಿವಕುಮಾರ್ ಎಸ್.ಟಿ. ರವಿರಾಜ್ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post