ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಬಹುಜನರ ನಿರೀಕ್ಷಿತ ನಿವೃತ್ತ ಯುದ್ಧ ವಿಮಾನ ಇಂದು ನಗರಕ್ಕೆ ಆಗಮಿಸಿದ್ದು, ಸಂತಸ ಮನೆ ಮಾಡಿದೆ. ಯುದ್ಧ ವಿಮಾನವನ್ನು ನಗರದ ಫ್ರೀಡಂ ಪಾರ್ಕ್’ಗೆ(ಅಲ್ಲಮ ಪ್ರಭು ಮೈದಾನ) ಇಂದು ತಂದು ಇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಯುದ್ಧ ತರಬೇತಿಯಲ್ಲಿ ಬಳಸಲಾದ ಈ ಯುದ್ಧ ವಿಮಾನವನ್ನು ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವರು ಶಿವಮೊಗ್ಗಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಇದಕ್ಕಾಗಿ ಕೇಂದ್ರಕ್ಕೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಳೆದ ಬಾರಿ ಇದೇ ರೀತಿ ಮನವಿ ಮಾಡಿದಾಗ ಯುದ್ಧ ಟ್ಯಾಂಕರನ್ನು ಕೊಟ್ಟಿದ್ದರು. ಈ ಬಾರಿ 1960ರಲ್ಲಿ ನಿರ್ಮಾಣವಾದ ಈ ಯುದ್ದ ವಿಮಾನವನ್ನು 2023ಕ್ಕೆ ನಿವೃತ್ತಿಗೊಳಿಸಿ ಶಿವಮೊಗ್ಗಕ್ಕೆ ನೀಡಲಾಗಿದೆ. ಇಂದು ನಗರಕ್ಕೆ ತರಲಾಗಿದೆ ಎಂದರು.
ಇದರ ಜೊತೆಯಲ್ಲಿಯೇ ವಾಯುಸೇನೆ ಇಬ್ಬರು ಅಧಿಕಾರಿಗಳೂ ಸಹ ಆಗಮಿಸಿದ್ದು, ಶೀಘ್ರ ಸ್ಥಾಪಿಸುತ್ತಾರೆ ಎಂದರು.
ಮುಂದಿನ ದಿನಗಳಲ್ಲಿ ನೌಕಾಪಡೆಯಿಂದಲೂ ಸಹ ಕೊಡುಗೆ ನೀಡುವಂತೆ ಕೋರಲಾಗಿದೆ. ಈಗ ಹೇಗಿದ್ದರೂ ಸಿಗಂಧೂರು ಸೇತುವೆ ಸಂಚಾರ ಆರಂಭವಾಗಿದೆ. ಅಲ್ಲಿ ಅದನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದು ಸಾಧ್ಯವಾದರೆ ಯುವ ಜನರಿಗೆ ಪ್ರೇರಣೆಯಾಗುತ್ತದೆ ಎಂದರು.
ಸ್ವತಂತ್ರ ಹೋರಾಟದ ಸಮಯದಲ್ಲಿ ಸ್ವಾತಂತ್ರವನ್ನು ಘೋಷಣೆ ಮಾಡಿಕೊಂಡ ಗ್ರಾಮ ನಮ್ಮ ಜಿಲ್ಲೆಯದ್ದು. ಇಂತಹ ಜಿಲ್ಲೆಯಲ್ಲಿ ಯುವಕರಿಗೆ ಈ ಮೂಲಕ ಪ್ರೇರಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post