ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ-ಉದಯ ಬಿ. ಶೆಟ್ಟಿ, ಪಂಜಿಮಾರು |
ಹೌದು. ಮತ್ತೆ ವಿಜೃಂಭಿಸಿ ನಲಿದಾಡಿದೆ ಏಡಿ. ನನ್ನ ಉಲಿಯುವ ಶಕ್ತಿಯನ್ನು ಕನಲಿಸಿ, ಕಲಸಿ, ಕಬಳಿಸಿ, ಕದಡಿಸಿ, ಕೆದಕಿ, ಕೆಸರನ್ನಾಗಿಸಿ, ಕಮರಿಸಿ, ಕಸಿವಿಸಿ ಗೊಳಿದೆ. ಗಹಗಹಿಸುತ್ತ ಮೋಡಿ ಮಾಡಿದೆ. ಈ ದಶ ಪಾದಗಳ ಏಡಿಯ ನಡೆ ಏನು ಅದ್ಭುತವೋ.?? ಕಟಕ ನಾಮಾಂಕಿತ ಈ ಅರ್ಬುದದ ನೆಲೆ, ಬಲೆ, ಸೆಲೆ, ಕಲೆ, ಲೀಲೆಗಳನ್ನು ಬಲ್ಲವರಾರು?? ಎಡದಿಂದಲೂ ಕಟಕ. ಬಲದಿಂದಲೂ ಕಟಕ. ಒಟ್ಟಾರೆ ಮೈದೋರಿದರೆ ಕಂಟಕವೇ ಕಂಟಕ.
2008, 26/11ರ ಮುಂಬೈ ನರಮೇಧ ನೆನಪಿರಬಹುದು. ಪಾಕಿಸ್ತಾನಿ ಪ್ರಾಯೋಜಿತ ಆತಂಕಿಗಳು ಮುಂಬೈಯನ್ನು ಮುತ್ತಿ ನೂರಾರು ಅಮಾಯಕರ ಬಲಿ ಪಡೆದ ದುರಂತ. ಆ ಸಮಯದಲ್ಲಿ ನನ್ನ ಅರ್ಬುದ ರೋಗದ ತಪಾಸಣೆಗಳು ತುರೀಯ ಅವಸ್ಥೆಯಲ್ಲಿದ್ದವು. ಅನಂತರ 19/12/2008 ರಂದು ಮುಂಬೈಯ ಸೈಫೀ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ಆ ಸಲ ಏಡಿ ಪಾದವೂರಿದ್ದು ಮುಖದ ಹೊರಬಾಗದಲ್ಲಿ. ಎಡ ದವಡೆಯ ಕೆಳಭಾಗದಲ್ಲಿ. ಹೊರಗಿಂದ ಗಡ್ಡ ಮತ್ತು ಗಲ್ಲದಲ್ಲಿ 14 ಸೆಂ. ಮೀಟರ್ ಹಾಗೂ ಎದೆಗೂಡಿನಲ್ಲಿ 19 ಸೆಂ.ಮೀಟರ್ ಕೊಯ್ದು ಅವುಗಳ ಮಧ್ಯದ ಹದಿನೈದು ನರತಂತುಗಳನ್ನು ಕಡಿದು ತೆಗೆಯಲಾಗಿತ್ತು. ಸಂಪೂರ್ಣ ಏಡಿಯನ್ನೇ ದ್ವಂಸ ಮಾಡಿದ್ದೇನೆ ಎಂದ ನನ್ನ ವೈದ್ಯರ ಜೊತೆಗೆ ನಾನೂ ಬೀಗಿದ್ದೆ.
ಕೊಯ್ದ ಗಾಯವನ್ನು ದಾರದಿಂದ ಹೊಲಿಯದೆ ಬೆಳ್ಳಿಯ ಸಲಾಕೆಯಂತೆ ಹೊಳೆಯುವ ಸ್ಟೆಪಿಲರ್ ಪಿನ್ ಹಾಕಿದ್ದರು. ನನ್ನನ್ನು ನೋಡಲೆಂದೇ ದಿವಂಗತ ಪಂಜಿಮಾರು ಹರೀಶ್ ಶೆಟ್ಟಿಯವರು ಊರಿನಿಂದ ಬಂದಿದ್ದರು. ಅವರೊಂದಿಗಿದ್ದ ಗೆಳೆಯ ಗಿರೀಶ್ ರಾವ್ (ದಶರಥ) ಅವರಿಗೆ ಈ ಪರಿಯ ಶಸ್ತ್ರಕ್ರಿಯೆಯನ್ನು ನೋಡಿ ತಲೆಸುತ್ತು ಬಂದಿತ್ತು. ಈ ಶಸ್ತ್ರಚಿಕಿತ್ಸೆಯ ಫಲವಾಗಿ ಇಂದಿಗೂ ಬಾಯಿ ಸಂಪೂರ್ಣ ತೆರೆಯಲು ಮತ್ತು ಎಡಗೈ ಮೇಲೆತ್ತಲು ಆಗುತ್ತಿಲ್ಲ. ಏಳು ವರ್ಷಗಳ ಪರ್ಯಂತ ನಿಯಮಿತ ತಪಾಸಣೆಗೆ ಒಳಪಟ್ಟು 2015ರಲ್ಲಿ ನಿಲ್ಲಿಸಲಾಯಿತು. ಇತ್ತೀಚೆಗಿನ ಒಂಬತ್ತು ವರ್ಷಗಳಲ್ಲಿ ನಾನು ಏಡಿಯನ್ನು ಅದರ ಮೋಡಿಯನ್ನೂ ಸಂಪೂರ್ಣ ಮರೆತೇ ಬಿಟ್ಟಿದ್ದೆ. ಆದರೆ ಅದು ನನ್ನನ್ನು ಮರೆಯಲೇ ಇಲ್ಲ. ಎಂಥ ಅದ್ಭುತ ನಡೆಯ, ಮೋಡಿಯ ಏಡಿ ನೋಡಿ.!
2024, ಜುಲೈ ತಿಂಗಳ ವರ್ಷಋತುವಿನಲ್ಲಿ ನಾನು ಊರಲ್ಲಿ ಸಾಗುವಳಿ ಮಾಡಿಸುವುದರಲ್ಲಿ ನಿರತನಾಗಿದ್ದೆ. ಬಾಯಿಯ ಮೇಲ್ಚಾವಣಿ, (ಹಿಂದಿಯಲ್ಲಿ ಟಾಲು ಎಂದು ಕರೆಯುತ್ತಾರೆ) ಎಡ ನಾಸಿಕದ ಹೊಳ್ಳೆಯ ಸನಿಹ ಹುಣ್ಣೊಂದು ಮೂಡಿತ್ತು. ಉಷ್ಣ ಪ್ರಕ್ರಿಯೆ ಇರಬಹುದೆಂದು ಬಾಯಿ ಹುಣ್ಣಿಗೆ ಬೇಕಾಗುವ ಔಷಧಗಳನ್ನು ಮೂರು ವೈದ್ಯರಿಂದ ಪಡೆದೆ. ಫಲಿತಾಂಶ ಮಾತ್ರ ಶೂನ್ಯ. ಇಷ್ಟಾಗುವಾಗ ಸೆಪ್ಟೆಂಬರ್ ಮಧ್ಯ ಗತಿಸಿತ್ತು. ಈ ಮಧ್ಯೆ ನನ್ನ ಎರಡೂ ಕಣ್ಣುಗಳ ಪರದೆಯ ಶಸ್ತ್ರಚಿಕಿತ್ಸೆ ನಡೆಯಿತು. ಬಾಯಿ ಹುಣ್ಣು ಗುಣವಾಗದೇ ಇದ್ದ ಕಾರಣ ENT ತಜ್ಞರಿಗೆ ತೋರಿಸಿದೆ. ಗತ ಇತಿಹಾಸವನ್ನು ಕೆದಕಿದ ಅವರು ಬಯೋಪ್ಸಿ (BIOPSY) ಮಾಡಿಸಿ ಎಂದರು. ಆಗ ಹಳೆ ಗಂಡನ ಪಾದವೇ ಗತಿ ಎಂದು ನನ್ನ 2008ರ ಅರ್ಬುದದ ವೈದ್ಯರಿಗೆ ಶರಣಾದೆ. ನೋಡಿದ ಅವರು ಅಂದೇ ಕಿತ್ತು ಬಯೋಪ್ಸಿಗೆ ಕಳುಹಿಸಿದರು. PET SCAN ಮತ್ತು 10 – 12 ಬಗೆಯ ರಕ್ತ ಪರೀಕ್ಷೆ, X – Ray ಮುಂತಾದುವುಗಳಿಗೆ ನಿರ್ದೇಶಿಸಿದರು. PET SCAN ಮುಗಿಸಿ ಬಯಾಪ್ಸಿ ಫಲಿತಾಂಶ ಬಂದಾಗ ಬರಸಿಡಿಲು ಬಡಿದಿತ್ತು. ದಶ ಪಾದಗಳ ಏಡಿ ಮತ್ತೆ ತನ್ನ ಪಾದವೂರಿ, ದಶಕಂಠನಂತೆ ನನ್ನನ್ನು ಕಾಲಿನಿಂದ ಕೆಡವಿ ಮೇಲೇರಿ ಒಡ್ಡೋಲಗ ನೀಡಿಯಾಗಿತ್ತು. ಏಡಿ ಮೋಡಿ ಮಾಡಿದೆ. ಮತ್ತೆ ಬಂದು ವಕ್ರಯಿಸಿದೆ ಎಂದರು ವೈದ್ಯರು.
ಹದಿನಾರು ವರ್ಷಗಳ ನಂತರ ಅರ್ಬುದದ ಅದ್ಭುತ ಪುನರಾಗಮನ. ನಂತರ ಉಳಿದದ್ದು ಶಸ್ತ್ರಚಿಕಿತ್ಸೆಯ ತಯಾರಿ ಮಾತ್ರ. ದಾರಿಯೂ ಕಠಿಣವಾಗಿತ್ತು. ಏಕೆಂದರೆ ಈ ಸಲ ಏಡಿ ಪಾದವೂರಿದ್ದು ಬಾಯಿಯ ಒಳಗೆ. ಅದನ್ನು ಕಡಿದು ತೆಗೆಯುವಾಗ ದೊಡ್ಡದೊಂದು ‘ಕುಳಿ’ ನಿರ್ಮಾಣವಾಗುತ್ತದೆ. ಆಹಾರ ಸೇವನೆ ಮತ್ತು ಉಸಿರಾಟ ಎರಡಕ್ಕೂ ಎಡರಾಗುತ್ತದೆ. ಆದ್ದರಿಂದ PLASTIC SURGERY ಕೂಡ ಅನಿವಾರ್ಯ ಎಂದರು. “ಮರಣಕ್ಕೆ ಹೆದರುವವನು ವೀರನೇ?? ಅಲ್ಲ. ಶಸ್ತ್ರಕ್ರಿಯೆ ಬೇಡ. “ಜನನ ಮರಣವು ಲೋಕ ರೂಢಿಯು. ಮರುಗುವುದು ಏತಕ್ಕೆ”? ನನ್ನ ಪ್ರಶ್ನೆ. ಏಡಿ ಕೆಳ ಮುಖವಾಗಿ ಬೆಳೆದರೆ; ಆಹಾರ ಸೇವನೆ, ಉಸಿರಾಟ ಕಷ್ಟ ಸಾಧ್ಯ. ರಸನೆಯ ಮೇಲೆ ಭಾರ ಹಾಕಿದರೆ ಮಾತು ನಿಂತು ಹೋಗಬಹುದು. ಮೇಲ್ಮುಖವಾಗಿ ಬೆಳೆದರೆ ಎಡಕಣ್ಣ ಗುಡ್ಡೆ ಸ್ಥಾನ ಪಲ್ಲಟವಾಗಬಹುದು. ಮುಖ ವಿಕಾರವಾಗಬಹುದು. ಮೇಲೆ – ಕೆಳಗಿನ ಎರಡೂ ಪ್ರಸಂಗಗಳಲ್ಲೂ ಏಡಿಯ ಕಡಿತದ, ಬಡಿತದ, ಹೊಡೆತದ, ಹಿಡಿತದ, ಕೊರೆತದ, ನಡತೆಯ, ಹಿಂಡುವಿಕೆಯ, ವಿಕಸನದ ನೋವು ಮಾರಣಾಂತಿಕ. ಇದು ವೈದ್ಯರ ಸಲಹೆ. ಅಲ್ಲದೆ ಈಗ ಏಡಿ ಪ್ರತ್ಯಕ್ಷಗೊಂಡದ್ದು ರಕ್ತನಾಳದಲ್ಲಿ ಅಲ್ಲ. ಶಸ್ತ್ರಚಿಕಿತ್ಸೆ ನಿಧಾನಿಸಿದರೆ ಏಡಿ ರಕ್ತನಾಳದಲ್ಲಿ ಪಾದವೂರಬಹುದು. ಆಗ ಅದು ರಕ್ತ ಬೀಜಾಸುರನಂತೆ ದೇಹದ ಸಂಪೂರ್ಣ ರಕ್ತನಾಳಗಳಲ್ಲಿ ವಿಜೃಂಭಿಸಿ ಗಹಗಹಿಸಬಹುದು ಎಂದರು. ಈಗಾಗಲೇ (ಬಯೋಪ್ಸಿಯ ನಂತರ) ಮೇಲಿನಿಂದ ಕೆಳಗಿಳಿದು ನಾಲಗೆಗೆ ಒತ್ತುತ್ತಿದ್ದುದರಿಂದ ಮಾತು ಲಯ ತಪ್ಪುತ್ತಿದ್ದ ಅನುಭವ ನನಗಾಗುತ್ತಿತ್ತು. ಆದ್ದರಿಂದ ಒಲ್ಲದ ಒಲವಿನಿಂದಲೇ ಶಸ್ತ್ರಕ್ರಿಯೆಗೆ ಅನುಮತಿಸ ಬೇಕಾಯಿತು. ಪ್ಲಾಸ್ಟಿಕ್ ಸರ್ಜನ್ ಮೊದಲೇ ವಿವರಿಸಿದ್ದರು. ದೇವರು ನೀಡಿರುವ ಮಾತಿನ ಶಕ್ತಿಯನ್ನು ನಾನು 100% ಕಾಪಿಡಲಾರೆ. ನಿಮ್ಮ ಪಾಲಿಗೆ ಎಷ್ಟು ದಕ್ಕುತ್ತದೋ ಅದು ದೇವರ ದಯೆ. ಅದನ್ನೇ, ಅಷ್ಟನ್ನೇ…ದಕ್ಕಿತೋ ! ದಕ್ಕಿತು ! (ಬಯಲಾಟದವರು ಹೇಳುವಂತೆ) ಎಂದು ಸಂತಸಪಡಬೇಕು ಎಂದರು.ಶಸ್ತ್ರಚಿಕಿತ್ಸಾ ಪುರಾಣಗಳು
ಸೆಪ್ಟೆಂಬರ್ 29ರಂದು ಸೈಫೀ ಆಸ್ಪತ್ರೆಗೆ ದಾಖಲು. ಮರುದಿನ 30ರಂದು ಮಧ್ಯಾಹ್ನ 1.30ಕ್ಕೆ ಶಸ್ತ್ರಚಿಕಿತ್ಸೆ ಆರಂಭ. ಸುಮಾರು 4 ಗಂಟೆ ಅವಧಿಯ ಶಸ್ತ್ರಕ್ರಿಯೆ ಎಂದು ನಿರ್ಧರಿಸಲಾಯಿತು. ಹಾಗೆಯೇ ದಾಖಲಾದೆ. 29ರ ರಾತ್ರಿ ನಿದ್ದೆ ಸುಳಿಯಲಿಲ್ಲ. ಕಣ್ಣಾಲಿಗಳು ಒಂದುಗೂಡಲೇ ಇಲ್ಲ. ಬದಿಯ ಹಾಸಿಗೆಯ ವೃದ್ಧರೊಬ್ಬರು ರಾತ್ರಿಯಿಡೀ ಕೂಗುತ್ತಲಿದ್ದರು. ” ಹೇ ಅಲ್ಲಾಹು ಮುಜೆ ಮೌತ್ ದೇ..ಹೇ ಮ್ಹೊಲಾ ಮುಜೆ ಮೌತ್ ದೇ” ಎಂದು. ಚಿಂತೆ ಮತ್ತು ಚಿತೆಗಳ ನಡುವಣದ ಚಿಂತನೆಗೆ ಹಚ್ಚುವ ಮಾತುಗಳು ಅವು. ಬೆಳಗಿನ ಜಾವ ಸ್ವಲ್ಪ ತೂಕಡಿಕೆ. ಪ್ರಾತಃಕಾಲ 5 ಗಂಟೆಯಿಂದ ನೀರಾಹಾರ ಉಪವಾಸ. ಸ್ನಾನಾದಿಗಳ ನಂತರ ಬರೇ ಕಾಯುವಿಕೆ. ಮಧ್ಯಾಹ್ನ 1ಗಂಟೆಗೆ ಬಂಡಿ ಸಮೇತ ಹಾಜರಾದರು ಸೈನಿಕರು. ಸಮರಾಂಗಣಕ್ಕೆ ಒಯ್ಯಲು. ಸಮವಸ್ತ್ರ ಮತ್ತೆ ಬದಲಿಸಲಾಯಿತು. ಬಂಡಿ ಮೇಲೆ ಮಲಗಿಸಲಾಯಿತು. 4ನೇ ಮಹಡಿಯ ವಸತಿಯಿಂದ 8ನೇ ಮಹಡಿಯ ಶಸ್ತ್ರಕ್ರಿಯಾ ಎಂಬ ರಣರಂಗಕ್ಕೆ. (ಸಂಪೂರ್ಣ 8ನೇ ಮಹಡಿ O.T ಗೆ ಮೀಸಲು)
ಮಧ್ಯಾಹ್ನ 1.30ಕ್ಕೆ ಒಳ ಹೋದ ಸಂಚಿತ ಪಾಪದ ಹೊರೆ ಹೊತ್ತು ಪವಡಿಸಿರುವ ನಾನೂ, ನನ್ನ ಬಂಡಿಯೂ ಮರಳಿ ಬಂದದ್ದು ಸಾಯಂಕಾಲ 6.30ಕ್ಕೆ. ಎಚ್ಚರ ಮತ್ತು ಮಂಪರಿನ ದ್ವಂದ್ವ ಸಮರ. ನೋವು ಇರುವುದರಿಂದಲೇ ಸಾವು ಬಂದಿಲ್ಲ ಎಂಬ ಅರಿವು. ಅರೆವಳಿಕೆ ವಿಜೃಂಭಿಸಿದಾಗ ಅರಿವು ಮರೆಯಾಗುತ್ತಿತ್ತು. ನಾಲಗೆಯ ಮೇಲ್ಪದರವನ್ನು ಸೀಳಿ ಲೋಹದ ಅಂಕುಶವೊಂದನ್ನು ಜೋಡಿಸಲಾಗಿತ್ತು. ಆ ಅಂಕುಶವನ್ನು ದಾರದಿಂದ ಬಂಧಿಸಿ, ಅದರ ಇನ್ನೊಂದು ತುದಿಯನ್ನು ಕೆಳ ತುಟಿಯಿಂದ ಕೆಳಗಿಳಿಸಿ ಗಲ್ಲಕ್ಕೆ ಬಲವಾಗಿ ಅಂಟಿಸಲಾಗಿತ್ತು. (ಬಣ್ಣದ ವೇಷದಂತೆ) ನಾಲಗೆ ಬಾಯಿಯೊಳಗೆ ಒದ್ದಾಡಿದಾಗ ದಾರ ಸಿಕ್ಕಿ ಬಂಧನದ ಬಂಧುತ್ವವನ್ನು ಸಾರುತ್ತಿತ್ತು. ಮೂರು ದಿನಗಳ ನಂತರ ಅದನ್ನು ತೆಗೆಯಲಾಯಿತು. ಅರ್ಬುದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದರು ವೈದ್ಯರು.
05/10/2024ಕ್ಕೆ ಮರಳಿ ಮನೆಗೆ ಎಂದು ನಿಶ್ಚಯವಾಯಿತು. 03/10/2024ಕ್ಕೆ ಬಂದ ಪ್ಲಾಸ್ಟಿಕ್ ಸರ್ಜನ್ ಕೆಲವೊಂದು ಕಡೆ ಗಾಯ ಒಣಗುತ್ತ ಇಲ್ಲ. ಅರ್ಬುದದ ವೈದ್ಯರಲ್ಲಿ ಮಾತನಾಡಿದ ಅವರು ಮತ್ತೆ 05/10/2024ಕ್ಕೆ ಮತ್ತೊಮ್ಮೆ ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ ಎಂದರು. ಸುಮಾರು ಎರಡೂವರೆ ಗಂಟೆ ಅವಧಿ ಎಂದರು. 05/10/2024 ರಂದು ಮತ್ತೆ ಅದೇ ಉಪವಾಸ. 12 ಗಂಟೆಗೆ ಬಂಡಿಯು, ಧೂತರೂ ಹಾಜರು. ಮತ್ತೆ ಅದೇ 8ನೇ ಮಹಡಿ. ಕೈಯ ನರಕ್ಕೆ ಅಳವಡಿಸಿರುವ ನಾಳದ ಮೂಲಕ ಅರೆವಳಿಕೆಯ ಔಷದ. “ಮತಿ ಹೀನನು ನಾನು, ಮಹಾ ಮಹೀಮನು” ಎನ್ನುವಷ್ಟರಲ್ಲಿಯೇ ಮತಿ ಹೀನನಾಗುತ್ತಿದ್ದೆ. ಇದೂ ಎರಡೂ ಸಲದ ಅನುಭವ. ಮತ್ತೆ ಮರಳಿ ಬಂದಾಗ ಸಾಯಂಕಾಲ 5.30.
ದಂತ ಛೇಢನ ಅಭಿಮಾನ ಭಂಗ
ಈ ಸಲ ಮೇಲ್ದವಡೆಯ ಎಡಭಾಗದ ಕೊನೆಯ ಎರಡು ಮತ್ತು ಕೆಳ ದವಡೆಯ ಕೊನೆಯ ಒಂದು ದಂತಗಳನ್ನು ಕೀಳಲಾಗಿತ್ತು. ನನಗೊಂದು ಅಭಿಮಾನವಿತ್ತು. ಈ ತನಕ 32 ದಂತಗಳು ಸರಿಯಾಗಿವೆ ಎಂದು. ಆದರೆ ಏಡಿಯ ಮೋಡಿಯ ಎದುರು ನನ್ನ ಅಭಿಮಾನದ ರಕ್ಷಣೆ ಸಾಧ್ಯವೇ?? ಕೊಳವೆಯ ಮೂಲಕ ನೀರು ಮತ್ತು ದ್ರವ ಆಹಾರ ಪೂರೈಕೆ. ಆ ಮೂಲಕ ಕಾಯವನ್ನು ಕಾಯುವ ಆರೈಕೆ.
ದಂತ ವೈದ್ಯರ ಭೇಟಿ
ಮೊದಲ ಮಹಡಿಯಲ್ಲಿರುವ ನಿಪುಣ ದಂತ ವೈದ್ಯರಲ್ಲಿಗೆ ಹೋದೆ. ಭೀಮ ದುರ್ಯೋಧನರ ಗದಾಯುದ್ಧದ ತಾಣದಂತಿರುವ ನನ್ನ ಬಾಯಿಯನ್ನು ತೋರಿಸಿದೆ. ಪ್ಲಾಸ್ಟಿಕ್ ಸರ್ಜರಿಯಿಂದ ಜರ್ಜರಿತವಾದ ನನ್ನ ಬಾಯಿಯ ಮೇಲ್ಚಾವಣಿ ಕೆಳಗಿಳಿದು ರಸನೆಗೆ ತಾಗುತ್ತಿತ್ತು. ಅದಕ್ಕೊಂದು ತಾತ್ಕಾಲಿಕ ತಟ್ಟೆ (Temporary Plate) ತಯಾರಿಸುವುದು ಅವರ ಉದ್ದೇಶ. ಎರಡು ಸಲ ಮಣ್ಣಿನಂತಹ ವಸ್ತು (DYE) ವನ್ನು ಒಂದು ತಟ್ಟೆಯಲ್ಲಿ ಹಾಕಿ ಮಾಪನ ಮಾಡಿದರು. ಬಾಯಿ ತೆರೆಯುವುದೇ ಕಷ್ಟವಾಗಿದ್ದ ನನಗೆ “ನೀರಿಳಿಯದ ಬಾಯಿಯೊಳಗೆ ನೀರಾನೆ ತುರುಕಿಸಿದಂತಾಯಿತು.”
ದಿನಾಂಕ 11/10/2024ರಂದು ಮರಳಿ ಮನೆಗೆ. ಮನೆಗೆ ಬಂದು ಮಸೂರದಲ್ಲಿ ಮುಸುಡಿ ನೋಡಿದಾಗ “ನಾನೀಗ ಮೂಳೆ ಚರ್ಮದ ಹೊದಿಕೆ ಮಾತ್ರ.” ಆನೆಯ ಸೊಂಡಿಲಿನಂತೆ ಮೂಗಿಗೆ ಕೊಳವೆ ನೇತು. ಮಲಗುವಾಗ ಸಂಭಾಳಿಸುವುದೇ ಕಷ್ಟ. ಆಹಾರ, ಔಷಧ ಸ್ವಲ್ಪ ದಪ್ಪವಾದರೂ ಒಪ್ಪದದು ಕೆಳಗಿಳಿಯಲು. ಆಹಾರ ನೀಡುವವರಿಗೆ ಒಂದು ಕಠಿಣ ಸವಾಲು. ಪರಿಶ್ರಮ. ರಗಳೆ, ಕಿರಿಕಿರಿ. ಒಟ್ಟಾರೆ ಪರದಾಟ. ಯಾವ ಜನುಮದ ಪುಣ್ಯದ ಫಲವೋ ? ಆಹಾರ ನೀಡುವವರು ಸಾಕ್ಷಾತ್ ಅನ್ನಪೂರ್ಣೆ. ಸದಾ ಪ್ರಸನ್ನೆ. ಬಿಡುಗಡೆ ಪತ್ರದ (ಡಿಸ್ಚಾರ್ಜ್ ಕಾರ್ಡ್) ಛಾಯ ಪ್ರತಿಮಾಡಿಸಿ ನನ್ನ ಸಜ್ಜೆಯ ಹತ್ತಿರವೇ ಅಂಟಿಸಿದ್ದರು. ಪ್ರಾತಃಕಾಲ 6ರಕ್ಕೆ ಆರಂಭವಾದರೆ ರಾತ್ರಿ 11ರ ಪರ್ಯಂತ 8 ಸಲ ಆಹಾರ, ಔಷಧವನ್ನು ಕೊಳವೆಯ ಮೂಲಕ ಪೂರೈಸಬೇಕಾಗಿತ್ತು. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಸಲಹಿದ ಮಾತೆಗೆ ಮಾತನ್ನಾಡಲಾರದ ನಾನು ಮೌನದಿಂದಲಿ ಮನಸಾರೆ ನಮಿಸುವೆನು.
ಮತ್ತೆ ಪರಿಶೀಲನೆಗೆ ಪರದಾಟ. ದಂತ ವೈದ್ಯರ ತಾತ್ಕಾಲಿಕ ತಟ್ಟೆ ತಯಾರಾಗಿತ್ತು. ದಿನದಲ್ಲಿ ಕನಿಷ್ಠ 16 -18 ಗಂಟೆಗಳ ಕಾಲ ಧರಿಸುವಂತೆ ಆಜ್ಞೆ. ಎರಡೂ ಕಡೆ ನಾಲ್ಕು ಉಕ್ಕಿನ ಹಿಡಿತಗಳಿವೆ. ಚೂಪಾಗಿಯೂ ವಕ್ರವಾಗಿಯೂ ಇವೆ. ಮೂಗಿನ ಕೊಳವೆ ಸೇವೆ ಯಥಾಸ್ಥಿತಿ ಮುಂದುವರಿಸಲು ಸಲಹೆ. ತಟ್ಟೆ ಸಿಕ್ಕಿಸಿಕೊಂಡರೆ ಸ್ವಲ್ಪ ಸಮಯದ ನಂತರ ಇಡೀ ಮೇಲ್ದವಡೆಯೇ ತರಗುಟ್ಟಿ ನಡುಗುವಂತಹ ನೋವು. ನೋವು ನಿವಾರಕ ಗುಳಿಗೆಗಳಿಗೆ ಶರಣು. ಅದರ ಶಕ್ತಿಗುಂದಿದ ಕೂಡಲೇ ಮತ್ತೆ ಒತ್ತರಿಸಿ ಬರುವ ನೋವು. ಸಾವಿಗೂ ನೋವಿಗೂ ಶಬ್ದಾಶಃ ಹತ್ತಿರದ ಸಂಬಂಧ. ಸಾವು ಎಲ್ಲ ನೋವು, ಸಂಕಟ, ಕಂಟಕಗಳ ಮುಕ್ತಿಧಾಮ. ನೋವು ಮಾತ್ರ ಕ್ಷಣಕ್ಷಣಕ್ಕೂ ತನ್ನ ಇರವನ್ನು ಸಾರುತ್ತ ಕೊಲ್ಲುತ್ತ ಇರುತ್ತದೆ. ಶಸ್ತ್ರಕ್ರಿಯೆಯ ನೋವು, ಮಾತನಾಡಲಾರಾದ ನೋವು. ದವಡೆಯ ನೋವು. ದಂತಗಳ ನೋವು. ಎಲುಬಿಲ್ಲದ ನಾಲಗೆಯ ನೋವು. ಏನೂ ಮಾಡಲಾಗದ ನೋವು. ಉಣ್ಣಲಾರದ ನೋವು. ಉಡಲಾರದ ನೋವು, ಮಾನಸಿಕ ನೋವು, ವಿವರಿಸಲಾಗದ ನೋವು. ಹತಾಶೆಯ ನೋವುಗಳು. ಆಗ ಯಾರೋ ಹೇಳಿದ್ದ ಮಾತುಗಳು ನೆನಪಾಗುತ್ತವೆ. “ನನ್ನ ಮಲಗುವ ಸಮಯ ನಿಶ್ಚಿತವಲ್ಲ. ನನ್ನ ಅಳುವಿನ ಸಮಯವೂ ನಿಶ್ಚಿತವಲ್ಲ. ಕೆಲವೊಮ್ಮೆ ಅತ್ತು ಅತ್ತು ಮಲಗುತ್ತೇನೆ. ಕೆಲವೊಮ್ಮೆ ಮಲಗಿಕೊಂಡು ಅಳುತ್ತೇನೆ.” ಇದು ನನ್ನಂತಹ ಲಕ್ಷೋಪಲಕ್ಷ ಅರ್ಬುದ ರೋಗಿಗಳ ನೋವೂ ಆಗಿದೆ. ಆಗಿರಬಹುದು. ಇನ್ನು ವಿಕಿರಣ ಚಿಕಿತ್ಸೆ ಅಥವಾ ಕಿಮೋ ಚಿಕಿತ್ಸೆಗೆ ಒಳಗಾದವರ ಪಾಡೇನು ಶ್ರೀಹರಿಯೇ!!
ದಿನಾಂಕ 24/10/2024ಕ್ಕೆ ಮತ್ತೆ ಆಸ್ಪತ್ರೆ ದರ್ಶನ. ಇಬ್ಬರೂ ವೈದ್ಯರ ಸಂದರ್ಶನ. ಮೂಗಿನ ಕೊಳವೆಗೆ ವಿಮೋಚನೆ. ಸುಮಾರು ಅರ್ಧ ಮೀಟರಿಗಿಂತ ಉದ್ದದ ಕೊಳವೆಯನ್ನು ಹೊರಗೆ ತೆಗೆಯವಾಗ ಕಣ್ಣಿಗೆ ಕತ್ತಲಾವರಿಸುತ್ತದೆ. ಆಹಾರ ಮಾತ್ರ ದ್ರವದಿಂದ ಘನಕ್ಕೆ ಏರಲಿಲ್ಲ. ಕೊಳವೆಯ ಬದಲಿಗೆ ನೈಸರ್ಗಿಕ ಬಾಯಿ. ವ್ಯತ್ಯಾಸವೆಂದರೆ ರುಚಿಯ ಅನುಭವವಾಗುತ್ತದೆ. ಅಪಾಯ ಉಂಟು. ಬಾಯಿಗೆ ಪೂರೈಸಿದ ನೀರು, ಆಹಾರ, ಔಷಧ ಮೂಗಿನಿಂದ ಹೊರಗೆ ಜಿಗಿಯುತ್ತವೆ. (ಮುಂ-ಬಾಯಲ್ಲಿ ಹಾಕಿದ್ದು ನಾಸಿಕದಲ್ಲಿ ಹೊರಬರುತ್ತದೆ) ಇಂದು ನವೆಂಬರ್ 5. ಎರಡೂ ಶಸ್ತ್ರಕ್ರಿಯೆಗಳು ನಡೆದು ಮಾಸವೊಂದು ಕಳೆದಿದೆ. ಇನ್ನೂ ಬಾಯಿಯ ಎಡಭಾಗ ತೆರೆಯುತ್ತ ಇಲ್ಲ. ಮೇಲಿನ ಹಲ್ಲುಗಳು ಕೆಳಗಿನ ಹಲ್ಲುಗಳ ಬಂಧುತ್ವನ್ನು ಧಿಕ್ಕರಿಸುತ್ತ ಇವೆ. ಇತ್ತ ನನ್ನ ಮನದ ನೋವು ಮಾಸುವಂತೆ ಕಾಣುತ್ತಿಲ್ಲ. ಬಾಯೊಳಗಿನ ಮಾತುಗಳು ಶಬ್ಧವಾಗಿ ಹೊರಬರುತ್ತಿಲ್ಲ. ಮಾತು ಮುತ್ತಾಗುವ ಮೊದಲೇ ಬತ್ತುತ್ತವೆ. ಹೊಯ್ದಾಡಿ ಸತ್ತು ಹೋಗುತ್ತವೆ. ಕೊನರುವ ಮೊದಲೇ ಕಮರುತ್ತವೆ. ಸ್ವರಗುಂದಿ ದೈನ್ಯತೆಯಿಂದ ಬಳಲುತ್ತವೆ. ಜೀವ ಕಳೆದುಕೊಂಡು ನಿರ್ಜೀವಗೊಳ್ಳುತ್ತವೆ. ಕೀಳರಿಮೆಯ ಭಾವ ಮೂಡಿಸುತ್ತವೆ. ಅಕ್ಷರಗಳು ಸ್ವರಭಾರವಿಲ್ಲದೆ ತಾತ್ಸರಗೊಳ್ಳುತ್ತವೆ. ನಾನು ಏನು ಹೇಳುತ್ತೇನೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ರಿಕ್ಷಾದವರು ತಿಳಿಯದೆ ಕಣ್ಣು ಕಣ್ಣು ಬಿಡುತ್ತಾರೆ. ಬರಲಾರೆ ಎನ್ನುತ್ತಾರೆ.
“ಮಾತಿನ ರಾಣಿ ವಾಗ್ದೇವಿ ಸರಸ್ವತಿ ದೇವಿಯ” ಹೆಸರನ್ನೇ ಉಚ್ಚರಿಸಲಾಗದ ಪರಿಸ್ಥಿತಿ. ಜಂಗಮವಾಣಿಯ ಕರೆಗಳನ್ನೂ ಉತ್ತರಿಸುವಂತಿಲ್ಲ. ಚಿಕ್ಕ ಚಿಕ್ಕ ಕಾಗದದ ತುಂಡುಗಳಲ್ಲಿ ಬರೆದು ತೋರಿಸಬೇಕಾಗುತ್ತದೆ. ಇಲ್ಲವೇ ವಾಟ್ಸಪ್ ಸಂದೇಶ ಕಳುಹಿಸಬೇಕಾಗುತ್ತದೆ. ವ್ಯಾಪಾರ ಮಾತಿಲ್ಲದೆ ಮೌನವಾಗಿದೆ. ವ್ಯವಹಾರ ಗೌಣವಾಗಿದೆ, ಸೊರಗಿದೆ. ಸಂಬಂಧಗಳು ಸಂಕುಚಿತಗೊಂಡಿವೆ. ಏಕೋ ಏನೋ??? ನನ್ನ ಹತ್ತಿರದ ಬಂಧು ಒಬ್ಬರಿಗೆ ನಾನು ಬದುಕಬೇಕು ಎಂಬ ಅಧಮ್ಯ ಬಯಕೆ. 2008 ರಿಂದ ಈ ದಿನದ ಪರ್ಯಂತಲೂ ನಿರಂತರ ಶ್ರಮಿಸುತ್ತಿದ್ದಾರೆ. ತನ್ನೆಲ್ಲಾ ಕೆಲಸ ಕಾರ್ಯಗಳನ್ನು ನನಗಾಗಿ ಬಿಟ್ಟು ತನು ಮನ ಧನದಿಂದ ರಕ್ಷಿಸುತ್ತಿದ್ದಾರೆ. ಇದೊಂದು ಮಾತಿನಿಂದ ವಿವರಿಸಲಾಗದ ಮಹತ್ತು. ಮೌನದಿಂದಲೇ ನಿತ್ಯ ಸ್ಮರಿಸಬೇಕಾಗಿದೆ. ವೈದ್ಯರ ಪ್ರಕಾರ ಇನೈದು ವರ್ಷ ನಿಯಮಿತವಾದ ತಪಾಸಣೆಯಲ್ಲಿರಬೇಕು. ಏಡಿ ಕೇಡಿತನದಿಂದ ಮೋಡಿ ಮಾಡಿ ಕಾಡಿಸಿಯಾನು. ಬಾಡಿಸಿಯಾನು. ಪೀಡಿಸಿಯಾನು. ಕಡೆಗೆ ಮಡಿಸಿ ಚಟ್ಟಕ್ಕೇರಿಸಿಯಾನು. ಈ ಮಧ್ಯೆ ಸ್ವಾಭಾವಿಕವಾದ ಮರಣ ಬರಲಿ. ಮರಣವೇ ಮಹಾ ನವಮಿಯಾಗಲಿ ಎಂದು ನಿಯಮಕ, ನಿರ್ಮಿತಿಯರಲ್ಲಿ ಕರಜೋಡಿ ವಿನಂತಿ. ಕ್ಷುದ್ರ ಏಡಿಗೆ ಹೇಡಿಯಂತೆ ಹೆದರಿ, ಬೆದರಿ ಬದುಕಲುಂಟೇ?? ಇಲ್ಲವೇ ಇಲ್ಲ.
Informations:
HOSPITAL: SAIFEE HOSPITAL
MAHARSHI KARVE MARG, OPP: CHARNY ROAD RAILWAY STATION, MUMBAI – 400004
ONCOLOGIST: DR KAMRAN KHAN
(MOB: 9820066043)
PLASTIC SURGEON: DR AKSHAY DESHPANDE
(MOB: 9820558542)
TYPE OF CANCER : CARCINOMA
PET: POSITRON EMISSION TOMOGRAPHY
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post