ಜುಲೈ 12 ಮಧ್ಯಾಹ್ನ 2.14 ನನಗೆ ಸುಮತಣ್ಣನ ನಾವೆಲ್ಲ ಸುಮತೀಂದ್ರ ನಾಡಿಗರನ್ನು ಕರೆಯುತ್ತಿದ್ದದ್ದು ಹಾಗೆ. ನಮ್ಮ ರಾಘಣ್ಣ ಮಾವನ ಮಗ. ಏಕವಚನದ ಸಲುಗೆ..
ಫೋನ್ ಬಂತು. ನಗುತ್ತಲೇ ಶುರು ಮಾಡಿದ. ಸುಧೀ.. ನಿನ್ನ ಮಗನ ಮದುವೆ ದಪ್ಪರಟ್ಟಿನ ಕಾರ್ಡನ್ನು ಬಹಳ ನೆನಪಿನಿಂದ ಇಟ್ಟುಕೊಂಡೆ. ನೋಡೀಗ ಮದುವೆ ಆದಮೇಲೆ ಫೋನ್ ಮಾಡ್ತಾ ಇದೀನಿ.. ಎನ್ನುತ್ತಾ ನಗುತ್ತಲೇ ಇದ್ದ. ಮೊದಲಲ್ಲೇ ನಾನು ಆ ಮರೆಯಾದ ನಗುವನ್ನು, ನಾನು ಮರೆಯಲಾಗದಂತೆ ಮಾಡಿದ ವಿಧಿವೈಚಿತ್ರವನ್ನು ನೆನೆದು ಈ ಲೇಖನವನ್ನು ಆರಂಭಿಸಬೇಕಾಯಿತು.
ಇಂದು ಬೆಳಿಗ್ಗೆಯೇ ಅವರ ಸಾವಿನ ಸುದ್ದಿಯನ್ನು ವತ್ಸ ನನಗೆ ಫೋನ್ ಮೂಲಕ ತಿಳಿಸಿದ. ಇದೇ ಆಗಸ್‌ಟ್ ಎರಡರಂದು ನನಗೆ ಅವರ ಪತ್ರಕೂಡ ಬಂತು. ಎಂಭತ್ಮೂರು ವಯಸ್ಸಿನ ನಡುಗುವ ಕೈಗಳಿಂದ ಬರೆದ ಅವರ ಕೊನೇ ಬರಹ ಇದಾಗಿರಲಿಕ್ಕೂ ಸಾಕು. ಸದಾ ನಗುವ, ಪ್ರತಿಯೊಂದೂ ಪದಗಳನ್ನು ಸ್ಪಷ್ಟ ಅರ್ಥತುಂಬಿ ಮಾತಾಡುವ ಸಾರಸ್ವತ ನಮ್ಮ ನಾಡಿಗರು.
ನಮ್ಮ ಚನ್ನಗಿರಿ ಸಮೀಪದ ದೇವರಹಳ್ಳಿ ಅವರ ಸ್ಥಳ. ಸುಮಾರು ಅರವತ್ತರ ದಶಕದಲ್ಲಿ ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಆಗಿ ನಿವೃತ್ತಿಗೆ ಹತ್ತಿರ ಬಂದಿದ್ದ ನಮ್ಮ ಮಾವ ರಾಘವೇಂದ್ರರಾಯರು ದೇವರಹಳ್ಳಿ ನಾಡಿಗ ಮನೆತನದವರು. ನಾಡಿಗ ಸೀತಾರಾಮಜ್ಜನವರ ಎರಡನೇ ಮಗ ರಾಘಣ್ಣ ಮಾವ. ರಾಘವೇಂದ್ರರಾಯರ ಮೊದಲ ಮಗ ಸುಮತೀಂದ್ರ.
ತಾಯಿ ಸುಬ್ಬಮ್ಮ ಅವರು ಕಳಸದವರು. ನಾಡಿಗರ ಜನ್ಮ ಕಳಸದಲ್ಲಿ. ತಂದೆ ಪೋಲಿಸ್ ಇಲಾಖೆಯಲ್ಲಿದ್ದರಿಂದ ಪ್ರಾಥಮಿಕ ಶಿಕ್ಷಣ ಕಳಸ, ಸೊರಬ, ಹೈಸ್ಕೂಲು ಶಿರಾಳಕೊಪ್ಪ, ಸಾಗರ, ಇಂಟರ್ ಮೀಡಿಯೆಟ್ ಶಿವಮೊಗ್ಗದಲ್ಲಿ ವ್ಯಾಸಂಗ ಮಾಡಿದರು. ಬೆಂಗಳೂರಿನಲ್ಲೇ ಬಿ.ಎ. ಆನರ್ಸ್ ಮಾಡಿ ನಂತರ ಎಂಎ ಪದವಿ ಪಡೆದರು.
ಸಾಹಿತ್ಯದ ಎಳೆ ಅವರ ಅಜ್ಜ ಸೀತಾರಾಮರಾವ್ ನಾಡಿಗರಿಂದ ರಕ್ತಗತವಾಗಿ ಬಂದಿತ್ತು. ನಾನು ಎಳೆತನದಲ್ಲಿ ಆಗಾಗ ದೇವರಹಳ್ಳಿಗೆ ಹೋಗುವ ಪ್ರಸಂಗ ಬರುತ್ತಿತ್ತು. ಒಮ್ಮೆ ಸೀತಾರಾಮಜ್ಜ ಅವರು ಬರೆದ ಕಂಠೀರವ ನರಸರಾಜ ವಿಜಯ ಎಂಬ ಬಹುದಪ್ಪನಾದ ಕಾಗದಕಡತವನ್ನು ನನಗೆ ಸೀತಾರಾಮಜ್ಜನ ಕೊನೇಮಗ ಅನಂತಪ್ಪ ಮಾವ ತೋರಿಸಿದ್ದರು. ಅದು ಹಳೆಗನ್ನಡದಲ್ಲಿತ್ತು. ಈಗ ಬಹಳ ವರ್ಷಗಳೇ ಆಗಿದೆ. ಆ ಕೃತಿ ಎಲ್ಲಿದೆ ಗೊತ್ತಿಲ್ಲ.
ನಾಡಿಗರು ಬಹಳ ಸ್ವಾಭಿಮಾನಿ. ಒಂದು ಕಡೆ ನಿಲ್ಲುವವರಲ್ಲ. ಬೆಳಗಾವಿಯ ಲಿಂಗರಾಜ ಕಾಲೇಜು, ಗೋವೆಯ ಕ್ಸೆವಿಯರ್ ಕಾಲೇಜು ಇಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು.
ಫೆಲೋಶಿಪ್ ದೊರೆತು ಅಮೆರಿಕಾಗೆ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ನಂತರ ಬೆಂಗಳೂರಿಗೆ ಬಂದು ಸ್ವಲ್ಪಕಾಲ ನೌಕರಿ ದೊರೆಯದೆ ಕರ್ನಾಟಕ ಬುಕ್ ಹೌಸ್ ನಡೆಸಿದರು.
ಆಗ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಅವರ ಪುಸ್ತಕದಂಗಡಿ ಸಾಹಿತಿಗಳ ತಂಗುದಾಣವಾಗಿತ್ತು. ನಾನು ಗೋಪಾಲಕೃಷ್ಣ ಅಡಿಗರನ್ನು ಭೇಟಿ ಮಾಡುವ ಪ್ರಸಂಗ ಬಂದದ್ದು ಆಲ್ಲಿಯೆ. ಪುಸ್ತಕದಂಗಡಿ ಆಯಿತು, ಇಲ್ಲ ಬೋಂಡ ಅಂಗಡಿಯಾಯಿತು, ಗೌರವಸ್ಥ ಸಂಪಾದನೆಗೆ ಮಾರ್ಗಗಳಿವೆ ಸುಧೀ… ಎಂದು ನನ್ನೊಂದಿಗೆ ಮಾತಾಡಿದ್ದುಂಟು. ಆಮೇಲೆ ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು.
ಚನ್ನಗಿರಿಯಲ್ಲಿ ನಾನು ತರುಣ ಭಾರತಿ ಸಂಸ್ಥೆಯ ಮೂಲಕ ಮೊದಲಬಾರಿಗೆ ತಾಲೂಕು ಕವಿಗೋಷ್ಠಿ ನಡೆಸಿದಾಗ ನನ್ನ ಕರೆಗೆ ಪ್ರೀತಿಯಿಂದ ಆಗಮಿಸಿದ್ದರು. ಆಗಿನ ಕಾಲಕ್ಕೆ ಅಮೆರಿಕಾಗೆ ಹೋಗಿ ಬಂದವರೆಂದರೆ ಮಾನಸಿಕ ದೂರ ಕಾಡುವ ಸಾಂಪ್ರದಾಯಿಕ ಭಾನನೆ. ಆದರೆ ನಮ್ಮ ಮನೆಗೆ ಬಂದಾಗ ಸೀದಾ ಅಡಿಗೆ ಮನೆಗೆ ಬಂದು ಏನ್ ವಿಮಲಕ್ಕ.. ಬಿಸಿಬಿಸಿ ಕಾಫಿ ಮಾಡ್ತೀಯಾ? ಎನ್ನುತ್ತಾ ಚಕ್ಕಂಬಕ್ಳ ಹಾಕಿ ಕುಳಿತು ಆತ್ಮೀಯವಾಗಿ ನಮ್ಮ ತಾಯಿಯೊಂದಿಗೆ ಮಾತಿಗಿಳಿದಿದ್ದರು.
ನಮ್ಮ ಕವಿಗೋಷ್ಠಿ ನಂತರ ಅಂದೇ ನಡೆದ ರೋಟರಿ ಕ್ಲಬ್ ಕಿರುಸಭೆಯಲ್ಲಿ ಅವರು ಮಾತಾಡಿದ ವಾಕ್ಯ ನನ್ನ ಕಿವಿಯಲ್ಲಿ ಮೊರೆಯುತ್ತಿದೆ. ಜೀವನದಲ್ಲಿ ಯಾರಿಗೆ ಯಾರೂ ಆಳಲ್ಲ. ಒಬ್ಬರನ್ನು ಒಬ್ಬರು ಕೀಳಾಗಿ ಕಾಣಬಾರದು. ಪ್ರತಿಯೊಬ್ಬಜೀವಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ನನ್ನ ವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ನೌಕರಿ ನಡೆಸುವ ಸಂಸ್ಥೆಯಲ್ಲಿ ನನಗೆ ಧಕ್ಕೆಯಾದರೆ ಸಹಿಸಿಕೊಳ್ಳುವುದಿಲ್ಲ. ಸದಾ ನನ್ನ ಕೋಟಿನ ಜೇಬಿನಲ್ಲಿ ರಾಜೀನಾಮೆ ಪತ್ರ ರೆಡಿ ಇಟ್ಟುಕೊಂಡಿರುವೆ.
ನಾಡಿಗರು ನನಗೆ ಬಹಳ ಪ್ರಿಯರಾದವರು. ನಾನು ಮುಂಚಿನ ದಿನಗಳಲ್ಲಿ ನನ್ನ ಕತೆಗಳನ್ನು ಅವರಿಗೆ ಓದಲು ಕೊಡುತ್ತಿದ್ದೆ. ಒಮ್ಮೆ ಮಲ್ಲಿಗೆ ಕಥಾಸ್ಪರ್ಧೆಗೆ ಕತೆ ಕಳಿಸಿದ್ದೆ. ನನಗೆ ಅಗತ್ಯವಿತ್ತು ಪ್ರಕಟಿಸಿದ್ದೇನೆ, ಓದು ಅಂತ ಹೇಳಿದ್ದರು. ಭದ್ರಾವತಿಯಲ್ಲಿದ್ದಾಗ ಮನೆಗೆ ಬಂದಿದ್ದರು. ದಾವಣಗೆರೆ ಪರಿಸರ ಕುರಿತ ಕಥೆಯೊಂದನ್ನು ಅವರಿಗೆ ಓದಲು ಕೊಟ್ಟೆ. ಬಹಳ ಮಂದಗತಿಯ ವಿವರಣೆಯಿದೆ. ಕಂಟೆಂಟ್ ತುಂಬ ಚೆನ್ನಾಗಿದೆ. ಜಾಸ್ತಿಪುಟಗಳಾಗುತ್ತೇನೋ… ಎಂದಿದ್ದರು. ನೆನಪುಗಳು ಓಡುತ್ತವೆ.
ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರದೂ ಒಂದು ಪುಸ್ತಕ ಮಳಿಗೆ ಇತ್ತು. ನಾನು ಎರಡುದಿನ ಅವರೊಟ್ಟಿಗೆ ಪುಸ್ತಕ ವ್ಯಾಪಾರದಲ್ಲಿ ಸಹಕರಿಸಿದೆ. ಕೊನೇದಿನ ಮಳಿಗೆ ವೈಂಡಪ್ ಮಾಡುವಾಗ ತಮ್ಮಾ ನಾನು ನಿನಗೆ ದುಡ್ಡು ಕೊಡೋದಿಲ್ಲ. ಬದಲಿಗೆ ಈ ಪುಸ್ತಕಗಳನ್ನು ಕೊಡುತ್ತಿದ್ದೇನೆ. ನಿನ್ನ ಸಾಹಿತ್ಯಾಸಕ್ತಿಗೆ ಸಹಾಯವಾಗುತ್ತೆ. ತಗೋ.. ಅಂತ ಪುಸ್ತಕಗಳನ್ನು ಕೊಟ್ಟರು. ಆಗ ನಾನು ಪದವಿ ಅಭ್ಯಾಸ ಮಾಡುತ್ತಿದ್ದೆ. ಅಷ್ಟೊಂದು ಪುಸ್ತಕಗಳಲ್ಲಿ ಪ್ರಸಿದ್ಧ ಕವಿ ವಾಲ್‌ಟ್ ವಿಟ್ ಮನ್ ನ ಲೀವ್‌ಸ್ ಆಫ್ ಗ್ರಾಸ್ ಇತ್ತು. ಇವತ್ತಿಗೂ ಅದನ್ನು ಜೋಪಾನವಾಗಿಟ್ಟುಕೊಂಡಿರುವೆ. ಇಂದು ಅದು ನೆನಪಿನ ಸಂಕೇತ.
ಸುಮತೀಂದ್ರನಾಡಿಗರು ಕತೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕಗಳ ಅನುವಾದ ಹೀಗೆ ಬರವಣಿಗೆ ಸಿದ್ಧಹಸ್ತರು. ಮಕ್ಕಳ ಬಗ್ಗೆ ಅಪಾರ ಒಲವಿನಿಂದ ಕವಿತೆಗಳ ಸಂಕಲನ ತಂದಿದ್ದಾರೆ. ಬೇಂದ್ರೆ, ಅಡಿಗರು ಅವರ ಪ್ರೀತಿಯ ಕವಿಗಳು. ಬೇಂದ್ರೆ ಕಾವ್ಯದ ವಿಭಿನ್ನ ನೆಲೆಗಳು ಅವರ ಪಿಎಚ್‌ಡಿ ಮಹಾಪ್ರಬಂಧ. ಅಡಿಗರನ್ನಂತೂ ಅರೆದು ಕುಡಿದಿದ್ದಾರೆ.
ಅಡಿಗರ ಕಾವ್ಯ ಕೃತಿ ಅಡಿಗರ ಕಾವ್ಯದ ಹಿನ್ನೆಲೆ-ಮುನ್ನೆಲೆಗಳನ್ನು ಅಭ್ಯಾಸ ಮಾಡುವವರಿಗೆ ಒಂದು ಪ್ರವೇಶಿಕೆ. ಸಾಹಸ ಮಕ್ಕಳಿಗೆಂದೇ ಬರೆದ ರೋಚಕ ಕಾದಂಬರಿ.
ಕಪ್ಪದೇವತೆ ಕವನ ಸಂಕಲನ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ. ಅವರ ಬಹುಕಾಲ ನಿಲ್ಲುವ ಕೃತಿಯೆಂದರೆ ದಾಂಪತ್ಯ ಗೀತ. ಕಳೆದ ತಿಂಗಳು ಫೋನ್ ಮಾಡಿದಾಗ ಆತ್ಮಕತೆ ಬರೀತಾ ಇದ್ದೀಯ? ಎಂದು ಕೇಳಿದ್ದಕ್ಕೆ ದಾಂಪತ್ಯ ಗೀತೆ ನನ್ನ ಆತ್ಮಕತೆ ಎಂದಿದ್ದರು. ಆ ಕೃತಿ ಬೆಂಗಾಳಿ, ಇಂಗ್ಲೀಷ್, ಹಿಂದಿಗೆ ಅನುವಾದವಾಗಿ ನಾಡಿಗರ ಹೆಸರನ್ನು ಅನ್ಯ ಭಾಷಿಗರ ಅಂಗಳದಲ್ಲೂ ಬೆಳಗುವಂತೆ ಮಾಡಿದೆ.
ಸಮಕಾಲೀನರಾದ ಲಂಕೇಶ್, ಅನಂತಮೂರ್ತಿ, ನಿಸಾರ್ ಮುಂತಾದವರ ಸಾಲಿನಲ್ಲಿ ಅಷ್ಟೇ ಸಮರ್ಥರಾಗಿ ನಿಲ್ಲುವ ನಾಡಿಗರಿಗೆ ವಿಮರ್ಶೆಯ ನ್ಯಾಯ ಅವರ ಕೃತಿಗಳಿಗೆ ವ್ಯಾಪಕವಾಗಿ ದೊರಕಲಿಲ್ಲ. ಸ್ಥಾನಮಾನಗಳ ಹಿಂದೋಡಲಿಲ್ಲ. ಅದನ್ನೇ ಅವರು ವ್ಯಸನವಾಗಿಟ್ಟುಕೊಳ್ಳದೇ ಬರೆದರು. ಸಮಕಾಲೀನರೊಂದಗೆ ಅವರ ಸಾಹಿತ್ಯಕ ಜಗಳ ತಾತ್ವಿಕ ವಾಗ್ವಾದವೇ ಹೊರತು ವೈಷಮ್ಯರಹಿತವಾಗಿತ್ತು. ನ್ಯಾಷನಲ್ ಬುಕ್‌ಟ್ರಸ್‌ಟ್ ನ ಅಧ್ಯಕ್ಷರಾಗುವ ಗೌರವ ಅವರನ್ನು ಅರಸಿಬಂತು. ನವದೆಹಲಿಯಲ್ಲಿ ಅವರನ್ನ ಭೇಟಿಯಾದಾಗ ನನ್ನೊಟ್ಟಿಗಿದ್ದ ಮಗ ಸುಜಯನಿಗೆ ಮಕ್ಕಳ ಕಾಮಿಕ್‌ಸ್ ಸಾಹಿತ್ಯ ಪುಸ್ತಕಗಳನ್ನು ಪ್ರೀತಿಯಿಂದ ನೀಡಿದ್ದರು. ಅವರು ದೇಶೀಯ ಭಾಷಾ ಸಾಹಿತ್ಯವನ್ನು ವಿದೇಶಗಲ್ಲಿ ಪರಿಚಯಿಸುವ ಟ್ರಸ್‌ಟ್ ಕಾರ್ಯಕ್ರಮಗಳ ಯೋಚನೆಗಳನ್ನು ಹಂಚಿಕೊಡಿದ್ದರು.
ಈಗ ನಾಡಿಗರಿಲ್ಲ. ಆದರೆ ಅವರ ಕಾವ್ಯಗಳಿವೆ… ವಿಮರ್ಶೆಗಳಿವೆ. ಕನ್ನಡ ಸಾಹಿತ್ಯಾಭಿಲಾಷಿಗಳಿಗೆ ಅವೇ ಪೂರಕ ದಿಕ್ಸೂಚಿಗಳು. ಅವರೊಟ್ಟಿಗೆ ಈಚೆಗಷ್ಟೇ ಫೋನಿನಲ್ಲಿ ಮಾತಾಡಿದಾಗ ಕೇಳಿದ ನನ್ನ ಪ್ರಶ್ನೆ ಬೇರೆ ಏನಾದರೂ ಬರವಣಿಗೆ ನಡೀತಾ ಇದ್ಯಾ? ಅವರಿಗೆ ಆರೋಗ್ಯ ಕೈ ಕೊಡುತಿದ್ದರೂ ಬರವಣಿಗೆ ಬಗ್ಗೆ ಉತ್ಸಾಹ ಶ್ರೀವತ್ಸ ಸ್ಮತಿ ಬರಿತಾ ಇದ್ದೀನಿ ಅಂತ ಹೇಳಿದ್ದರು.
ಕಾವ್ಯವನ್ನು ಹೇಗೆ ವಾಚಿಸಬೇಕೆಂಬ ಅವರ ವರಸೆಗಳು ಅವರು ಕವಿತೆಗಳನ್ನು ವಾಚಿಸುವ ಸಮಯದಲ್ಲೇ ಗ್ರಹಿಸಬೇಕು. ಚನ್ನಗಿರಿಗೆ ಬಂದಾಗ ನಮ್ಮ ಮನೆಯಲ್ಲಿ ಅವರು ವಾಚಿಸಿದ ಜೋಗಿ, ದಾಂಪತ್ಯಗೀತೆ, ಪಂಚಭೂತಗಳು.. ಪದ್ಯಗಳ ವಾಚನ ಅವಿಸ್ಮರಣೀಯ.
ನುಡಿನಮನ ಲೇಖನ: ಡಾ. ಚನ್ನಗಿರಿ ಸುಧೀಂದ್ರ
Discussion about this post